ಈ ದೇಶದ ದೊಡ್ಡ ಜ್ಞಾನಿ ಪತಂಜಲಿ ಮಹರ್ಷಿ. ಮನುಷ್ಯನಿಗೆ ಯಾವ ಕಾರಣಗಳಿಂದ ದುಃಖ ಆಗತೈತಿ ಅಂತ ಅವರು ಸಂಶೋಧನೆ ಮಾಡ್ಯಾರ. ಮೂರು ಕಾರಣಗಳಿಂದ ಮನುಷ್ಯನಿಗೆ ದುಃಖ ಆಗುತ್ತದೆ ಎಂದು ಅವರು ಕಂಡುಕೊಂಡಾರ. ಮೊದಲನೆಯದ್ದು ಪರಿಣಾಮ ದುಃಖ.
ಜಗತ್ತಿನ ಎಲ್ಲ ವಸ್ತುಗಳೂ ಪರಿಣಾಮ ಅಂದರ ಬದಲಾವಣೆ ಹೊಂದುತ್ತವೆ. ಅಂದರ ಇದ್ದದ್ದು ಇದ್ದಾಂಗೆ ಇರೋದಿಲ್ಲ. ಮನುಷ್ಯನ ಆಸೆ ಎರಡು ಧ್ರುವಗಳ ಸುತ್ತ ತಿರುಗತೈತಿ. ಅದೇನೆಂದರ, ‘ನನ್ನ ದೇಹ ಸೊರಗಬಾರದು, ನನ್ನ ಸಂಪತ್ತು ಕರಗಬಾರದು’ ಎಂದು ಮನಸ್ಸು ಬಯಸುತ್ತದೆ. ದೇಹ ಸೊರಗಿದರೆ, ಸಂಪತ್ತು ಹೋದರೆ ದುಃಖ ಆಗತೈತಿ. ಆದರೆ, ವಾಸ್ತವ ಸತ್ಯ ಏನೆಂದರ ದೇಹ ಸೊರಗುತೈತಿ, ಸಂಪತ್ತು ಕರಗುತೈತಿ. ಇದು ಸತ್ಯ. ಇದನ್ನು ಮನುಷ್ಯ ತಿಳಕೋಬೇಕು. ರಾಜ ಮಹಾರಾಜರು ಬರೆಸಿದ ಶಿಲಾಶಾಸನಗಳೇ ಅಳಿಯುತ್ತವೆ. ರಾಜಕಾರಣಿಗಳು ಮಾಡಿದ ಶಿಲಾನ್ಯಾಸವೂ ಉಳಿಯೋದಿಲ್ಲ. ಪಂಚ ಮಹಾಭೂತಗಳೇ ತರುಗುತಾವ. ನಮ್ಮನ್ನು ಹೊತ್ತ ಭೂಮಿ ಕೂಡಾ ತಿರಗತೈತಿ. ಹಿಮಾಲಯದ ಹಿಮ ಕೂಡಾ ಕರಗಲು ಹತ್ತೈತಿ. ನನಗಾಗಿ ಒಂದು
ಬೆಡ್ ರೂಂ ಕಟ್ಟಬೇಕು ಅಂತಾ ಹಾತೊರಿಯುತ್ತೀರಲ್ಲ, ಆದರೆ ನಿಮಗಾಗಿ ಕಟ್ಟಿದ ಬೆಡ್ ರೂಂ ಒಂದು ದಿನ ಡೆಡ್ ರೂಂ ಆಗತೈತಿ ಅನ್ನೋ ಸತ್ಯಾನೂ ತಿಳಕೋಬೇಕು. ಇದು ಜೀವನದ ಯತಾರ್ಥ ಜ್ಞಾನ. ನಮಗೆ ದುಃಖ ಯಾಕೆ ಆಗೈತಿ ಅಂದರ ಇದು ಗೊತ್ತಿಲ್ಲದಿರುವುದಕ್ಕೆ.
