ADVERTISEMENT

ನುಡಿ ಬೆಳಗು | ಅಭಿಮಾನದ ಅತಿರೇಕ

ದೀಪಾ ಹಿರೇಗುತ್ತಿ
Published 10 ಜುಲೈ 2024, 23:16 IST
Last Updated 10 ಜುಲೈ 2024, 23:16 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಅದು 1994ರ ಫಿಫಾ ಫುಟ್‌ಬಾಲ್‌ ವಿಶ್ವಕಪ್‌ ಪಂದ್ಯಾವಳಿ. ಕೊಲಂಬಿಯಾದ ಆಟಗಾರ ಆಂಡ್ರೆ ಎಸ್ಕೊಬಾರ್‌ ಅಮೆರಿಕ ಸಂಯುಕ್ತ ಸಂಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಅಕಸ್ಮಾತ್ತಾಗಿ ತಮ್ಮದೇ ಗೋಲು ಪೆಟ್ಟಿಗೆಗೆ ಚೆಂಡನ್ನು ಒದ್ದು ಬಿಟ್ಟರು. ಗೋಲ್‌ ಅಮೇರಿಕಾದ ಪಾಲಾಯಿತು. 1-2 ಗೋಲುಗಳಿಂದ ಕೊಲಂಬಿಯಾ ಪಂದ್ಯದಲ್ಲಿ ಸೋಲಬೇಕಾಯಿತು. ಕೊಲಂಬಿಯಾ ವಿಶ್ವಕಪ್‌ ಪಂದ್ಯಾವಳಿಯಿಂದ ಹೊರಬಿದ್ದ ಐದು ದಿನಗಳ ನಂತರ ಎಸ್ಕೊಬಾರ್‌ ಗುಂಡಿಗೆ ಬಲಿಯಾದರು. ಆರು ಸುತ್ತು ಗುಂಡಿಕ್ಕಿದ ಕೊಲೆಗಾರರು ಪ್ರತೀ ಬಾರಿ ಗುಂಡು ಹೊಡೆದಾಗಲೂ ಗೋಲ್‌ ಎಂದು ಹೇಳುತ್ತಿದ್ದರೆಂದು ವರದಿಯಾಗಿತ್ತು.
27ರ ಹರೆಯದ ಪ್ರತಿಭಾವಂತ ಆಟಗಾರರಾಗಿದ್ದ ಎಸ್ಕೊಬಾರ್ ತನ್ನ ಶಿಸ್ತಿನ ಆಟಕ್ಕಾಗಿ ಜೆಂಟ್ಲ್‌ಮ್ಯಾನ್‌ ಎಂದು ಕರೆಸಿಕೊಳ್ಳುತ್ತಿದ್ದರು. ಅಪಾರ ಕನಸುಗಳನ್ನು ಹೊತ್ತಿದ್ದ ಭರವಸೆಯ ಆಟಗಾರನೊಬ್ಬ ಮೂರ್ಖ ಅಭಿಮಾನಿಗಳ ಹುಚ್ಚುತನಕ್ಕೆ ಬಲಿಯಾಗಬೇಕಾಯಿತು.

ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಒಲಿಂಪಿಕ್ಸ್‌ ಆರಂಭವಾದಾಗ ಗೆಲ್ಲುವುದಕ್ಕಿಂತ ಹೆಚ್ಚಿನ ಮಹತ್ವವನ್ನು ಭಾಗವಹಿಸುವುದಕ್ಕೆ ಕೊಡಲಾಗಿತ್ತು. ಕ್ರೀಡಾಮನೋಭಾವಕ್ಕೆ ಆದ್ಯತೆ ನೀಡಿ ಕ್ರೀಡೆಯು ಮನಸ್ಸುಗಳನ್ನು ಬೆಸೆಯಲೆಂದು ಆಶಿಸಿ ವಿಶ್ವಮಟ್ಟದ ಕ್ರೀಡಾಕೂಟಕ್ಕೆ ಮುನ್ನುಡಿ ಬರೆಯಲಾಗಿತ್ತು. ಈಗ ಸಹ ಕ್ರೀಡಾಕೂಟಗಳಲ್ಲಿ ಒಲಿಂಪಿಕ್ಸ್‌ನ ಧ್ಯೇಯಕ್ಕೇ ಮನ್ನಣೆ ನೀಡಲಾಗುತ್ತಿದೆ. ಆದರೆ ಕ್ರೀಡಾಪ್ರೇಮಿಗಳ ಅಭಿಮಾನ ಮಾತ್ರ ಉಗ್ರಸ್ವರೂಪಕ್ಕೆ ತಿರುಗುತ್ತಿದೆ.

