ADVERTISEMENT

ನುಡಿ ಬೆಳಗು–70: ಮನಸ್ಸು ಕಸದ ಬುಟ್ಟಿ ಅಲ್ಲ!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 19 ನವೆಂಬರ್ 2024, 18:37 IST
Last Updated 19 ನವೆಂಬರ್ 2024, 18:37 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ದಯಾನಂದ ಸರಸ್ವತಿ ಅಂತ ಒಬ್ಬರು ಸಂತರು ಇದ್ದರು. ಅವರು ಆರ್ಯ ಸಮಾಜವನ್ನು ಕಟ್ಟಿದರು. ಅವರು ಹೋದಲೆಲ್ಲ ಮೂರ್ತಿ ಪೂಜೆ ಮಾಡಬೇಡಿ ಅಂತಿದ್ದರು. ಕಾಶಿಗೆ ಹೋದರು. ಅಲ್ಲಿ ಬಹಳ ಜನ ಇವರ ಪ್ರಭಾವಕ್ಕೆ ಒಳಗಾಗಿ ಮೂರ್ತಿ ಪೂಜೆ ಮಾಡೋದು ಬಿಟ್ಟರು. ದೇವರ ಗುಡಿಗೆ ಹೋಗೋದು ಬಿಟ್ಟರು. ದೇವರ ಗುಡಿಯ ಅರ್ಚಕನಿಗೆ ಇದರಿಂದ ತ್ರಾಸಾಗಕೆ ಹತ್ತಿತು. ಜನ ದೇವರು ಗುಡಿಗೆ ಬಂದರೆ ನಾಲ್ಕು ಕಾಸು ಹಾಕುತ್ತಿದ್ದರು. ಅವನ ಜೀವನ ನಡೀತಿತ್ತು. ದಯಾನಂದ ಸರಸ್ವತಿ ಅವರು ಗಂಗಾನದಿಯಲ್ಲಿ ಸ್ನಾನ ಮಾಡಲು ಹೋಗುವಾಗ ಮತ್ತು ಬರುವಾಗ ಗುಡಿಯ ಮುಂದೇ ಹೋಗಿ ಬಂದು ಮಾಡುತ್ತಿದ್ದರು. ಇವರು ಸ್ನಾನಕ್ಕೆ ಹೋಗುವಾಗ ಒಮ್ಮೆ ಅರ್ಚಕ
ಬೈತಿದ್ದ, ಬರುವಾಗಲೂ ಬೈತಿದ್ದ. ಪ್ರತಿ ನಿತ್ಯ ಇದು ನಡೀತಿತ್ತು. ದಯಾನಂದ ಸರಸ್ವತಿ ಅವರ ನಿಯಮ ಏನೆಂದರೆ ಪ್ರತಿ ನಿತ್ಯ ಯಾರಿಗಾದರೂ ಪ್ರಸಾದ ಮಾಡಿಸಿ ನಂತರ ತಾವು ಊಟ ಮಾಡುತ್ತಿದ್ದರು. ಒಂದಿನ ಯಾರೂ ಅತಿಥಿ ಸಿಗಲಿಲ್ಲ. ಈ ಅರ್ಚಕನಿಗೇ ಕರೆದು ‘ನೀವು ನಮ್ಮ ಮನೆಯ ಅತಿಥಿಯಾಗಬೇಕು’ ಎಂದರು. ಅವನಿಗೆ ಭಯ ಆಯಿತು. ‘ನಾನು ದಿನಾ ಬೈತೀನಿ. ಆದರೂ ಇವ ನನ್ನ ಅತಿಥಿ ಅಂತ ಕರದಾರ ಅಂದ್ರ ಮನೆಗೆ ಕರೆದು ಹೊಡೀತಾರ’ ಅಂದುಕೊಂಡ. ಆದರೂ ಧೈರ್ಯ ಮಾಡಿ ಮನೀಗೆ ಹೋದ.

