ADVERTISEMENT

ನುಡಿ ಬೆಳಗು | ಮೌಲ್ಯಗಳ ಮಹತ್ವ

ದೀಪಾ ಹಿರೇಗುತ್ತಿ
Published 31 ಜುಲೈ 2024, 23:14 IST
Last Updated 31 ಜುಲೈ 2024, 23:14 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಟಿ. ಎನ್‌. ಶೇಷನ್‌ ಅವರು ತಮ್ಮ ಆತ್ಮಕಥೆಯಲ್ಲಿ ಹೇಳಿದ ಘಟನೆಯೊಂದು ಹೀಗಿದೆ: ಶೇಷನ್‌ ಹಿರಿಯ ಐಎಎಸ್‌ ಅಧಿಕಾರಿಯಾಗಿದ್ದ ಸಮಯ. ಒಂದು ದಿನ ಅವರು ಮತ್ತು ಅವರ ಹೆಂಡತಿ ಕಾರಿನಲ್ಲಿ ಉತ್ತರ ಪ್ರದೇಶದ ಯಾವುದೋ ಊರಿಗೆ ಹೊರಟಿದ್ದರು. ದಾರಿಯ ನಡುವೆ ಒಂದೆಡೆ ದೊಡ್ಡ ದೊಡ್ಡ ಮರಗಳಿದ್ದವು. ಆ ಮರಗಳಲ್ಲಿ ಸುಂದರವಾದ ಗೀಜಗನ ಗೂಡುಗಳು ನೇತಾಡುತ್ತಿದ್ದವು. ಅವುಗಳನ್ನು ನೋಡಿ ಶೇಷನ್‌ ಅವರ ಹೆಂಡತಿಗೆ ಬಹಳ ಸಂತೋಷವಾಯಿತು. ಎರಡು ಗೂಡುಗಳನ್ನು ತಮ್ಮ ಮನೆಯ ಕೈತೋಟದಲ್ಲಿ ನೇತು ಹಾಕಿದರೆ ಎಷ್ಟು ಚೆನ್ನಾಗಿ ಕಾಣಬಹುದಲ್ಲ ಎಂದುಕೊಂಡು ಅವರು ಪತಿಯ ಹತ್ತಿರ ಹೇಳಿದರು. ಗೂಡುಗಳು ಎತ್ತರದ ಮರಗಳಲ್ಲಿದ್ದ ಕಾರಣ ಶೇಷನ್‌ ತಮ್ಮ ಚಾಲಕನೊಂದಿಗೆ ಹೊರಬಂದು ಹೇಗೆ ಈ ಗೂಡುಗಳನ್ನು ತೆಗೆಯುವುದೆಂದು ಚರ್ಚಿಸತೊಡಗಿದರು.

ಅಷ್ಟರಲ್ಲಿ ಅವರ ಚಾಲಕ ಅಲ್ಲಿಯೇ ಕೊಂಚ ದೂರದಲ್ಲಿ ಕುರಿ ಕಾಯುತ್ತಿರುವ ಒಬ್ಬ ಹುಡುಗನನ್ನು ನೋಡಿದರು. ಆ ಬಾಲಕನನ್ನು ಕರೆದು ‘ನೋಡು, ನಿನಗೆ ಹತ್ತು ರೂಪಾಯಿ ಕೊಡುತ್ತೇವೆ ಎರಡು ಗೂಡು ತೆಗೆದು ಕೊಡುತ್ತೀಯಾ’ ಎಂದು ಕೇಳಿದರು. ಆ ಹುಡುಗ ‘ಇ’ ಅಂದ. ‘ಐವತ್ತು ರೂಪಾಯಿ ಕೊಡುತ್ತೇನೆ’ ಎಂದರೂ ಆತ ಒಪ್ಪಲಿಲ್ಲ. ಶೇಷನ್‌ ಆ ಹುಡುಗನ ಹತ್ತಿರ ‘ಏಕೆ ನೀನು ಗೂಡು ತೆಗೆಯಲು ನಿರಾಕರಿಸುತ್ತಿದ್ದೀ’ ಎಂದು ಕೇಳಿದರು. ಅದಕ್ಕೆ ಆ ಹುಡುಗ, ‘ಸಾಹೇಬರೇ, ಈಗ ನಾನೇನಾದರೂ ಈ ಗೂಡುಗಳನ್ನು ತೆಗೆದರೆ ಆಹಾರ ತರಲು ಹೊರ ಹೋದ ತಾಯಿ ಹಕ್ಕಿ ಸಂಜೆ ಬಂದು ನೋಡಿದರೆ ಗೂಡೂ ಇರುವುದಿಲ್ಲ, ಮರಿಗಳೂ
ಇರುವುದಿಲ್ಲ. ಆ ಹಕ್ಕಿಗೆ ಏನೆನ್ನಿಸಬಹುದು?’

