ಸಣ್ಣ ಕೋಪವೂ ಮನುಷ್ಯನಿಗೆ ಸಾಕಷ್ಟು ತಾಪ ಕೊಡುತೈತಿ. ಇತಿಹಾಸದಲ್ಲಿ ಒಂದು ಅದ್ಭುತ ಘಟನೆ ನಡೆಯಿತು. ಒಂದು ಸಣ್ಣ ಕೋಪ ಬದುಕನ್ನು ಎಷ್ಟು ಹೀನಾಯ ಮಾಡತೈತಿ ಅನ್ನೋದಕ್ಕೆ ಅದು ಉದಾಹರಣೆ. ಶಂಕರಾಚಾರ್ಯರು ಅದ್ವೈತ ಸಿದ್ಧಾಂತ ಪ್ರತಿಪಾದಕರು. ಯುವ ಸನ್ಯಾಸಿಗಳು. ಮಂಡನಮಿಶ್ರ ಅಂತಾ ಒಬ್ಬರು ಪೂರ್ವ ಮೀಮಾಂಸಕರಿದ್ದರು. ಅಂದರೆ ಕರ್ಮ ಸಿದ್ಧಾಂತ ಹೇಳುವವರು. ಮುಕ್ತಿಗೆ ಜ್ಞಾನ ಮೂಲ ಅಂತ ಶಂಕರರು ಪ್ರತಿಪಾದಿಸಿದರೆ ಕರ್ಮ ಮೂಲ ಅಂತ ಮಂಡನಮಿಶ್ರ ಪ್ರತಿಪಾದಿಸುತ್ತಿದ್ದರು. ಒಮ್ಮೆ ಇಬ್ಬರಿಗೂ ಚರ್ಚಾಕೂಟ ನಡೆಯಿತು. ಅದಕ್ಕೊಂದು ಷರತ್ತು ಇತ್ತು. ಶಂಕರರು ಸೋತರೆ ಸನ್ಯಾಸ ತ್ಯಜಿಸಿ ಸಂಸಾರಿಯಾಗಬೇಕು. ಮಂಡನಮಿಶ್ರ ಸೋತರೆ ಸಂಸಾರ ತ್ಯಜಿಸಿ ಸನ್ಯಾಸ ಸ್ವೀಕರಿಸಬೇಕು. ಚರ್ಚಾಕೂಟಕ್ಕೆ ಒಬ್ಬರು ನಿರ್ಣಾಯಕರು ಬೇಕಲ್ಲ. ನಿರ್ಣಾಯಕರನ್ನು ನೀವೇ ಆರಿಸಿಕೊಳ್ಳಿ ಎಂದು ಮಂಡನಮಿಶ್ರ ಶಂಕರರಿಗೆ ಹೇಳಿದರು. ಶಂಕರರು ಮಂಡನಮಿಶ್ರ ಅವರ ಪತ್ನಿ ಉಭಯಭಾರತಿ ಅವರನ್ನೇ ನಿರ್ಣಾಯಕರನ್ನಾಗಿ ಆರಿಸಿಕೊಂಡರು. ಉಭಯಭಾರತಿ ಎರಡೂ ಸಿದ್ಧಾಂತದಲ್ಲಿ ಪ್ರಾಜ್ಞರಾಗಿದ್ದರು.
ಚರ್ಚೆ ಶುರುವಾಯಿತು. ಚರ್ಚೆ ಆರಂಭಕ್ಕೂ ಮುನ್ನ ಉಭಯಭಾರತಿ ಇಬ್ಬರ ಕೊರಳಿಗೂ ಹೂಮಾಲೆ ಹಾಕಿದ್ದರು. ಇಬ್ಬರೂ ಜ್ಞಾನಿಗಳು. ಒಬ್ಬರಿಗಿಂತ ಒಬ್ಬರು ಅತ್ಯುತ್ತಮವಾಗಿ ವಾದ ಮಂಡಿಸುತ್ತಿದ್ದರು. ಒಬ್ಬರು 10 ಶ್ಲೋಕ ಹೇಳಿದರೆ ಇನ್ನೊಬ್ಬರು 20 ಶ್ಲೋಕ ಹೇಳುತ್ತಿದ್ದರು. ಸುಮಾರು ಹೊತ್ತಿನ ಮೇಲೆ ಉಭಯಭಾರತಿ ‘ನಿಲ್ಲಿಸಿ’ ಎಂದಳು. ಗಂಡನಿಗೆ ‘ಚರ್ಚಾಕೂಟದಲ್ಲಿ ನೀವು ಸೋತಿರಿ’ ಎಂದಳು. ಎಲ್ಲರಿಗೂ ಆಶ್ಚರ್ಯವಾಯಿತು. ‘ನಾನು ಸೋತೆ ಎಂದು ಹೇಗೆ ನಿರ್ಣಯ ಮಾಡಿದಿ’ ಎಂದು ಗಂಡ ಕೇಳಿದ. ಅದಕ್ಕೆ ಉಭಯಭಾರತಿ ‘ಚರ್ಚೆ ಶುರುವಾಗುವುದಕ್ಕೆ ಮೊದಲು ನಿಮ್ಮಿಬ್ಬರ ಕೊರಳಿನಲ್ಲಿಯೂ ಹೂವಿನ ಹಾರ ಹಾಕಿದ್ದೆ. ನೀವಿಬ್ಬರೂ ಜ್ಞಾನಿಗಳು. ಅದರಲ್ಲಿ ಅನುಮಾನವಿಲ್ಲ. ಆದರೆ ಶಂಕರರ ವಾದಕ್ಕೆ ನಿಮ್ಮ ಮನದಲ್ಲಿ ಕೋಪಬಂದು ಅದರಿಂದ ನಿಮ್ಮ ದೇಹ ತಾಪಗೊಂಡು ನಿಮ್ಮ ಕೊರಳಿಗೆ ಹಾಕಿದ ಹೂವಿನ ಹಾರ ಬಾಡಿತು. ಕೋಪ ಬಂದಿದ್ದರಿಂದ ನೀವು ಸೋತಿರಿ’ ಅಂದಳು.