ಅವನನ್ನು ಸ್ವಾಗತಿಸಿದ ದಯಾನಂದ ಸರಸ್ವತಿ ಅವರು ಕುರ್ಚಿ ಹಾಕಿ ಕುಳ್ಳಿರಿಸಿ ಹಾಲು ಹಣ್ಣು ಕೊಟ್ಟರು. ನಂತರ ಕೈ ಮುಗಿದು ‘ನೀವು ನನ್ನ ಮನೆಯ ಅತಿಥಿಗಳಾಗಿ ನನ್ನನ್ನು ಕೃತಾರ್ಥನನ್ನಾಗಿ ಮಾಡಿದಿರಿ’ ಅಂದರು. ಅರ್ಚಕನಿಗೆ ಆಶ್ಚರ್ಯವಾಯಿತು. ‘ಒಂದು ಮಾತು ಕೇಳಲೇನು?’ ಎಂದ. ‘ಕೇಳಿ’ ಎಂದರು. ‘ನೀವು ಸ್ನಾನಕ್ಕೆ ಹೋಗುವಾಗ ಮತ್ತು ಬರುವಾಗ ಕೆಟ್ಟ ಕೆಟ್ಟ ಶಬ್ದಗಳಿಂದ
ನಿಮ್ಮನ್ನು ಬೈದೀನಿ. ಅದನ್ನು ನೀವು ತಲೆಗೆ ಹಚ್ಚಿಕೊಂಡಿಲ್ಲೇನು?’ ಎಂದು ಕೇಳಿದ. ಅದಕ್ಕೆ ದಯಾನಂದ ಸರಸ್ವತಿ ‘ನೋಡು ಮಾರಾಯ, ದೇವನು ಕೊಟ್ಟ ತಲೆಯೊಳಗೆ ಒಳ್ಳೆಯ ವಿಚಾರಗಳನ್ನು ಇಟ್ಟುಕೊಳ್ಳುವುದಕ್ಕೇ ಜಾಗ ಇಲ್ಲ. ಇನ್ನು ನಿನ್ನ ಬೈಗುಳಕ್ಕೆ ಎಲ್ಲಿ ಜಾಗ ಕೊಡಲಿ’ ಎಂದರು. ಜೀವನ ಸುಂದರ ಆಗಬೇಕು ಎಂದರೆ ನಿಮ್ಮ ತಲೆಯಲ್ಲಿ ಬೈಗುಳಕ್ಕೆ ಜಾಗ ಕೊಡದೆ ಒಳ್ಳೆಯ ವಿಚಾರಕ್ಕೆ ಜಾಗ ಕೊಡಿ ಅಷ್ಟೆ.

ADVERTISEMENT

ಒಂದು ಸಣ್ಣ ಮಾತು ನಮ್ಮನ್ನು ಆಳುತ್ತವೆ. ಬಸವಣ್ಣನವರು ‘ಬೈದವರು ಎನ್ನ ಬಂಧುಗಳು’ ಎಂದು ಹೇಳಿದರು. ಶರಣರ ಮಾತುಗಳು ನಮ್ಮನ್ನು ಆಳುವುದಿಲ್ಲ. ಎಲ್ಲ ಕೆಟ್ಟ ಶಬ್ದಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ತಲೆ ಎನ್ನುವುದು ಕಸದ ಬುಟ್ಟಿ ಆಗುತ್ತದೆ. ನಿನ್ನೆ ಮೊನ್ನೆ ಮಾಡಿದ ಹಳಸಿದ ಅಡುಗೆ ಉಂಡರೆ ಹೊಟ್ಟೆ ಕೆಡತೈತಿ ಅಂತ ನಮಗೆ ಗೊತ್ತೈತಿ. ಅದೇ ರೀತಿ ನಿನ್ನೆಯೋ
ಮೊನ್ನೆಯೋ ಯಾರೋ ಆಡಿದ ಕೆಟ್ಟ ಮಾತುಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ತಲೆ ಕೆಡುತೈತಿ ಅನ್ನೋದು ಗೊತ್ತಾಗೋದಿಲ್ಲ ಅಂದರೆ ಹ್ಯಾಂಗ? ಹಳಸಿದ ಅನ್ನ ಹೊಟ್ಟೆ ಕೆಡತೈತಿ, ಹಳಸಿದ ಮಾತು ತಲೆ ಕೆಡತೈತಿ ಇದೇ ಜ್ಞಾನ. ಇದೇ ಭಕ್ತಿ. ಚಲೋದು ಸ್ವೀಕಾರ ಮಾಡೋದು. ಅದೇ ಜ್ಞಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.