ADVERTISEMENT

ನುಡಿ ಬೆಳಗು: ಸಂತೃಪ್ತಿಯ ಗುಟ್ಟು

ದೀಪಾ ಹಿರೇಗುತ್ತಿ
Published 17 ಜುಲೈ 2024, 20:32 IST
Last Updated 17 ಜುಲೈ 2024, 20:32 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಬಹಳ ಹಿಂದೆ ವಾಹನಗಳ ವ್ಯವಸ್ಥೆಯಿಲ್ಲದ ಕಾಲ. ಮೂವರು ಯುವಕರು ಕಾಡುಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಭೇಟಿಯಾದರು. ಕಾಡು ಪ್ರಾಣಿಗಳ ಭಯದಿಂದ ಒಟ್ಟಿಗೇ ಪಯಣಿಸಲು ತೀರ್ಮಾನಿಸಿದರು. ಮೂವರೂ ತರುಣರೇ ಆದರೂ ಅವರ ಮುಖಭಾವದಲ್ಲಿ ವ್ಯತ್ಯಾಸವಿತ್ತು. ಮೊದಲನೆಯವನು ಬಹಳ ನಿರಾಶಾವಾದಿಯಂತೆ ಕಾಣುತ್ತಿದ್ದ, ಸುಸ್ತಾಗಿದ್ದ.
ಎರಡನೆಯವನು ಬಳಲಿದ್ದರೂ ನಿರಾಶನಾಗಿರಲಿಲ್ಲ. ಮೂರನೆಯವನು ಮಾತ್ರ ಬಹಳ ಪ್ರಸನ್ನಚಿತ್ತನಾಗಿದ್ದ, ಸಣ್ಣ ಕಿರುನಗುವೊಂದು ಅವನ ತುಟಿಯಂಚಿನಲ್ಲಿತ್ತು. ಮೂವರ ಕೈಲೂ ಎರಡೆರಡು ಚೀಲಗಳಿದ್ದವು. ಭಾರವಾಗಬಾರದೆಂದು ಅವರುಒಂದೊಂದು ಬೆತ್ತದ ಎರಡೂ ತುದಿಗಳಿಗೆ ಒಂದೊಂದು ಚೀಲವನ್ನು ಕಟ್ಟಿ ಭುಜದ ಮೇಲೆ ಹೊತ್ತುಕೊಂಡಿದ್ದರು.

ಮೂವರೂ ಹೋಗುತ್ತಿರುವಾಗ ರಸ್ತೆಯ ಬದಿಯ ಮರವೊಂದರ ಕೆಳಗೆ ವಯಸ್ಸಾದವರೊಬ್ಬರು ಈ ಮೂವರನ್ನು ನೋಡಿ ಮುಗುಳ್ನಕ್ಕರು. ‘ನಮ್ಮನ್ನು ನೋಡಿ ಏಕೆ ನಕ್ಕಿರಿ’ ಎಂದು ಕೇಳಿದರು ಈ ಯುವಕರು. ಆಗ ಆತ ‘ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇನೆ, ಅದಕ್ಕೂ ಮುನ್ನ ನನ್ನ ಪ್ರಶ್ನೆಗೆ ನೀವು ಮೂವರೂ ಉತ್ತರ ಕೊಡಬೇಕು’ ಎಂದರು. ಅವರ ಪ್ರಶ್ನೆ ಹೀಗಿತ್ತು: ‘ನಿಮ್ಮ ಮೂವರ ಹತ್ತಿರವೂ ಎರಡೆರಡು ಚೀಲಗಳಿವೆ, ಜನರ ಒಳ್ಳೆಯತನವನ್ನು ಒಂದು ಚೀಲದಲ್ಲಿ, ಕೆಟ್ಟತನವನ್ನು ಒಂದು ಚೀಲದಲ್ಲಿ ಇಡುವುದಾದರೆ ಯಾವ
ಚೀಲದಲ್ಲಿ ಇಡುತ್ತೀರಿ?’ 

