ADVERTISEMENT

ನುಡಿ ಬೆಳಗು –66: ಪ್ರಯತ್ನ ಪ್ರವೃತ್ತಿ ಇರಬೇಕು

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 14 ನವೆಂಬರ್ 2024, 0:01 IST
Last Updated 14 ನವೆಂಬರ್ 2024, 0:01 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಮೇರಿ ಕೋಮ್ ಅಂತಾ ಒಬ್ಬರು ಬಾಕ್ಸರ್. ಆ ಹೆಣಮಗಳು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ, ಬೆಳ್ಳಿ ಪದಕ ಗೆದ್ದಳು. ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಳು. ಅಷ್ಟರಲ್ಲಿಯೇ ಆಕೆಗೆ ಎರಡು ಮಕ್ಕಳಿದ್ದರು. ಅಂದರೆ ಎರಡು ಮಕ್ಕಳು ತಾಯಿಯಾಗಿ ಹೋಗಿ ಪ್ರಯತ್ನ ಮಾಡಿ ಭಾರತಕ್ಕೆ ಪದಕ ತಂದುಕೊಟ್ಟಳು.

ಜಮಖಂಡಿ ಹತ್ತಿರ ಚಿಕ್ಕಪಡಸಲಗಿ ಅಂತ ಒಂದು ಊರಿದೆ. ಕೃಷ್ಣಾ ನದಿಯ ದಂಡೆ. ನದಿಗೆ ಉಸುಕಿನ ಚೀಲ ಹಾಕಿ ನೀರು ನಿಲ್ಲಿಸಿ ರೈತರು ಬೇಸಾಯ ಮಾಡುತ್ತಿದ್ದರು. 20–30 ಹಳ್ಳಿಯ 1,500 ಕುಟುಂಬಗಳು ಇದನ್ನೇ ಮಾಡುತ್ತಿದ್ದವು. ಆದರೆ ಪ್ರವಾಹ ಬಂದರೆ ಈ ಉಸುಕಿನ ಚೀಲಗಳೆಲ್ಲಾ ತೇಲಿ ಹೋಗುತ್ತಿದ್ದವು. ರೈತರೆಲ್ಲಾ ಕೂಡಿ ನಾವ್ಯಾಕೆ ಡ್ಯಾಂ ಕಟ್ಟಬಾರದು ಅಂತಾ ಆಲೋಚಿಸಿದರು. ಅದರಂತೆ ಒಂದೇ ವರ್ಷದಲ್ಲಿ ರೈತರು ಡ್ಯಾಂ ಕಟ್ಟಿದರು. ಭಾರತದ ಇತಿಹಾಸದಲ್ಲಿ ರೈತರೇ ಕಟ್ಟಿದ ಮೊದಲ ಡ್ಯಾಂ ಅಂದರೆ ಅದು. ಅಂದರ ಪ್ರಯತ್ನದಿಂದ ಮನುಷ್ಯ ಎಷ್ಟು ದೊಡ್ಡವನಾಗುತ್ತಾನೆ.

