ADVERTISEMENT

ನುಡಿ ಬೆಳಗು–72: ನಿಸರ್ಗವೇ ಗುರು!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 21 ನವೆಂಬರ್ 2024, 20:32 IST
Last Updated 21 ನವೆಂಬರ್ 2024, 20:32 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಕಲ್ಯಾಣದಲ್ಲಿ ಮೌಂಟ್ ಎವರೆಸ್ಟ್ ಇರಲಿಲ್ಲ. ಬಂದ ಶರಣದಲ್ಲಿ ಸೇಂಟ್ ಎವರೆಸ್ಟ್‌ಗಳನ್ನು ನಿರ್ಮಾಣ ಮಾಡಿದ್ದರು. ಅಲ್ಲಿ ಗಂಗಾ ನದಿ ಹರಿತಿತ್ತೇನು? ಹೋಗಿ ಅದರೊಳಗೆ ಬಿದ್ದು ಪವಿತ್ರ ಆಗೋದಕ್ಕ. ಯಾವ ಗಂಗೆಯೂ ಹರಿತಿರಲಿಲ್ಲ. ‘ಮಿಂದು ದೇವರ ಪೂಜಿಸಿಹೆನೆಂಬ ಸಂದೇಹಿ ಮಾನವ ನೀ ಕೇಳ ಮೀಯದೇ ಮೀನು? ಮೀಯದೇ ಮೊಸಳೆ? ತಾ ಮಿಂದು ತನ್ನ ಮೀಯದನ್ನಕ್ಕರ ಈ ಬೆಡಗಿನ ಮಾತ ಮೆಚ್ಚುವನೆ ನಮ್ಮ ಗುಹೇಶ್ವರ’ ಎಂದರು ಶರಣರು.

ಗಂಗೆಯಲ್ಲಿ ಮೀಯಲು ಯಾವ ಶರಣರೂ ಬರಲಿಲ್ಲ. ಯಾಕೆಂದರೆ ಗಂಗೆಯಲ್ಲಿ ಮಿಂದರೆ ಮನುಷ್ಯನ ಮೈಗೆ ಹತ್ತಿದ ಮೈಲಿಗೆ ಹೋಗಬಹುದೇ ಹೊರತು ಮನುಷ್ಯನ ಮನಸ್ಸಿಗೆ ಹತ್ತಿದ ಮೈಲಿಗೆ ಹೋಗೋದಿಲ್ಲ. ಮನುಷ್ಯನ ಮನಸ್ಸಿಗೆ ಹತ್ತಿದ ಮೈಲಿಗೆ ಹೋಗಬೇಕು ಅಂದರ ಗಂಗೆಯಲ್ಲಿ ಅಲ್ಲ; ವಚನ ಗಂಗೆಯಲ್ಲಿ ಮೀಯಬೇಕು ಮನುಷ್ಯ. ಉತ್ತರದಲ್ಲಿ ಗಂಗೆ, ದಕ್ಷಿಣದಲ್ಲಿ ವಚನ ಗಂಗೆ. ಇದು ಶರಣರ ಜೀವನ ದೃಷ್ಟಿ. ಆವಾಗೇನು ಗೂಗಲ್ ಇತ್ತಾ, ಇಂಟರ್ ನೆಟ್ ಇತ್ತಾ, ಟ್ವಿಟರ್ ಇತ್ತಾ, ಫೇಸ್ ಬುಕ್ ಇತ್ತಾ? ಏನೂ ಇರಲಿಲ್ಲ. ಎಲ್ಲೆಲ್ಲಿಂದಲೋ ಜನ ಬಂದರು. ಫೇಸ್ ಬುಕ್ ಇರಲಿಲ್ಲ. ಆದರೆ ಬಸವಣ್ಣನಿಗೆ ಫೇಸ್ ವ್ಯಾಲ್ಯೂ ಇತ್ತು. ಅದಕ್ಕೆ ಬಂದರು. ನಮಗೆ ಫೇಸ್‌ ಬುಕ್ ಐತಿ. ಆದರೆ ಫೇಸ್ ವ್ಯಾಲ್ಯೂನೇ ಕಳಕಂಡುಬಿಟ್ಟೀವಿ. ಜ್ಞಾನದಿಂದ ಕಲ್ಯಾಣ ಕಟ್ಟಿದರು. ಜ್ಞಾನಕ್ಕಾಗಿ ಜನರು ಹಾತೊರೆಯುತ್ತಿದ್ದರು.