ADVERTISEMENT

ಮೊದಲನೆಯವನು ಕೆಟ್ಟವರಿಂದ ದೂರವಿರಲು ಕೆಟ್ಟತನವನ್ನು ಮುಂದಿನ ಚೀಲದಲ್ಲಿಡುತ್ತೇನೆ ಎಂದ. ಎರಡನೆಯವನು ಹೇಳಿದ ‘ಒಳ್ಳೆಯತನವನ್ನು ಮುಂದಿನ ಚೀಲದಲ್ಲಿಡುತ್ತೇನೆ, ಕಾರಣ ನನಗೂ ಒಳ್ಳೆಯ ಜನರಂತೆಯೇ ಆಗಬೇಕು, ಕೆಟ್ಟತನವನ್ನು ಹಿಂದಿನ ಚೀಲದಲ್ಲಿಡುತ್ತೇನೆ ಕಾರಣ ಕೆಟ್ಟವರಿಗಿಂತ ಉತ್ತಮವಾಗಬೇಕು’. ಮೂರನೆಯವನು ಹೇಳಿದ, ‘ಒಳ್ಳೆಯತನವನ್ನು ಮುಂದಿನ ಚೀಲದಲ್ಲಿಡುತ್ತೇನೆ, ಕಾರಣ ಜಗತ್ತು ಎಷ್ಟು ಸುಂದರವಾಗಿದೆ ಎಂಬುದು ಸದಾ ನನಗೆ ಗೊತ್ತಾಗುತ್ತಿರಬೇಕು. ಕೆಟ್ಟತನವನ್ನು ಹಿಂದಿನ ಚೀಲದಲ್ಲಿಡುತ್ತೇನೆ ಮತ್ತು ಆ ಚೀಲಕ್ಕೆ ಒಂದು ತೂತು ಮಾಡುತ್ತೇನೆ, ನಾನು ಮುಂದೆ ನಡೆದಂತೆಲ್ಲ ಕೆಟ್ಟತನವೆಲ್ಲ ಉದುರಿ ಹೋಗಿ ಆ ಚೀಲ ಖಾಲಿಯಾಗಬೇಕು’ಎಂದ.

ಆಗ ವೃದ್ಧರು ‘ನಿನ್ನ‌ ಮುಖದ ಮೇಲಿನ ಮುಗುಳ್ನಗೆ ನೋಡಿಯೇ ನಾನು ಮುಗುಳ್ನಕ್ಕಿದ್ದು. ನೀನು ಕೊಟ್ಟ ಉತ್ತರ ನಿನ್ನ ಪಯಣದ್ದಷ್ಟೇ ಅಲ್ಲ ಬದುಕಿನ ಸಾರವೂ ಹೌದು. ಮೊದಲನೆಯವನು ನಕಾರಾತ್ಮಕತೆಯನ್ನೇ ನೋಡುವುದರಿಂದ ದಣಿದಿದ್ದಾನೆ,

ನಿರಾಶನೂ ಆಗಿದ್ದಾನೆ. ಎರಡನೆಯವನು ಒಳ್ಳೆಯದನ್ನೇ ನೋಡಿದರೂ ಬೇರೆಯವರಿಗಿಂತ ಒಳ್ಳೆಯವನಾಗುವ ಒತ್ತಡದಿಂದ ಬಳಲಿದ್ದಾನೆ. ಆದರೆ ನೀನು ಬೇರೆಯವರ ಅವಗುಣಗಳನ್ನು ಮರೆಯುತ್ತ ಒಳ್ಳೆಯದನ್ನು ಮಾತ್ರ ನೋಡುತ್ತಿದ್ದೀ’ ಎಂದರು.

ನಿಜ, ಬೇರೆಯವರಲ್ಲಿ ಹುಳುಕು ಹುಡುಕುವ ಬದಲು ಆತ್ಮಾವಲೋಕನ ಮಾಡಿಕೊಳ್ಳುತ್ತ, ಬೇರೆಯವರ ಒಳ್ಳೆಯತನವನ್ನು ಗುರುತಿಸುತ್ತ, ಕೆಟ್ಟದನ್ನು ಕ್ಷಮಿಸುತ್ತ ಮುನ್ನಡೆವ ಗುಣ ಬೆಳೆಸಿಕೊಳ್ಳಬೇಕು. ಈ ಸಕಾರಾತ್ಮಕತೆಯಿಂದ ಮಾತ್ರ ಬದುಕು ಸರಳವೂ
ಸುಂದರವೂ ಆಗಲು ಸಾಧ್ಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.