ಅದು 1932ನೇ ಇಸವಿ.
ಅಸಹಕಾರ ಚಳವಳಿ ತೀವ್ರವಾಗಿತ್ತು. ಆಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಬಂಧಿಸಿ ಬ್ರಿಟಿಷ್ ಸರ್ಕಾರ ಫೈಜಾಬಾದ್ ಜೈಲಿನಲ್ಲಿಟ್ಟಿತ್ತು. ಶಾಸ್ತ್ರಿ ಅವರ ಪತ್ನಿ ಲಲಿತಾದೇವಿ ಆಗ ಅಲಹಾಬಾದ್‌ನಲ್ಲಿದ್ದರು. ರಾಜಕೀಯ ಕೈದಿಗಳನ್ನು ನೋಡಲು ಅವರ ಕುಟುಂಬದವರಿಗೆ ತಿಂಗಳಿಗೊಮ್ಮೆ ಮಾತ್ರ ಅವಕಾಶ ಕೊಡಲಾಗುತ್ತಿತ್ತು. ಲಲಿತಾದೇವಿಯವರಿಗೆ ಗಂಡನನ್ನು ನೋಡಿ ಬರುವುದಕ್ಕೂ ಹಣ ಇರಲಿಲ್ಲ. ಆದರೆ ಪತಿಯನ್ನು ನೋಡಿ ಬರಬೇಕೆಂಬ ತವಕ, ಆಸೆ. ಆರು ತಿಂಗಳು ಅರೆಹೊಟ್ಟೆ ಉಂಡು ಮನೆಯ ಖರ್ಚನ್ನೆಲ್ಲಾ ಕಡಿಮೆ ಮಾಡಿ ಒಂದಿಷ್ಟು ಉಳಿತಾಯ ಮಾಡಿ ರೈಲು ಹತ್ತಿ ಗಂಡನನ್ನು ನೋಡಲು ಹೋದರು. ಅವರೊಂದಿಗೆ ಏನೇನು ಮಾತಾಡಬೇಕೆಂದು ಮನಸ್ಸಿನಲ್ಲೇ ಗುಣುಗುಣಿಸಿಕೊಂಡಿದ್ದರು. ಹೋಗುವಾಗ ಜೈಲಿನಲ್ಲಿರುವ ಅವರಿಗಾಗಿ ಏನನ್ನು ತೆಗೆದುಕೊಂಡು ಹೋಗುವುದು? ಶಾಸ್ತ್ರಿ ಅವರಿಗೆ ಮಾವಿನಹಣ್ಣು ಅಂದರೆ ಪ್ರಾಣ. ಆಗ ಮಾವಿನಹಣ್ಣಿನ ಕಾಲ. ಪತಿಗೆ ನೀಡದೆ ಹೊಸ ತರಕಾರಿ ಅಥವಾ ಹಣ್ಣಿನ ರುಚಿಯನ್ನು ಲಲಿತಾದೇವಿ ನೋಡುತ್ತಿರಲಿಲ್ಲ. ಅದು ಅವರು ಪಾಲಿಸಿಕೊಂಡು ಬಂದಿದ್ದ ಪದ್ಧತಿ.
ಆವತ್ತು ತಮ್ಮ ಪತಿಗಾಗಿ ಲಲಿತಾದೇವಿ ಎರಡು ಅತ್ಯುತ್ತಮವಾದ ಮಾವಿನಹಣ್ಣುಗಳನ್ನು ಕೊಂಡರು. ಇವುಗಳನ್ನು ಕೊಯ್ದು ಹೋಳು ಮಾಡಿ ತಾವೇ ಪತಿಗೆ ತಿನ್ನಿಸಬೇಕು ಎಂಬುದು ಅವರ ಆಸೆ. ಆದರೆ ಜೈಲಿನ ನಿಯಮ ಪ್ರಕಾರ ಬಂಧಿತರಿಗೆ ಸಂದರ್ಶಕರು ಏನನ್ನೂ ನೇರವಾಗಿ ಕೊಡುವಂತಿಲ್ಲ. ಕೊಡುವುದಿದ್ದರೆ ಜೈಲಿನ ಅಧಿಕಾರಿಗಳ ವಶಕ್ಕೆ ಕೊಡಬೇಕು. ಅವರು ಅವುಗಳನ್ನು ಸಂಬಂಧಪಟ್ಟ ಕೈದಿಗೆ ಕೊಡಬೇಕು. ಅದು ನಿಯಮ.
