ADVERTISEMENT

ನುಡಿ ಬೆಳಗು–69: ಸಂತೋಷವಾಗಿ ಬದುಕಬೇಕು!

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 18:57 IST
Last Updated 18 ನವೆಂಬರ್ 2024, 18:57 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ನಿಸರ್ಗ ಇಷ್ಟೊಂದು ಸುಂದರವಾದ ಜೀವನವನ್ನು ನಮಗೆ ಕೊಟ್ಟಿದೆಯಲ್ಲ ಅದನ್ನು ಸಂತೋಷಪೂರ್ಣವಾಗಿ ಕಟ್ಟಿಕೊಳ್ಳಲು ಗೊತ್ತಿಲ್ಲದಿದ್ದರೆ ಮನುಷ್ಯನಿಗೆ ಏನನ್ನಬೇಕು? ದೇವರಿಗೆ ಒಮ್ಮೆ, ‘ಇಷ್ಟೊಂದು ಸುಂದರವಾದ ಸೃಷ್ಟಿ ನಾನು ಮಾಡೇನಿ, ಒಮ್ಮೆ ನೋಡಿ ಬರಬೇಕು’ ಅಂತ ಅನಿಸಿತಂತೆ. ಪಶು ಪಕ್ಷಿ ಪ್ರಾಣಿಗಳಿಂದ ಒಂದು ಫೀಡ್ ಬ್ಯಾಕ್ ತಗೋಬೇಕು ಅಂತ ಅನಿಸಿತು. ಅದಕ್ಕೆ ಮೇಲಿಂದ ಭೂಮಿಗೆ ಬಂದ.

ಮೊಟ್ಟಮೊದಲು ಒಂದು ದುಂಬಿ ಭೆಟ್ಟಿಯಾಯಿತು. ಅದಕ್ಕೆ ಕೇಳಿದ. ‘ನಾನು ಇಷ್ಟು ಸೃಷ್ಟಿ ಮಾಡಿದೀನಲ್ಲ, ನಿನಗೆ ಏನನಸ್ತದ’ ಎಂದು. ಅದಕ್ಕೆ ದುಂಬಿ, ‘ತುಂಬಾ ಚೆನ್ನಾಗಿದೆ. ಎಷ್ಟೊಂದು ಹೂವು ಸೃಷ್ಟಿ ಮಾಡಿದಿ, ಮಕರಂದ ಹೀರೋದೇ ನನ್ನ ಕೆಲಸ. ಹೂವಿಂದ ಹೂವಿಗೆ ಹಾರತೀನಿ ಮಕರಂದ ಹೀರುತೀನಿ, ಸಂತೋಷವೇ ಸಂತೋಷ. ನಿನ್ನ
ಸೃಷ್ಟಿ ಅಂದರ ಸುಂದರ ನೋಡಪ, ನಿನ್ನ ಸೃಷ್ಟಿ ಅಂದರ ಸೌಂದರ್ಯ. ನಿನ್ನ ಸೃಷ್ಟಿ ಅಂದರ ಮಕರಂದ’ ಎಂದು ಹೇಳಿತು. ದೇವರಿಗೆ ಸಂತೋಷ ಆಯಿತು. ನಂತರ ಒಂದು ಪಕ್ಷಿ ಭೇಟಿಯಾತು. ಅದಕ್ಕೂ ಇದೇ ಪ್ರಶ್ನೆ ಕೇಳಿದ. ‘ನಿನ್ನ ಸೃಷ್ಟಿಯ ಬಗ್ಗೆ ಹೇಳುವುದಕ್ಕೆ ನಾನು ದೊಡ್ಡವನಲ್ಲ. ನಾನೊಂದು ಹಕ್ಕಿ ಅಷ್ಟೆ. ಎಷ್ಟು ಸರೋವರಗಳನ್ನು ಸೃಷ್ಟಿಸಿದಿ, ಎಷ್ಟು ಗಿಡಗಳನ್ನು ಸೃಷ್ಟಿಸಿದಿ. ಎಲ್ಲ ಮರಗಳಿಗೆ ಹಾರಿಕೊಂಡು ಹೋಗ್ತೀನಿ, ಬೇಕಾದ್ದು ಹಣ್ಣು ತಿನ್ನುತೀನಿ, ಬೇಕಾದಾಗ ನೀರು ಕುಡೀತೀನಿ. ನಿನ್ನ ಸೃಷ್ಟಿ ಬಗ್ಗೆ ಹೇಳೋಕೆ ನನಗೆ ಬರಲ್ಲ. ಆದರೆ ಕೃತಜ್ಞತೆ ಪೂರ್ವಕವಾಗಿ ಒಂದು ಹಾಡು ಹೇಳೀನಿ. ಹಾಡೇ ನನ್ನ ಧನ್ಯವಾದ. ನನ್ನ ಹೃದಯ ಹಾಡಾಗಿ ಬರತೈತಿ. ನಿನ್ನ ಸೃಷ್ಟಿ ಅಷ್ಟು ಅದ್ಭುತ’ ಅಂತು. 