ಕೋಪ ನಮ್ಮನ್ನು ಸೋಲಿಸುತ್ತದೆ. ಮನುಷ್ಯನಿಗೆ ಕೋಪ ಇರಬೇಕು. ಆದರ ನಿಯಂತ್ರಣದಲ್ಲಿರಬೇಕು. ಸಂಸಾರ ಅಂದ ಮೇಲೆ ಕೋಪ ತಾಪ ಎಲ್ಲಾ ಇರ್ತಾವ. ಹೆಂಡತಿ ಕೋಪ ಮಾಡಿಕೊಂಡಿರಬೇಕು. ಆದರೆ ಅಡುಗೆ ಮಾಡೋದನ್ನು ಬಿಟ್ಟಿರಬಾರದು, ಗಂಡ ಕೋಪ ಮಾಡಿಕೊಂಡಿರಬೇಕು. ಆದರ, ಮಕ್ಕಳಿಗೆ ‘ಅಮ್ಮ ಕೋಪ ಮಾಡಿಕೊಂಡಾಳ. ಮೊದಲು ಆಕಿಗೆ ಉಣ್ಣಾಕ ಹೇಳು’ ಅಂತಿರಬೇಕು. ಕೋಪ ಇರಬೇಕು ಆದರ ಪ್ರೀತಿ ಬಿಟ್ಟಿರಬಾರದು. ಕೋಪ ಮಗುವಿನ ಪ್ರೇಮದಂತೆ ಇರಬೇಕು.
ಮನೆಯಲ್ಲಿ ತಿಜೋರಿ ಐತಿ. ಅದರೊಳಗೆ ಬಂಗಾರ, ಬೆಳ್ಳಿ, ರೇಷ್ಮೆ ಸೀರೆ ಇಟ್ಟೀರಿ ಅಲ್ಲವೇನು? ಯಾರೂ ಅದರೊಳಗೆ ಕಸಬರಗಿ ಇಡೋದಿಲ್ಲ. ಮನಸ್ಸು ಅನ್ನೋದು ಒಂದು ತಿಜೋರಿ ಇದ್ದಂಗ. ಅದರೊಳಗೆ ಕಾಯಕ, ದಾಸೋಹ, ಪ್ರೇಮ, ಕರುಣೆ ಮುಂತಾದವುಗಳನ್ನು ಇಡಬೇಕು. ಕಿಮ್ಮತ್ತಿನ ತಿಜೋರಿಯೊಳಗೆ ಕಿಮ್ಮತ್ತಿನ ವಸ್ತುಗಳನ್ನು ಇಟ್ಟ ಹಾಗೆ. ಕೋಪ, ದ್ವೇಷ, ಅಸೂಯೆ ಮುಂತಾದವುಗಳನ್ನು ಇಟ್ಟರೆ ತಿಜೋರಿಯೊಳಗೆ ಕಸಬರಿಗೆ ಇಟ್ಟಂಗೆ. ದೇಹ ಪ್ರಸನ್ನವಾಗಿರಬೇಕು. ಮನಸ್ಸು ಪ್ರಸನ್ನವಾಗಿರಬೇಕು. ಆತ್ಮವೂ ಪ್ರಸ್ನವಾಗಿರಬೇಕು. ಹಣತೆ, ಬತ್ತಿ, ಎಣ್ಣೆ ಈ ಮೂರೂ ಇದ್ದರೆ ಬೆಳಕು. ದೇಹ ಪ್ರಸನ್ನತೆ, ಮನಸ್ಸು ಪ್ರಸನ್ನತೆ, ಆತ್ಮ ಪ್ರಸನ್ನತೆ ಈ ಮೂರೂ ಇದ್ದರೆ ಬದುಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.