ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕರಾದ ನಟರಾಜ ಬೂದಾಳ್ ಅವರು, ಬೌದ್ಧ ದರ್ಶನದ ಕುರಿತು ಯೂಟ್ಯೂಬ್ ವಾಹಿನಿಯೊಂದಕ್ಕೆ ಉಪನ್ಯಾಸ ಸರಣಿಯನ್ನು ನೀಡಿದ್ದಾರೆ. ಅದರಲ್ಲಿ ಅವರು ಉಲ್ಲೇಖಿಸಿದ ಕಥೆಯೊಂದು ನನ್ನ ಮನಸ್ಸಿಗೆ ತುಂಬಾ ನಾಟಿತು.
ಒಂದೂರಿನಲ್ಲಿ ಒಬ್ಬ ಭಿಕ್ಷುಕ ರಸ್ತೆ ಬದಿ ಹಳೆ ಪೆಟ್ಟಿಗೆಯೊಂದರ ಮೇಲೆ ಕುಳಿತು ದಿನವೂ ಭಿಕ್ಷೆ ಬೇಡುತ್ತಿದ್ದ. ಒಮ್ಮೆ ಆ ದಾರಿಯಲ್ಲಿ ಸಾಗುತ್ತಿದ್ದ ಬುದ್ಧನ ಬಳಿಯೂ ಭಿಕ್ಷೆಗಾಗಿ ತನ್ನ ಪಾತ್ರೆಯನ್ನೊಡ್ಡಿದ. ಬುದ್ಧ ತನ್ನ ಜೇಬನ್ನೆಲ್ಲ ತಡಕಾಡಿದ. ಆದರೆ ಭಿಕ್ಷುಕನಿಗೆ ಹಾಕಲು ಒಂದು ಬಿಡಿಗಾಸೂ ಸಿಗಲಿಲ್ಲ. ಆದರೆ ಅವನಿಗೇಕೋ ಭಿಕ್ಷುಕ ಕುಳಿತಿದ್ದ ಪೆಟ್ಟಿಗೆಯ ಕುರಿತು ಕುತೂಹಲವೆನಿಸಿತು.
‘ಏನಿದೆ ಆ ಪೆಟ್ಟಿಗೆಯಲ್ಲಿ’ ಎಂದು ಪ್ರಶ್ನಿಸಿದ. ‘ಗೊತ್ತಿಲ್ಲ ಸ್ವಾಮಿ, ಹಳೆ ಕಾಲದ ಪೆಟ್ಟಿಗೆ... ಏನಿದ್ದೀತು ಮಣ್ಣು’ ಎಂದು ಉದಾಸೀನದಿಂದ ಉತ್ತರಿಸಿದ ಭಿಕ್ಷುಕ. ‘ನೀನು ಯಾವಾಗಿನಿಂದ ಇದರ ಮೇಲೆ ಕುಳಿತು ಭಿಕ್ಷೆ ಬೇಡುತ್ತಿದ್ದಿ’ ಎಂದು ಪ್ರಶ್ನಿಸಿದ ಬುದ್ಧ. ‘ಸುಮಾರು ಮೂವತ್ತು ವರ್ಷಗಳಿಂದಲೂ ನಾನು ಇದರ ಮೇಲೆ ಕೂತು ಭಿಕ್ಷೆ ಬೇಡ್ತಿದೀನಿ ಸ್ವಾಮಿ’ ಎಂದ ಭಿಕ್ಷುಕ. ‘ಒಮ್ಮೆ ಬೀಗ ಒಡೆದು ಅದರೊಳಗೆ ಏನಿದೆ ಅಂತ ನೋಡು’ ಎಂದ ಬುದ್ಧ. ‘ಅಯ್ಯೋ ಬಿಡಿ ಸ್ವಾಮಿ ಅದರಲ್ಲೇನಿದ್ದೀತು’ ಎಂದು ನಿರ್ಲಕ್ಷ ಮಾಡಿದ ಭಿಕ್ಷುಕ.
ಕೊನೆಗೂ ಬುದ್ಧನ ಒತ್ತಾಯದ ಮೇರೆಗೆ ಭಿಕ್ಷುಕ ಒಂದು ಕಲ್ಲನ್ನೆತ್ತಿ ತುಕ್ಕು ಹಿಡಿದಿದ್ದ ಪೆಟ್ಟಿಗೆಯ ಬೀಗವನ್ನು ಒಡೆದ. ಒಳಗೆ ನೋಡಿದರೆ ಪೆಟ್ಟಿಗೆಯ ತುಂಬಾ ಚಿನ್ನದ ನಾಣ್ಯಗಳು. ಇಂತಹ ಅಪಾರ ಸಂಪತ್ತಿನ ಮೇಲೇ ಕುಳಿತು ಮೂವತ್ತು ವರ್ಷಗಳಿಂದ ಈ ಭಿಕ್ಷುಕ, ಎಲ್ಲರ ಬಳಿ ದರಿದ್ರನಂತೆ ಅಂಗಲಾಚಿ ಭಿಕ್ಷೆ ಬೇಡಿದ್ದಾನೆ.
ಹೀಗೆ ಅಲ್ಲವೇ ನಮ್ಮೆಲ್ಲರ ಬದುಕು? ನಮ್ಮ ಅಂತರಂಗದ ಸಿರಿವಂತಿಕೆಯನ್ನು ನಾವು ಗುರುತಿಸುವುದೇ ಇಲ್ಲ. ಇದು ನಮ್ಮಾಳದಲ್ಲಿದ್ದರೂ ಅದನ್ನು ಪಡೆದುಕೊಳ್ಳುವ ಗೋಜಿಗೆ ಹೋಗದೇ ಬಾಹ್ಯ ಸಂಪತ್ತಿಗಾಗಿ ಎಲ್ಲರೂ ಭಿಕ್ಷುಕರಂತೆ ಈ ಜಗತ್ತಿನಲ್ಲಿ ಕಂಡ ಕಂಡ ಕಡೆ ಕೈ ಚಾಚುವವರೇ. ನಾವು ನಮ್ಮೊಳಗಿರುವ ವ್ಯಕ್ತಿತ್ವವೆಂಬ ಮಹಾಘನದ ಕುರಿತು ಅರಿವನ್ನು ಮೂಡಿಸಿಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ಬುದ್ಧನ ಕಟ್ಟ ಕಡೆಯ ಸಂದೇಶವೂ ಇದೇ ಆಗಿತ್ತು. ಬುದ್ಧ ನಿರ್ವಾಣದ ಹಂತದಲ್ಲಿದ್ದಾಗ ಅವನ ಶಿಷ್ಯ ಆನಂದ ಈ ‘ಜಗತ್ತಿಗೆ ನಿಮ್ಮ ಕೊನೆಯ ಸಂದೇಶವೇನು’ ಎಂದು ಪ್ರಶ್ನಿಸಿದಾಗ ಬುದ್ಧ ‘ಅತ್ತ ದೀಪ ಭವ’ ಎಂದು ಉತ್ತರಿಸಿದ. ಅಂದರೆ ‘ನಿನಗೆ ನೀನೇ ಬೆಳಕು’ ಎಂಬುದಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.