ADVERTISEMENT

ನಂತರ ಒಂದು ಕಪ್ಪೆಯನ್ನು ಕೇಳಿದ ದೇವರು. ‘ಏನು ಹೇಳಲಿ ಭಗವಂತ. ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗೆ ಅಲ್ಲಲ್ಲಿ ಆಹಾರ ಇಟ್ಟಿ. ನಿನ್ನ ಸೃಷ್ಟಿಯ ಬಗ್ಗೆ ಮಾತನಾಡಲು ನನಗೆ ಶಬ್ದಗಳೇ ಸಿಗೋದಿಲ್ಲ’ ಎಂದಿತು. ದೇವರಿಗೆ ಬಹಳ ಸಂತೋಷಾತು. ಅಷ್ಟರಲ್ಲಿ ಮನುಷ್ಯನೊಬ್ಬ ಭೇಟಿಯಾದ. ಅವನಿಗೂ ಅದೇ ಪ್ರಶ್ನೆ ಕೇಳಿದ. ಪ್ರಶ್ನೆ ಕೇಳಿದ ತಕ್ಷಣವೇ ಅವ ದೇವರ ಮೇಲೆ ಏರಿಯೇ ಬಂದ. ‘ಏನ್ ಏನ್ ಚಲೋ ಮಾಡಿದಿ? ಒಂದಾರು ಚಲೋ ಮಾಡಿಯೇನು? ನೀರಿಗಾಗಿ ಜನ ಕಷ್ಟಪಡಾಕತ್ತಾರ. ನದಿ ಸಣ್ಣದು ಮಾಡಿ ಸಿಹಿ ಇಟ್ಟಿ. ಸಮುದ್ರ ದೊಡ್ಡದು ಮಾಡಿ ನೀರು ಉಪ್ಪು ಮಾಡಿದಿ. ಪರ್ವತಗಳಿಗೆ ಒಂದಕ್ಕಾದರೂ ಆಕಾರ ಇದಾವೇನು? ಬ್ಯಾರೇ ದೇಶದವರಿಗೆ ಕೆಂಪಗೆ ಮಾಡಿದಿ. ನಮ್ಮವರು ಕೆಂಪಗೆ ಆಗಬೇಕು ಅಂತಾ ದಿನಾ ಪಾರ್ಲರಿಗೆ ಹೋಗುವಾಂಗ ಮಾಡಿದಿ. ಒಬ್ಬರಿಗಾದರೂ ಚಲೋ ಮಾಡಿಯೇನು? ಹೊಟ್ಟಿಗೆ ಅನ್ನ ಇಲ್ಲ ಅಂತಾ ಕೆಲವರು ತಿರುಗ್ತಾರ, ಇನ್ನು ಕೆಲವರು ತಿಂದಿದ್ದು ಕರಗಸಕ
ಅಡ್ಡಾಡ್ತಾರ. ಅಲ್ಲ, ನಿನಗ ತಿಳಿದಿದ್ದಿಲ್ಲ ಅಂದರ ನನಗಾದರೂ ಕೇಳಬೇಕಾಗಿತ್ತು. ನಾನಾರ ಹೇಳತಿದ್ದೆ’ ಎಂದ.

ದೇವರಿಗೆ ದಿಕ್ಕು ತಪ್ಪಿತು. ಅವ ಪಕ್ಷಿಗೆ ‘ಇವ ಹೀಂಗ್ಯಾಕೆ’ ಎಂದು ಕೇಳಿದ. ‘ಅದರ ಹಣೆಬರಹನ ಅಷ್ಟು’ ಎಂದಿತು ಪಕ್ಷಿ. ನಿಸರ್ಗ ನೀಡಿದ ಈ ಜೀವನವನ್ನು ಸರಿಯಾಗಿ ಬಳಸಿಕೊಳ್ಳಲು ಬಾರದಿದ್ದರೆ ನಮ್ಮನ್ನು ಅಜ್ಞಾನಿ ಅಂತಾರ. ಜ್ಞಾನಿ ಅಂದರ, ನಿಸರ್ಗ ನೀಡಿದ್ದನ್ನು ಬಳಸಿಕೊಂಡು ಸಂತೋಷವಾಗಿರೋದು ಅಷ್ಟೆ. ಪಶು, ಪಕ್ಷಿಗಳು ಸಂತೋಷವಾಗಿದಾವು. ನಾವೂ ಹಾಂಗ ಇರೋದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.