ADVERTISEMENT

ಶೇಷನ್‌ ಬರೆಯುತ್ತಾರೆ: ‘ಆ ರಾತ್ರಿ ನನಗೆ ಅಪರಾಧಿ ಪ್ರಜ್ಞೆಯಿಂದ ನಿದ್ದೆ ಬರಲಿಲ್ಲ, ಹೆಸರಿಗೆ ಇಷ್ಟು ದೊಡ್ಡ ಐಎಎಸ್‌ ಅಧಿಕಾರಿ, ಆದರೆ ಆ ಅವಿದ್ಯಾವಂತ ಪುಟ್ಟ ಬಾಲಕ ಅರ್ಥ ಮಾಡಿಕೊಂಡದ್ದು ನನ್ನ ತಲೆಗೆ ಹೊಳೆಯಲಿಲ್ಲವಲ್ಲ’.

ನಿಜ, ಶಿಕ್ಷಣದಿಂದಲೇ ಎಲ್ಲವೂ ಸಿಕ್ಕಿಬಿಡುವುದಿಲ್ಲ. ಸಂಸ್ಕಾರ ಕೂಡ ಮನುಷ್ಯನಿಗೆ ಬದುಕಲು ಕಲಿಸುತ್ತದೆ. ಹಾಗಾಗಿ ಜೀವನದಲ್ಲಿ ಶಿಕ್ಷಣದ ಜತೆಜತೆಗೆ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಬದುಕು ಬಂಗಾರವಾಗುತ್ತದೆ. ಕಾರಣ ನಾವ್ಯಾರೂ ಒಂಟಿಯಾಗಿ ದ್ವೀಪದಲ್ಲಿ ಬದುಕುತ್ತಿಲ್ಲ. ಜನರಿರುವ ಸಮಾಜದಲ್ಲಿ ಬದುಕುತ್ತಿದ್ದೇವೆ. ಬದುಕಿನ ಪ್ರತೀ ಹೆಜ್ಜೆಯಲ್ಲೂ ಈ ಸಮಾಜದ ಋಣವನ್ನು ಹೊತ್ತಿರುವ ನಾವು ಇತರರಲ್ಲಿರುವ ಮೌಲ್ಯಗಳನ್ನು ಗುರುತಿಸಿ ನಮ್ಮಲ್ಲಿರುವ ದೋಷಗಳನ್ನು ತಿದ್ದಿಕೊಂಡಾಗ ಮಾತ್ರ ನಿಜವಾದ ಸಂಘಜೀವಿಗಳೆನಿಸಿಕೊಂಡೇವು. ಏಕೆಂದರೆ ಮೌಲ್ಯಗಳು ಬದುಕಿಗೊಂದು ಗುರಿಯನ್ನು
ನೀಡುತ್ತವೆ, ಆತ್ಮಾವಲೋಕನಕ್ಕೆ ದಾರಿಯಾಗುತ್ತವೆ. ಕ್ರಮೇಣ ನಮ್ಮ ಅಸ್ಮಿತೆಯೇ ಆಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.