ನಿಸರ್ಗ ನಮಗೆಲ್ಲರಿಗೂ ಸಮಾನ ಅವಕಾಶ ಕೊಟ್ಟಿದೆ. ನಮ್ಮ ವ್ಯಾವಹಾರಿಕ ಬುದ್ಧಿಗೆ ಇವ ಶ್ರೀಮಂತ, ಇವ ಬಡವ, ಇವ ದೊಡ್ಡವ, ಇವ ಸಣ್ಣವ, ಇವೆಲ್ಲ ನಮ್ಮ ದೃಷ್ಟಿಗೆ ಅಷ್ಟೆ. ಆದರೆ, ನಿಸರ್ಗದ ದೃಷ್ಟಿಯಲ್ಲಿ ಯಾರೂ ಬಡವರೂ ಅಲ್ಲ ಶ್ರೀಮಂತರೂ ಅಲ್ಲ. ನಾವು ಶ್ರೀಮಂತರದೀವಿ ಅಂತಾ ನೀವು ಅನಬಹುದು. ಯಾವಾಗಲೂ ಫಸ್ಟ್ ಕ್ಲಾಸ್ ಬೋಗಿಯೊಳಗೇ ಹೋಗ್ತೀವಿ ಅಂತ ಅನಬಹುದು. ಟ್ರೈನ್‌ನಲ್ಲಿ ಹೋಗುವಾಗ ಮೊದಲ ದರ್ಜೆ, ಎರಡನೇ ದರ್ಜೆ, ಮೂರನೇ ದರ್ಜೆ ಅಷ್ಟೆ. ಟ್ರೈನ್ ಇಳಿದ ಮೇಲೆ ಭೂಮಿ ತಾಯಿ ಅಂತಾಳ, ‘ಇಲ್ಲಿ ಯಾವುದೇ ದರ್ಜೆ ಇಲ್ಲ ಅಂತ. ನಾನು ದರ್ಜೆಯಿಲ್ಲದವಳು, ನಾನು ದರ ಇಲ್ಲದವಳು, ನಾನು ಜಾತಿ ಇಲ್ಲದವಳು’ ಎಂದು.
ಎಲ್ಲರೂ ಭೂಮಿ ಮೇಲೆ ನಡೀಬೇಕಲ್ಲ? ಭೂಮಿಯ ಸೃಷ್ಟಿಯಲ್ಲಿ ಮೊದಲ ದರ್ಜೆ, ಕೊನೆ ದರ್ಜೆ ಅನ್ನೋದು ಇಲ್ಲ. ಈಗ ಸೂರ್ಯ ಇದಾನ. ‘ಇವರು ಶ್ರೀಮಂತರು ಅದಾರ, ಅವರ ಮನೆಗಷ್ಟೇ ಬೆಳಕು ಕೊಡಬೇಕು. ಬಡವರ ಮನಿಗೆ ಬೆಳಕು ಕೊಡದಿದ್ದರೂ ನಡೀತೈತಿ’ ಅಂತ ಬೆಳಕು ಕೊಡೋದು ಬಿಟ್ಟಾನೇನು? ನಮ್ಮ ದೃಷ್ಟಿಯಲ್ಲಿ ಬಂಗಲೆ, ಆಶ್ರಯ ಮನೆ. ಆದರೆ ಸೂರ್ಯನ ದೃಷ್ಟಿಯಲ್ಲಿ ಎಲ್ಲ ಒಂದೇ. ಬೆಳಕಿಗೆ ಬಡತನವೂ ಇಲ್ಲ, ಶ್ರೀಮಂತಿಕೆಯೂ ಇಲ್ಲ. ಮೇಘಗಳು ಆಕಾಶದಲ್ಲಿ ತೇಲಿ ಬರುವಾಗ ‘ಮೇಘಗಳೇ ನೀವು ನಿಮಗೆಲ್ಲಿ ಬೇಕೋ ಅಲ್ಲಿ ಮಳೆ ಬೀಳಿಸಬ್ಯಾಡಿ. ನಮ್ಮ ಜಾತಿಯವರ ಹೊಲದ ಮೇಲಷ್ಟೇ ಮಳೆ ಬೀಳಿಸಿ’ ಅಂತ ಹೇಳಿ ನೋಡೋಣ. ಆಗ ಮೇಘ ಅನತೈತಿ, ‘ನಿಮಗ ತಲೆ ಕೆಟ್ಟೈತಿ ಅಂತ ನಮಗೂ ತಲೆ ಕೆಟ್ಟೈತೇನು?, ನೀವು ಕೆಳಗೆ ನಿಂತು ನೋಡೋರಿಗೆ ಹೆಚ್ಚು ಕಡಿಮೆ ಕಾಣತೈತಿ, ಆ ಜಾತಿ ಈ ಜಾತಿ ಅಂತ ಕಾಣತೈತಿ. ನಾವು ಮೇಲೆ ನಿಂತು ನೋಡೋರಿಗೆ ಕೆಳಗಿರುವವರು ಬರೇ ಭೂಮಿ ತಾಯಿಯ ಮಕ್ಕಳು ಅಂತ ಅಷ್ಟೇ ಕಾಣತೈತಿ’ ಅಂತ.