ADVERTISEMENT

ಒಮ್ಮೆ ನ್ಯೂಟನ್‌ಗೆ ಸನ್ಮಾನ ನಡೀತು. ‘ಇವರು ಬಹಳ ದೊಡ್ಡ ಜ್ಞಾನಿ, ದೊಡ್ಡ ವಿಜ್ಞಾನಿ’ ಅಂತೆಲ್ಲಾ ಬಹಳ ಹೊಗಳಿದರು. ನಂತರ ನ್ಯೂಟನ್ ಮಾತನಾಡುತ್ತಾ, ‘ನಾನೇನು ಜ್ಞಾನಿ ಅಲ್ಲ. ಜ್ಞಾನ ಸಮುದ್ರದ ದಂಡೆಯಲ್ಲಿ ಬೆಣಚುಕಲ್ಲುಗಳನ್ನು ಆಯುವ ಶಿಶು ನಾನು’ ಎಂದರು. ಅಂದರ, ಜ್ಞಾನಕ್ಕೆ ಅಷ್ಟು ಬೆಲೆ ಜಗತ್ತಿನಲ್ಲಿ. ಮನೆಯಲ್ಲಿ ಪುಸ್ತಕ ಇಡಬೇಕು. ಗದುಗಿನ ತೋಂಟದಾರ್ಯ ಸ್ವಾಮೀಜಿ ಪುಸ್ತಕಗಳ ಮಹತ್ವದ ಬಗ್ಗೆ ಹೇಳುತ್ತಿದ್ದರು. ಸಂಸಾರಿಗಳಿಗೆ ಪುತ್ರೋತ್ಸವ ಎಷ್ಟು ಸಂತೋಷ ಕೊಡತೈತೋ ಅಷ್ಟೇ ಸಂತೋಷ ಸನ್ಯಾಸಿಗಳಿಗೆ ಪುಸ್ತಕೋತ್ಸವದಿಂದ ಸಿಗತೈತಿ.

ಪುಸ್ತಕಗಳಿಂದ ಜ್ಞಾನ ಬರ್ತದ. ಜ್ಞಾನ ಯಾವ ಮೂಲೆಗಳಿಂದ ಬಂದರೂ ಅದನ್ನು ಸ್ವೀಕಾರ ಮಾಡಬೇಕು. ದಶ ದಿಕ್ಕುಗಳಿಂದ ಅರಿವು ಎನ್ನ ಹೃದಯದ ಆಳಕ್ಕೆ ಹರಿದು ಬರಲಿ ಎಂತಿರಬೇಕು. ‘ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಗಳಿಂದ ಕೇಳುತಂ, ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ ಕೆಲವಂ ಸಜ್ಜನ ಸಂಗದಿಂದರಿಯಲ್ ಸರ್ವಜ್ಞನಪ್ಪಂ ನರಂ ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರ’ ಎಂದ ಹಾಗೆ, ಒಳ್ಳೆಯದು ಎಲ್ಲಿ ಸಿಗತೈತೋ ಅಲ್ಲಿ ಕಲಿಯುವ ಮನಸ್ಸು ಬೇಕು.

ಕೋಗಿಲೆ ಹಾಡೋದನ್ನು ಎಲ್ಲಿ ಕಲತೈತಿ? ಮೀನಿಗೆ ಈಜೋದನ್ನು ಯಾರು ಕಲಿಸಿದರು? ನವಿಲಿಗೆ ನರ್ತನ ಮಾಡೋದನ್ನು ಕಲಿಸಿದವರು ಯಾರು? ಅದು ಯಾವುದೇ ನೃತ್ಯ ಶಾಲೆಗೆ ಹೋಗಿ ಕಲಿತಿಲ್ಲ. ನಿಸರ್ಗ ಕಲಸತೈತಿ. ಮನುಷ್ಯನಿಗೆ ಕಲಿಯುವ ಮನಸ್ಸಿದ್ದರೆ ನಿಸರ್ಗ ಎಲ್ಲವನ್ನೂ ಕಲಿಸುತ್ತದೆ. ಕಲಿಯುವ ಮನಸ್ಸಿದ್ದರೆ ವಿಶ್ವವೇ ಗುರು. ಕಲಿಯುವ ಮನಸ್ಸಿದ್ದರೆ ಏನ್ ನೋಡ್ತಾನೆ ಅದನ್ನೇ ಕಲಿಯಾಕೆ ಶುರು ಮಾಡುತ್ತಾನೆ. ಏನು ಕೇಳ್ತಾನೆ ಅದರಿಂದ
ತಿಳಕೊಳ್ಳೋಕೆ ಆರಂಭಿಸುತ್ತಾನೆ. ಕಲಿಯುವ ಮನಸ್ಸು ಬೇಕು ಅಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.