ADVERTISEMENT

ನುಡಿ ಬೆಳಗು | ದೇಶದ ಭವಿಷ್ಯ

ಪಿ. ಚಂದ್ರಿಕಾ
Published 5 ಆಗಸ್ಟ್ 2024, 23:30 IST
Last Updated 5 ಆಗಸ್ಟ್ 2024, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಭಾರತ ಸ್ವತಂತ್ರವಾಗುವ ಹೊತ್ತು. ಬಿಡುಗಡೆಯ ಸಂಕೇತವಾಗಿ ಅಧಿಕಾರವನ್ನು ಹಸ್ತಾಂತರಿಸುವ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮಕ್ಕೆ ಗಾಂಧೀಜಿಯವರನ್ನು ಕರೆತರಲು ತಮ್ಮ ಪ್ರತಿನಿಧಿಯೊಬ್ಬರನ್ನು ಕಳುಹಿಸಿದ್ದರು. ಅಷ್ಟು ಹೊತ್ತಿಗಾಗಲೆ ದೇಶ ವಿಭಜನೆಯ ದಳ್ಳುರಿಯಲ್ಲಿ ಸಿಕ್ಕು ನಲುಗಿಬಿಟ್ಟಿತ್ತು. ಸ್ವಾತಂತ್ರ್ಯಕ್ಕಾಗಿ ಕನಸಿದ್ದ ಗಾಂಧಿಗೆ ಆ ಕನಸು ಮರೆತುಹೋಗಿತ್ತು. ಹಿಂಸಾಚಾರದ ನಡುವೆಯೇ ಗಾಂಧೀಜಿ ಕಲ್ಕತ್ತಾದ ಬೀದಿ ಬೀದಿಗಳಲ್ಲಿ ಸುತ್ತುತ್ತಾ, ಸಹಿಷ್ಣುತೆಯ ಮಾತುಗಳನ್ನಾಡುತ್ತಾ ಒಡೆಯುತ್ತಿದ್ದ ಮನಸುಗಳನ್ನು ಒಂದು ಮಾಡುವ ಕೆಲಸದಲ್ಲಿ ತೊಡಗಿದ್ದರು.

ಗಾಂಧೀಜಿಯವರಿಗೆ ನೆಹರೂ ಪಟೇಲರು ಕಳಿಸಿದ್ದ ಆಹ್ವಾನದ ಪತ್ರವನ್ನು ಪ್ರತಿನಿಧಿಯು  ನೀಡಿ, ‘ಇಡೀ ದೇಶ ಬಿಡುಗಡೆಗೊಳ್ಳುವಾಗ ಈ ಕನಸಿಗಾಗಿ ಹೋರಾಡಿದ ನೀವೂ ನಮ್ಮೊಂದಿಗಿರಬೇಕು ಎನ್ನುವ ಸಂದೇಶನ್ನು ಕಳಿಸಿದ್ದಾರೆ. ದಯವಿಟ್ಟು ನನ್ನೊಂದಿಗೆ ಬನ್ನಿ’ ಎನ್ನುತ್ತಾನೆ. ಪತ್ರವನ್ನು ಓದಿದ ಗಾಂಧಿ ಏನನ್ನೂ ಪ್ರತಿಕ್ರಿಯಿಸದೆ ಆ ಪತ್ರವನ್ನು ಹಿಂದಿರುಗಿಸುತ್ತಾರೆ. ಅದರಿಂದ ವಿಚಲಿತಗೊಂಡ ಪ್ರತಿನಿಧಿ, ‘ಅಂದರೆ ನಿಮ್ಮ ಉದ್ದೇಶ ದೆಹಲಿಗೆ ಬರುವುದಿಲ್ಲ ಎಂದೇ?! ಮಾನ್ಯ ಗಾಂಧೀಜಿಯವರೇ ನಿಮ್ಮ ಕನಸಿನ ಭಾರತ ರೂಪುಗೊಳ್ಳುತ್ತಿದೆ. ಇದು ನಿಮಗೆ ಸಂತೋಷವನ್ನು ಕೊಡುವುದಿಲ್ಲವೇ?’ ಎನ್ನುತ್ತಾನೆ. ಗಾಂಧೀಜಿ ಅವನನ್ನು ದಿಟ್ಟಿಸಿ, ‘ನಿಜ ಸ್ವಾತಂತ್ರ್ಯ ನನ್ನದು ಮಾತ್ರವಲ್ಲ 33 ಕೋಟಿ ಭಾರತೀಯರ ಕನಸು. ಆದರೆ ಆ ಕನಸು ಸಾಕಾರವಾಗುವ ಮುನ್ನವೇ ದೇಶ ನಲುಗಿ, ಇಬ್ಭಾಗವಾಗುತ್ತಿದೆ. ಈ ಹೊತ್ತಲ್ಲಿ ತ್ರಿವರ್ಣಧ್ವಜ ಹಾರುವುದು ಎಷ್ಟು ಮುಖ್ಯವೋ ಹಿಂಸೆಯನ್ನು ತಡೆಯುವುದೂ ಅಷ್ಟೇ ಮುಖ್ಯ.  ನನಗೀಗ ಇಲ್ಲಿ ಕೆಲಸವಿದೆ’ ಎನ್ನುತ್ತಾರೆ. ಆ ದೊಡ್ಡ ಕಾರ್ಯಕ್ರಮಕ್ಕೆ ಗಾಂಧೀಜಿ ಬರುವುದಿಲ್ಲ ಎನ್ನುವ ವಿಷಯ ಸ್ಪಷ್ಟವಾದಾಗ ಖೇದಗೊಂಡ ಪ್ರತಿನಿಧಿ, ‘ಹಾಗಾದರೆ ಸಂದೇಶವನ್ನೇನಾದರೂ ಕೊಡುವಿರಾ?’ ಎಂದು ಕೇಳುತ್ತಾನೆ. ಆ ಪ್ರಶ್ನೆಗೆ ಗಾಂಧೀಜಿ ಅಲ್ಲಿದ್ದ ಮರದ ಮೇಲಕ್ಕೆ ನೋಡುತ್ತಾರೆ. ಕಣ್ಣು ಸಂಕುಚಿತಗೊಳ್ಳುತ್ತದೆ. ಹಣ್ಣೆಲೆಗಳ ನಡುವೆ ಹೊಸ ಚಿಗುರಿನ ಎಲೆಗಳು ಸೂರ್ಯನ ಕಿರಣಗಳು ಬಿದ್ದು ಥಳಥಳಿಸುತ್ತಿವೆ. ಇದ್ದಕ್ಕಿದ್ದ ಹಾಗೆ ಅದರಿಂದ ಹಣ್ಣೆಲೆಯೊಂದು ತೇಲಿ ಕೆಳಗೆ ಬೀಳುತ್ತದೆ. ಗಾಂಧೀಜಿ ಏನನ್ನೋ ಹುಡುಕಾಟ ನಡೆಸುವವರಂತೆ ಬಾಗಿ ಅದನ್ನು ಕೈಗೆತ್ತಿಕೊಂಡು ಕ್ಷಣ ಹೊತ್ತು ದಿಟ್ಟಿಸಿ, ಪ್ರತಿನಿಧಿಯ ಕೈಗೆ ಕೊಡುತ್ತಾರೆ. ‘ನನ್ನ ಪ್ರಶ್ನೆಗೆ ಈ ಹಣ್ಣೆಲೆಯೇ?’