ಆದರೆ ಲಲಿತಾದೇವಿಗೆ ತಾವೇ ಪತಿಗೆ ಕೊಟ್ಟು ತಿನ್ನಿಸಬೇಕೆಂಬ ಆಸೆಯಿತ್ತಲ್ಲ, ಹಣ್ಣುಗಳನ್ನು ತಮ್ಮ ಉಡುಗೆಯಲ್ಲಿ ಮುಚ್ಚಿಕೊಂಡು ಪತಿಯನ್ನು ನೋಡಲು ಹೋದರು.
ತಮ್ಮ ಪತ್ನಿ ನಿಯಮ ಮೀರಿ, ಕದ್ದು ಹೀಗೆ ಮಾವಿನಹಣ್ಣುಗಳನ್ನು ತಂದದ್ದನ್ನು ನೋಡಿ ಶಾಸ್ತ್ರೀಜಿ ಸಿಟ್ಟಿಗೆದ್ದರು. ನೀನು ಮಾಡಿದ್ದು ಮೋಸ, ವಂಚನೆ, ನಿನ್ನ ನಡವಳಿಕೆಯಿಂದ ನನಗೆ ನಾಚಿಕೆಯಾಗಿದೆ ಎಂದು ಬಯ್ದರು. ಈ ಹಣ್ಣುಗಳನ್ನು ತಿನ್ನುವುದಕ್ಕೆ ನನಗೆ ಸಾಧ್ಯವೇ ಇಲ್ಲ ಅಂದುಬಿಟ್ಟರು. ಮತ್ತು ಕೂಡಲೇ ಜೈಲು ಅಧಿಕಾರಿಗಳಿಗೆ ಇದನ್ನು ವರದಿ ಮಾಡಿದರು.
ಲಲಿತಾದೇವಿಯವರ ಕಣ್ಣಿನಿಂದ ಧಾರಾಕಾರ ನೀರು ಸುರಿಯಿತು. ಕಂಠ ಬಿಗಿಯಿತು. ಆರು ತಿಂಗಳಿಂದ ತಮ್ಮ ಪತಿಯೊಂದಿಗೆ ಏನೇನು ಮಾತಾಡಬೇಕು ಎಂದುಕೊಂಡಿದ್ದರೋ ಅದರಲ್ಲಿ ಒಂದು ಮಾತೂ ಹೊರಗೆ ಬರಲಿಲ್ಲ. ಪತಿಯೊಂದಿಗೆ ಒಂದಿಷ್ಟು ಹೊತ್ತು ಸಂತೋಷವಾಗಿ ಇದ್ದು ಬರಬಹುದೆನ್ನುವ ಅವರ ಆಸೆ ಮಣ್ಣಾಗಿಹೋಯಿತು.
ಆಮೇಲೆ ಶಾಸ್ತ್ರೀಜೀಯವರು ತಾವೇ ಸಮಾಧಾನಗೊಂಡರು. ಅಮ್ಮನ ಬಗ್ಗೆ ಕುಟುಂಬದ ಬಗ್ಗೆ ವಿಚಾರಿಸಿದರು. ಲಲಿತಾದೇವಿಯವರಿಗೆ ಹ್ಞಾ ಹ್ಞೂ ಎಂದಷ್ಟೇ ಉತ್ತರ ನೀಡುವುದಕ್ಕೆ ಸಾಧ್ಯವಾಯಿತು. ಅತ್ತುಕೊಂಡು ಜೈಲಿನಿಂದ ಹೊರಬಂದರು.
ಆ ಪುಣ್ಯಾತ್ಮ ವ್ಯಕ್ತಿಯ ನೆನಪು ನಮ್ಮ ಮನಸ್ಸನ್ನು ಒಂದಿಷ್ಟು ಶುಚಿಗೊಳಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.