ಸಂಪತ್ತು ಗಳಿಸುವುದಷ್ಟೇ ಸಾಧನೆ ಅಲ್ಲ; ಸಾಧನೆ ಮಾಡುವುದೇ ಒಂದು ಸಂಪತ್ತು.
ಒಂದು ಬಸ್ ನದಿಗೆ ಬಿದ್ದಿತ್ತು. ಬಸ್‌ನೊಳಗ ಇದ್ದವರೆಲ್ಲಾ ಕಾಪಾಡಿ ಕಾಪಾಡಿ ಅಂತ ಕೂಗುತ್ತಿದ್ದರು. ಒಬ್ಬವ ಮಾತ್ರ ‘ಕಂಡಕ್ಟರ್ ಎಲ್ಲಿದಾನ್ರಿ, ಕಂಡೆಕ್ಟರ್ ಎಲ್ಲದನಾನ್ರಿ’ ಅಂತ ಹುಡುಕುತಿದ್ದ. ‘ಅಲ್ಲೋ ಎಲ್ಲ ಮುಳುಗಾಕತ್ತಾರ ಈಗ ನಿನಗೆ ಕಂಡಕ್ಟರ್ ಯಾಕೆ?’ ಎಂದು ಒಬ್ಬ ಕೇಳಿದ. ಅದಕ್ಕೆ ಇವ ‘ಅಲ್ರೀ ಟಿಕೆಟ್ ಹಿಂದೆ 5 ರೂಪಾಯಿ ಬರೆದು ಕೊಟ್ಟಾನ’ ಎಂದ. ಅಂದರ ಸಾವಿನ ದವಡೆಯಲ್ಲಿಯೇ ನಮಗೆ ಸಂಪತ್ತಿನದ್ದೇ ಚಿಂತೆ. ಸಂಪತ್ತು ಬ್ಯಾಡ ಅಂತ ಯಾರಿಗೆ ಇಚ್ಛೆ ಅದ? ಪರಿಶ್ರಮ ಬೇಡ ಅಂತ ಯಾರಿಗೆ ಅದ? ಯಾವ ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ಫೇಲಾಗಬೇಕು ಅಂತೈತಿ? ಯಾವ ವ್ಯಾಪಾರಿಗೆ ನಷ್ಟ ಆಗಬೇಕು ಅಂತೈತಿ? ಎಲ್ಲರಿಗೂ ಬಯಕೆ ಅದ. ಆದರೂ ನಾವು ಅಂದುಕೊಂಡಂತೆ ನಡೆಯವಲ್ದು ಯಾಕ? ದೋಷ ಎಲ್ಲೈತಿ? ಸಮಸ್ಯೆ ಎಲ್ಲೈತಿ ಅಂದರ ಸಮಸ್ಯೆ ಹೊರಗಿಲ್ಲ, ನಮ್ಮೊಳಗೇ ಐತಿ. ಪ್ರಯತ್ನ ಮಾಡತೇನೆ ಎಂಬ ಬಯಕೆ ಇದ್ದರೂ ಒಳಗೊಂದು ಚಂಚಲ ಮನಸ್ಸು ಐತಲ್ಲ, ಅದೇ ದೋಷ. ಇದರಿಂದಲೇ ನಮಗೆ ಸಾಧನೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ವಿಕ್ಷಿಪ್ತ ದೋಷ ಅಂತ ಕರೀತಾರ.
ಗಾಳಿಯನ್ನು ಕಟ್ಟಿ ಹಿಡಿಯಬಹುದು, ಆದರ ಮನಸ್ಸನ್ನು ನಿಲ್ಲಿಸೋದು ಕಷ್ಟ. ಮನಸ್ಸು ಎಷ್ಟು ಚಂಚಲ ಅಂದರ, ಒಬ್ಬ ಬೆಳಿಗ್ಗೆ 5ಕ್ಕೇ ಏಳಬೇಕು ಅಂತ ಅಲಾರಾಂ ಇಟ್ಟಕೊಂಡ. ಅಲಾರಾಂ ಆದಾಗ ಇನ್ನೊಂದು ಐದು ನಿಮಿಷ ಮಲಗಿ ಏಳ್ತೀನಿ ಅಂದವ ಎದ್ದಿದ್ದು ಬೆಳಿಗ್ಗೆ 8 ಗಂಟೆಗೆ. ಅಲಾರಾಂ ಇಟ್ಟಿದ್ದೂ ಅದೇ ಮನಸ್ಸು, ಹೊಳ್ಳಿ ಮಲಕಳಕ್ಕೆ ಹೇಳಿದ್ದೂ ಅದೇ ಮನಸ್ಸು.