ನಿಸರ್ಗ ಎಲ್ಲರಿಗೂ ನೀರು, ಗಾಳಿ, ಬೆಳಕ ಎಲ್ಲ ಸಮನಾಗಿ ಕರುಣಿಸಿದರೂ ಇಲ್ಲಿ ಯಾಕೆ ಒಬ್ಬ ಬುದ್ಧನಾದ ಇನ್ನೊಬ್ಬ ಬಿದ್ದ? ಯಾಕೆ ಒಬ್ಬ ವಿಜ್ಞಾನಿ, ಇನ್ನೊಬ್ಬ ಅಜ್ಞಾನಿ? ಒಂದೇ ಕ್ಲಾಸಿದೆ, ಒಂದೇ ಟೀಚರ್, ಒಂದೇ ವಿಷಯ ಆದರೂ ಒಬ್ಬವ ಮೊದಲು ಬರ್ತಾನೆ ಇನ್ನೊಬ್ಬ ಫೇಲಾಗ್ತಾನ ಹಿಂಗ್ಯಾಕಾತು?
ಮನುಷ್ಯನಿಗೆ ಎರಡು ಪ್ರವೃತ್ತಿಗಳು. ಒಂದು ಸಹಜ ಪ್ರವೃತ್ತಿ. ಇನ್ನೊಂದು ಪ್ರಯತ್ನ ಪ್ರವೃತ್ತಿ. ಸಹಜ ಪ್ರವೃತ್ತಿ ಅಂದರ ನೀವೇನೂ ಪ್ರಯತ್ನ ಮಾಡೋದೇ ಬೇಡ. ಸಹಜವಾಗಿ ಬದಲಾವಣೆ ಆಗತಿರತೈತಿ. ಈಗ ನಿಮ್ಮ ದೇಹ ಐತಿ. ಬಾಲ್ಯ ಐತಿ, ಯುವಕರಾಗಲು ಏನಾದರೂ ಪ್ರಯತ್ನ ಪಟ್ಟೀರೇನು? ಮುಪ್ಪಾಗಕೆ ಏನಾದರೂ ಪ್ರಯತ್ನ ಪಟ್ಟೀರೇನು? ಮುಪ್ಪಾದಮೇಲೆ ಸಾವಾಗತೈತಿ. ಪ್ರಯತ್ನ ಮಾಡಿದರೂ ನಿಲ್ಲೋದಿಲ್ಲ. ಮುಪ್ಪಾಗಬಾರದು ಎಂದು ತಡೆಯೋಕೆ ಸಾಧ್ಯ ಐತೇನು?
ಪ್ರಯತ್ನ ಪ್ರವೃತ್ತಿ ಇದೆ. ಪ್ರಯತ್ನದಿಂದ ಸಾಧಿಸೋದು. ಕಣ್ಣಿಲ್ಲದವರಿಗೆ ಪುಟ್ಟರಾಜ ಗವಾಯಿಗಳು ಕಣ್ಣಾದರು. ಕಣ್ಣಿಲ್ಲದಿದ್ದರೂ ಅವರಿಗೆ ಕರುಳು ಇತ್ತು. ಇದು ಪ್ರಯತ್ನ ಪ್ರವೃತ್ತಿ. ಕಣ್ಣಿದ್ದವರಿಗೆ ಜಗತ್ತು ಕಾಣತೈತಿ. ಆದರೆ ತಮಗೇನು ಬೇಕೋ ಅದು ಕಾಣೋದಿಲ್ಲ. ಕಣ್ಣಿಲ್ಲದವರಿಗೆ ಜಗತ್ತು ಕಾಣೋದಿಲ್ಲ. ಆದರೆ ತಮಗೇನು ಬೇಕೋ ಅದು ಕಾಣತೈತಿ. ಪ್ರಯತ್ನದಿಂದ ಇದನ್ನು ಸಾಧಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.