ADVERTISEMENT

ನುಡಿ ಬೆಳಗು: ಸಾಮಾನ್ಯ ಜ್ಞಾನ

ಪಿ. ಚಂದ್ರಿಕಾ
Published 9 ಅಕ್ಟೋಬರ್ 2023, 23:00 IST
Last Updated 9 ಅಕ್ಟೋಬರ್ 2023, 23:00 IST
   

ಮರದ ವ್ಯಾಪಾರಿಯ ಬಳಿಗೆ ಕೆಲಸ ಕೇಳಿಕೊಂಡು ಒಬ್ಬ ಬಂದ. ತೀರಾ ಹಸಿದವನಂತೆ ಕಂಡ ಅವನಿಗೆ ಮರದ ವ್ಯಾಪಾರಿಯು ಅತ್ಯಂತ ಕರುಣೆಯಿಂದ ಊಟ ಕೊಟ್ಟು ನಂತರ ಕೆಲಸ ಮಾಡು ಎಂದು ಬಿಟ್ಟ. ಕೆಲಸಗಾರ ಮೊದಲ ದಿನ ಅತ್ಯಂತ ಶ್ರದ್ಧೆಯಿಂದ ಮರ ಕಡಿಯ ತೊಡಗಿದ. ಅವನು ಕೆಲಸ ಮಾಡುವ ವೇಗವನ್ನು ನೋಡಿ ಸ್ವತಃ ಮರದ ವ್ಯಾಪಾರಿಯೇ ದಂಗಾದ. ತಾನು ಇಷ್ಟು ವರ್ಷಗಳಲ್ಲಿ ಇಂಥಾ ಕೆಲಸಗಾರನನ್ನು ಮಾತ್ರ ನೋಡಲೇ ಇಲ್ಲ, ಇನ್ನು ಬಹಳ ಲಾಭವನ್ನು ಗಳಿಸಿಕೊಳ್ಳಬಹುದು ಎಂದು ಸಂತಸಗೊಂಡ.

ಎರಡನೆಯ ದಿನವೂ ಅದೇ ಉತ್ಸಾಹದಲ್ಲಿ ಕೆಲಸ ಮಾಡಿದ ಆ ಕೆಲಸಗಾರ. ಮರದ ವ್ಯಾಪಾರಿಗೆ ನಿಜಕ್ಕೂ ಖುಷಿಯಾಗಿಬಿಟ್ಟಿತ್ತು. ಎಂಥಾ ಕೆಲಸಗಾರ ತಾನಾಗೇ ಒದಗಿಬಂದನಲ್ಲಾ ಎಂದು. ಮೂರನೇ ದಿನ ನಾಲ್ಕನೇ ದಿನ ಹೀಗೆ ಆ ಕೆಲಸಗಾರನ ಉತ್ಸಾಹ ಸ್ವಲ್ಪವೂ ಕುಂದಲಿಲ್ಲ. ಆದರೆ ಅಚ್ಚರಿ ಎಂದರೆ, ಎರಡನೇ ದಿನ... ಮೂರನೇ ದಿನ... ಹೀಗೆ ದಿನದಿಂದ ದಿನಕ್ಕೆ ಅವನು ಕಡಿದ ಮರಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿತು. ಕೆಲಸಗಾರನಿಗೆ ಶಕ್ತಿ ಸಾಲದೇನೋ ಎಂದು ವ್ಯಾಪಾರಿ ಒಳ್ಳೆಯ ಊಟ ಕೊಟ್ಟ. ಊಹುಂ. ಏನಂದರೂ ಕೆಲಸಗಾರ ಮೊದಲ ದಿನದ ಕೆಲಸಕ್ಕೆ ಸಮನಾಗಿ ಮಾಡಲಾಗದೆ ಹೋದ.

ಇದು ಮರದ ವ್ಯಾಪಾರಿಗೆ ಕಗ್ಗಂಟಾಗುತ್ತಾ ಬಂತು. ಆತ ಕೆಲಸಗಾರನನ್ನೇ ಗಮನಿಸುತ್ತ ಬಂದ. ಕೆಲಸದಲ್ಲಿ ಉತ್ಸಾಹವಿದೆ, ಮಾಡುವ ನಿಷ್ಠೆ ಇದೆ. ಆದರೆ ಕೆಲಸ ಸಾಗುತ್ತಿಲ್ಲ ಯಾಕೆ? ಎಂದು ಯೋಚಿಸುವಾಗ, ಇದ್ದಕ್ಕಿದ್ದಂತೆ ಅವನಿಗೆ ಏನೋ ಹೊಳೆದಂತಾಗಿ ಕೆಲಸಗಾರನ ಕೊಡಲಿಯನ್ನು ಪರೀಕ್ಷಿಸಿದ. ಅದು ಚೂಪಾಗಿರದೆ ಮೊಂಡು ಬಿದ್ದಿತ್ತು. ಅಚ್ಚರಿಯಿಂದ, ‘ಅಲ್ಲಯ್ಯ ಈ ಕೊಡಲಿಯನ್ನು ಯಾಕೆ ಹರಿತ ಮಾಡಿಕೊಂಡಿಲ್ಲ’ ಎಂದು ಕೇಳಿದ.

ADVERTISEMENT

ಕೆಲಸಗಾರ ತೋಚದೆ, ‘ಏನು ಮಾಡಬೇಕಿತ್ತು’ ಎಂದು ಕೇಳಿದ. ‘ನಿಜವಾದ ಕೆಲಸಗಾರನಿಗೆ ಬರಿಯ ಉತ್ಸಾಹ, ನಿಷ್ಠೆ ಇದ್ದರೆ ಸಾಲದು, ಹತಾರಗಳನ್ನು ಹರಿತವಾಗಿಟ್ಟುಕೊಳ್ಳಬೇಕು. ಶ್ರಮದ ಜೊತೆ ಬುದ್ಧಿವಂತಿಕೆಯೂ ಬೇಕು. ಅದು ನಮ್ಮ ಉತ್ಸಾಹ ಮತ್ತು ನಿಷ್ಠೆಗಳಿಗೆ ಸರಿಯಾದ ಫಲಿತವನ್ನು ಕೊಡುತ್ತದೆ’ ಎನ್ನುವುದನ್ನು ಹೇಳಿಕೊಟ್ಟ. ಆ ಕೆಲಸಗಾರನೂ ಬರಿಯ ಹತಾರವನ್ನಲ್ಲ; ಬುದ್ಧಿಯನ್ನೂ ಚುರುಕಾಗಿರಿಸಿಕೊಂಡು ಮುಂದೊಂದು ದಿನ ದೊಡ್ದ ವ್ಯಾಪಾರಿಯಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.