ಒಬ್ಬ ಸಂಸಾರ ಸಾಕು ಅಂತ ಮಠಕ್ಕೆ ಬಂದ. ಸಾಯಂಕಾಲ ಆದ ತಕ್ಷಣ ಗುರುಗಳಿಗೆ ‘ಬರ್ತೀನಿ ಅಪ್ಪಾರೆ’ ಎಂದ. ಗುರುಗಳು ಕೇಳಿದರು, ‘ಯಾಕೋ ಎಲ್ಲಿಗೆ ಹೊಂಟಿ’ ಎಂದು ಕೇಳಿದರು. ‘ಮನಿಗೆ’ ಅಂದ. ಇದು ಮನಸ್ಸಿನ ಗುಣಧರ್ಮ. ಒಮ್ಮೆ ಪುಸ್ತಕ ಓದಬೇಕು ಅಂತ ಕೈಯಲ್ಲಿ ಹಿಡಿತೈತಿ, ಒಂದೈದು ನಿಮಿಷ ಮೊಬೈಲ್ ನೋಡಿ ಆಮೇಲೆ ಓದೋಣ ಅಂತೈತಿ ಮನಸ್ಸು. ಇದು ಮನಸ್ಸಿನ ಚಾಂಚಲ್ಯ ಗುಣ.
ಒಬ್ಬವ ಗುರುಗಳಿಗೆ ನಮಸ್ಕಾರ ಮಾಡಿ ಇವತ್ತಿಂದ ಓಸಿ ಆಡೋದು ಬಿಟ್ಟೆ ಎಂದ. ಗುರುಗಳು ಆಶೀರ್ವಾದ ಮಾಡಿ ಕಲ್ಲು ಸಕ್ಕರೆ ಕೊಟ್ಟರು. ಕಲ್ಲು ಸಕ್ಕರೆ ನೋಡಿದ್ದೇ ‘ಗುರುಗಳು ಕೊಟ್ಟಾರ, ಇದನ್ನು ಎಣಿಸಿ ನೋಡೋಣ. ಕೊನೇ ಪ್ರಯತ್ನ ಅಂತ ಆ ನಂಬರಿಗೆ ಹಾಕೋಣ’ ಅಂತ ಹೇಳತೈತಿ ಮನಸ್ಸು. ಅಂದರೆ ಅಜ್ಜಾರು ಕೊಟ್ಟ ಕಲ್ಲು ಸಕ್ಕರೆಯನ್ನೂ ಎಣಿಸಿ ನಂಬರಿಗೆ ದೊಡ್ಡು ಹಚ್ಚೋ ಭಕ್ತರೂ ಅದಾರ. ಮನಸ್ಸು ಒಮ್ಮೆ ಹಾಂಗೆ ಮಾಡಸ್ತೈತಿ ಇನ್ನೊಮ್ಮೆ ಹೀಂಗ ಮಾಡಸ್ತೈತಿ.
ಮನಸ್ಸಿನ ಚಂಚಲ ಸ್ವಭಾವವನ್ನು ಕಟ್ಟಿ ಹಾಕುವುದು ಕಷ್ಟ. ಎಲ್ಲಿ ಕಾಣತೈತಿ, ಕೇಳಸತೈತಿ, ರುಚಿ ಹತ್ತತೈತಿ ಅಲ್ಲಿ ಹೋಗಿ ಬೀಳತೈತಿ ಮನಸ್ಸು. ಒಮ್ಮೆ ವಿಪರೀತ ವಿಚಾರ ಮಾಡತೈತಿ. ನಮ್ಮೊಳಗಿರುವ ಮನಸ್ಸೇ ಹೀಂಗ ಮಾಡಿದರೆ ರಕ್ಷಣೆ ಮಾಡೋರು ಯಾರು? ಎಲ್ಲ ಪ್ರಯತ್ನ ಮಾಡಬೇಕು ಅಂತೀವಿ. ಆದರ ಮನಸ್ಸು ಚಂಚಲ. ಇದರಿಂದ ತಪ್ಪಿಸಿಕೊಳ್ಳಬೇಕು. ಮನಸ್ಸು ನಿಯಂತ್ರಣದಲ್ಲಿಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.