ADVERTISEMENT

ಅವನ ಮುಖದಲ್ಲಿ ಮೂಡಿದ ಪ್ರಶ್ನೆಗೆ ಗಾಂಧೀಜಿ ಮಾರ್ಮಿಕವಾಗಿ ನಕ್ಕು, ‘ನೋಡು ತಾನು ಬಿದ್ದ ಮೇಲೂ ತನ್ನ ಜಾಗದಲ್ಲಿ ಮತ್ತೊಂದು ಚಿಗುರು ಹುಟ್ಟುತ್ತದೆ ಎನ್ನುವ ಭರವಸೆ ಈ ಎಲೆಯದ್ದು. ಅದಕ್ಕೆ ನೆಲಕ್ಕೆ ಬಿದ್ದು ಗೊಬ್ಬರ ಆಗಿ ಮರಕ್ಕೆ ಚೈತನ್ಯ ಕೊಡುತ್ತದೆ. ಈ ಎಲೆ ಹೇಗೆ ಚಿಗುರಿನ ಪರವಾಗಿರುತ್ತದೋ ನಾನು ಕೂಡಾ ಭಾರತದ ಭವಿಷ್ಯದ ಪರವಾಗಿದ್ದೇನೆ. ಈಗ ಕಾಣುವ ಒಳಿತು ಮುಖ್ಯವಲ್ಲ, ಸ್ವತಂತ್ರ ಭಾರತದ ಭವಿಷ್ಯ ಭಯಾನಕ ಆಗಬಾರದು. ಅದಕ್ಕಾಗಿ ನಾನಿಲ್ಲಿಯೇ ಇರಬೇಕು. ಇದೇ ನನ್ನ ಸಂದೇಶ’ ಎನ್ನುತ್ತಾರೆ.

ಈ ಕ್ಷಣಕ್ಕೆ ಕಾಣುವುದರ ಹಿಂದೆ ಮಾತ್ರ ಹೋಗಬಾರದು. ಅದರ ಪರಿಣಾಮಗಳಲ್ಲಿ ಅಡಕವಾಗಿರುವ ಸಂಗತಿಗಳನ್ನು ಒರೆಹಚ್ಚಬೇಕು ಅಲ್ಲವೇ. ಗಾಂಧಿಯ ಆ ಕನಸು ಈಗಲಾದರೂ
ನನಸಾಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.