ಯುರೋಪ್‌ನಲ್ಲಿ ಒಂದು ಘಟನೆ ನಡೆಯಿತು. ಒಬ್ಬ ಸಮಾಜ ಸೇವಕ ಇದ್ದ. ಅವನ ಮೂರ್ತಿ ಮಾಡಿ ಊರಿನ ವೃತ್ತದಲ್ಲಿ ನಿಲ್ಲಿಸಿದರು. ಉದ್ಘಾಟನೆಯೂ ಆತು. ಇವ ಮನೆಗೆ ಬಂದು ರಾತ್ರಿ ಮೂರ್ತಿಯನ್ನು ನೋಡಾಕೆ ಶುರು ಹಚ್ಚಿದ. ಇವನಿಗೆ ಬಹಳ ಸಂತೋಷ ಆಗೋತು. ತನ್ನಂಥ ಸಮಾಜ ಸೇವಕ ಯಾರಿದ್ದಾರ ಅಂದುಕೊಂಡ. ಮೂರ್ತಿಯ ಹತ್ತಿರಕ್ಕೆ ಹೋದರೆ ಇನ್ನೂ ಸಂತೋಷ ಆಗತೈತಿ ಅಂತ ಅದರ ಬಳಿಗೆ ಹೋದ. ಆಗ ಯಾರೋ ನಗುವ ಶಬ್ದ ಕೇಳಿತು. ಯಾರು ನಗುತ್ತಿದ್ದಾರೆ ಎಂದು ಹುಡುಕುವಾಗ ಮೆಟ್ಟಿಲು ಹೇಳಿತು, ‘ನಗತಾ ಇರೋದು ನಾನು’ ಅಂತ. ‘ನೀ ಯ್ಯಾಕ ನಗಾಕ ಹತ್ತಿದಿ’ ಎಂದು ಕೇಳಿದ ಇವ. ‘ನಿನ್ನ ಹುಚ್ಚುತನಕ್ಕೆ ನಗಾಕ ಹತ್ತೀನಿ ನಾನು’ ಅಂತು ಮೆಟ್ಟಿಲು. ‘ನಂದೇನು ಹುಚ್ಚುತನ ಐತಿ ಇಲ್ಲಿ’ ಎಂದ. ‘ಜನ ನಿನಗೆ ಗೌರವ ಕೊಟ್ಟು ಮೂರ್ತಿ ನಿಲ್ಲಿಸ್ಯಾರೆ ಎಂದು ತಿಳಕೊಂಡೀಯಲ್ಲ. ಅದೇ ಹುಚ್ಚುತನ ಅಂತು’ ಮೆಟ್ಟಿಲು. ‘ಅದು ಸುಳ್ಳೇನು’ ಎಂದು ಕೇಳಿದ ಅವ.
‘ಒಂದು ತಿಳಕೋ ನಾನೂ ನಿನ್ನ ಹಾಗೆಯೇ ಸಮಾಜ ಸೇವಕ ಆಗಿದ್ದೆ. ನನ್ನ ಮೂರ್ತಿನೂ ನಿಲ್ಲಿಸಿದ್ದರು. ಈಗ ನೀನು ಬಂದಿ ಅಂತ ನನ್ನನ್ನು ಮೆಟ್ಟಿಲು ಮಾಡಿ ನಿನ್ನ ಮೂರ್ತಿ ನಿಲ್ಲಿಸ್ಯಾರ. ಮುಂದೆ ಇನ್ನೊಬ್ಬ ಬರ್ತಾನ. ಆಗ ನೀನೂ ನನ್ನ ಹಾಂಗೇ ಮೆಟ್ಟಿಲು ಆಗ್ತೀಯ’ ಅಂತು.
ಇದು ಕೇಳಿ ಅವನಿಗೆ ದುಃಖ ಆತು. ದುಃಖ ಯಾಕಾಗೈತಿ ಅಂದರೆ ನನ್ನ ಮಕ್ಕಳು ಕಾಯಂ ನನ್ನ ಫೋಟೋ
ಹಾಕಿರ್ತಾರ ಅಂತ ತಿಳಕೊಂಡಿದ್ದರಿಂದ ದುಃಖ ಆತು. ಸಂಪತ್ತು, ಕೀರ್ತಿ, ಅಧಿಕಾರ ಎಲ್ಲವೂ ಸೊರಗತಾವ ಎನ್ನುವುದು ಮನುಷ್ಯನಿಗೆ ಗೊತ್ತಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.