ADVERTISEMENT

ಕ್ರೀಡೆ ಎಂಬುದು ನಮ್ಮ ಮನರಂಜನೆಗಾಗಿ ಇರುವಂಥದ್ದು. ಮನಸ್ಸನ್ನು ಹಗುರವಾಗಿಸಲು ಕಾರಣವಾಗಬೇಕಿದ್ದ ಸಂಗತಿಯನ್ನು ಒತ್ತಡವನ್ನಾಗಿಸಿಕೊಳ್ಳುತ್ತಿರುವುದನ್ನು ದಿನೇ ದಿನೇ ನೋಡುತ್ತಿದ್ದೇವೆ. ಕ್ರೀಡೆಯ ಬಗೆಗಿನ ಮೋಹ, ಜಗಳ, ಗಲಾಟೆಗೆ ಕಾರಣವಾಗುವುದರ ಜತೆಗೆ ಬೆಟ್ಟಿಂಗ್‌ನಂತಹ ದುಶ್ಚಟಗಳಿಗೆ, ಕೊಲೆಯಂತಹ ದುಷ್ಕೃತ್ಯಗಳಿಗೆ ಕಾರಣವಾಗುತ್ತಿರುವುದು ನಿಜಕ್ಕೂ ಸಂಕಟ ತರುವ ವಿಚಾರ. ಈ ಅಭಿಮಾನ ಎನ್ನುವುದು ಅತಿಯಾದಾಗ ಅನಾಹುತಗಳು ಸಂಭವಿಸುತ್ತವೆ. ಅಮಾಯಕರು ಬಲಿಯಾಗುತ್ತಾರೆ.

ತಮ್ಮ ತಂಡ ಸೋಲುವುದನ್ನು ಸಹಿಸಲಾಗದೇ ಆಟಗಾರರ ಮೇಲೆ ಹಲ್ಲೆ ನಡೆಸುವುದು, ಮೈದಾನದೊಳಗೆ ನುಗ್ಗಿ ಆಟಕ್ಕೆ ತೊಂದರೆ ಮಾಡುವುದು, ಕೈಗೆ ಸಿಕ್ಕಿದ್ದನ್ನು ಎಸೆಯುವುದು ಹೀಗೆ ಸಹನಶೀಲ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಸಣ್ಣ ಗಲಾಟೆ ವಿಪರೀತವಾಗಿ ಮೈದಾನದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಸಾಯುವವರಿಗಂತೂ ಲೆಕ್ಕವೇ ಇಲ್ಲ. ತಮ್ಮ ತಂಡ ಗೆದ್ದುದಕ್ಕೆ ಖುಷಿ ಪಡುವುದಕ್ಕಿಂತ ಎದುರಾಳಿ ತಂಡದ ಅಭಿಮಾನಿಗಳನ್ನು ಟೀಕಿಸಿ ಖುಷಿ ಪಡುವ ವಿಚಿತ್ರ ಪ್ರವೃತ್ತಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವುದು ವಿಷಾದನೀಯ. ಗೆದ್ದರೆ ಎದುರಾಳಿ ತಂಡದ ಆಟಗಾರರ ಬಗ್ಗೆ ಸೋತರೆ ತಮ್ಮದೇ ಆಟಗಾರರ ಬಗ್ಗೆ ಜನರು ಹಾಕುವ ಅತ್ಯಂತ ಕೀಳು ಮಟ್ಟದ ಪೋಸ್ಟ್‌ಗಳು ಅತಿರೇಕದ ಅಭಿಮಾನ ತಲುಪಿರುವ ಅಧೋಗತಿಗೆ ಸಾಕ್ಷಿ. ದಿನಗಳೆದಂತೆ ನಾವು ಭಾವನಾರಹಿತರಾಗುತ್ತಿದ್ದೇವೆ, ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನ್ನುಕಳೆದುಕೊಳ್ಳುತ್ತಿದ್ದೇವೆ ಎನ್ನುವುದು ನಿಜಕ್ಕೂ ತಲೆತಗ್ಗಿಸುವ ಸಂಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.