ADVERTISEMENT

ಒಬ್ಬ ವ್ಯಕ್ತಿ ಹೇಳತಿದ್ದ. ‘ನಾನು ಬಹುದೂರದ ವ್ಯಕ್ತಿಗಳ ಜೊತೆಗೆ ಮತಾಡುವ ಹಾಗೆ ಮಾಡ್ತೀನಿ’ ಅಂತ. ‘ಇದೆಲ್ಲ ಹ್ಯಾಂಗೆ ಸಾಧ್ಯ’ ಎಂದು ಅವನ ಸ್ನೇಹಿತರು ಹೇಳುತ್ತಿದ್ದರು. ಆದರೂ ಆ ವ್ಯಕ್ತಿ ಪ್ರಯತ್ನ ಬಿಡಲಿಲ್ಲ. ಅವನೇ ಫೋನ್ ಕಂಡು ಹಿಡಿದ ಗ್ರಹಾಂ ಬೆಲ್. ಆತ ಫೋನ್ ಕಂಡು ಹಿಡಿದ ತಕ್ಷಣ ಮೊಟ್ಟಮೊದಲು ಫೋನ್ ಮಾಡಿದ್ದು ಆತನ ಗರ್ಲ್ ಫ್ರೆಂಡ್ ಮಾರ್ಗರೆಟ್ ಹೆಲೊ ಅವಳಿಗೆ. ಅವಳಿಗೆ ಹೆಲೊ ಎಂದ ಜಗತ್ತೆಲ್ಲಾ ಹೆಲೊ ಹೆಲೊ ಅನ್ನಾಕತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಮುರ್ಸಿದಾಬಾದ್ ಅಂತ ಒಂದು ಊರು. ಅಲ್ಲಿ ಒಬ್ಬ ಹುಡುಗ ಬಾಬರ್ ಅಲಿ. ಅವರ ಊರಲ್ಲಿ ಶಾಲೆ ಇರಲಿಲ್ಲ. ಅವ 10 ಕಿಮೀ ರಿಕ್ಷಾದಲ್ಲಿ ಹೋಗುತ್ತಿದ್ದ ಮತ್ತೆ ಎರಡು ಕಿಮೀ ನಡೀತಿದ್ದ. ಅವನಿಗೆ ‘ನಾನೇನೋ ಶಾಲೆಗೆ ಹೋಗ್ತೀನಿ. ಆದರೆ ಊರ ಮಕ್ಕಳು ಶಾಲೆಗೆ ಹೋಗುತ್ತಿಲ್ಲ’ ಎಂದು ತಾನು ಶಾಲೆಯಿಂದ ಬಂದ ಮೇಲೆ 8–10 ಮಂದಿ ಹುಡುಗರಿಗೆ ಅಕ್ಷರ ಕಲಿಸುತ್ತಿದ್ದ. ಮನೆ ಹಿತ್ತಲಿನಲ್ಲಿಯೇ ಒಂದು ಚಪ್ಪರ ಇತ್ತು ಅಲ್ಲಿಯೇ ಪಾಠ ಮಾಡುತ್ತಿದ್ದ. ಬರಬರುತ್ತಾ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಒಂದು ದಿನ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ  ಸೇನ್ ಇವನನ್ನು ಶಾಂತಿನಿಕೇತನಕ್ಕೆ ಕರೆಸಿದರು. ‘ನಿನ್ನ ಶಾಲೆ ಬಗ್ಗೆ ಹೇಳು’ ಎಂದರು. ತನ್ನ ಶಾಲೆಗೆ ಆನಂದ ಶಿಕ್ಷಣ ನಿಕೇತನ ಅಂತ ಹೆಸರಿಟ್ಟಿದ್ದ ಬಾಬರ್. ‘ನಾನು ವಿವೇಕಾನಂದರಿಂದ ಸ್ಫೂರ್ತಿ ಪಡೆದೆ’ ಅಂದ. ಸಿಎನ್ಎನ್ ಐಬಿಎನ್ ನವರು ರಿಯಲ್ ಹೀರೊ ಅಂತ ಪ್ರಶಸ್ತಿ ಕೊಟ್ಟು 10 ಲಕ್ಷ ರೂಪಾಯಿ ಕೊಟ್ಟರು. ಹುಡುಗ ಅದನ್ನು ಮನೆಗೆ ಒಯ್ಯಲಿಲ್ಲ. ಶಾಲೆಗೆ ಒಂದಿಷ್ಟು ಜಾಗ ಖರೀದಿ ಮಾಡಿದ. ನಂತರ ಬಿಬಿಸಿ ಸಮೀಕ್ಷೆ ಮಾಡಿತು. 8 ಮಕ್ಕಳಿಂದ ಆರಂಭವಾದ ಶಾಲೆಯಲ್ಲಿ 800 ಮಕ್ಕಳು ಕಲಿಯುತ್ತಿದ್ದರು. ಇವನಿಂದ ಕಲಿತ ಮಕ್ಕಳೇ ಅಲ್ಲಿ ಶಿಕ್ಷಕರಾಗಿದ್ದರು. ಅವನೇ ಹೆಡ್ ಮಾಸ್ಟರ್ ಆಗಿದ್ದ. ಬಿಬಿಸಿ ಅವನಿಗೆ ವಿಶ್ವದ ಅತ್ಯಂತ ಕಿರಿಯ ಮುಖ್ಯ ಶಿಕ್ಷಕ ಎಂಬ ಬಿರುದು ಕೊಟ್ಟಿತು. ಇದು ಪ್ರಯತ್ನ ಪ್ರವೃತ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.