ADVERTISEMENT

ನುಡಿ ಬೆಳಗು: ಗೊತ್ತಿದ್ದೂ ತಪ್ಪು ಮಾಡುವುದೇ?

ನುಡಿ ಬೆಳಗು

ಪಿ. ಚಂದ್ರಿಕಾ
Published 24 ಜೂನ್ 2024, 18:50 IST
Last Updated 24 ಜೂನ್ 2024, 18:50 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ನದಿಯ ದಂಡೆಯ ಮೇಲೆ ಕುಳಿತ ಆಮೆಯನ್ನು ಚೇಳು ಕೇಳಿತು. ‘ಪ್ರವಾಹ ಇದೆ, ದಯಮಾಡಿ ನನ್ನನ್ನು ಆ ದಡಕ್ಕೆ ಸೇರಿಸು. ನಿನ್ನ ಬೆನ್ನ ಮೇಲೆ ಕುಳಿತು ನಾನು ನದಿಯನ್ನು ದಾಟುವೆ’ ಎಂಬುದಾಗಿ. ‘ನಿನ್ನ ನಾನು ಹೇಗೆ ನಂಬಲಿ? ಬೆನ್ನ ಮೇಲೆ ಏರಿ ನಾನು ನದಿ ಮಧ್ಯಕ್ಕೆ ಹೋದಾಗ ನೀನು ಕುಟುಕಿ ಬಿಟ್ಟರೆ ನಾನಲ್ಲೇ ಸಾಯುತ್ತೇನಲ್ಲ. ನಿನ್ನ ಕುಟುಕುವ ಮೂಲಗುಣದಿಂದ ನೀನು ಹೇಗೆ ದೂರವಾಗುತ್ತೀಯಾ’ ಎಂದು ಆಮೆ ಕೇಳಿತು. ಆಗ ಚೇಳು, ‘ಅಲ್ಲಪ್ಪಾ ನದೀಮಧ್ಯದಲ್ಲಿದ್ದಾಗ ನಾನು ಕುಟುಕಿ ನೀನು ಸತ್ತರೆ ಈಜುಬಾರದ ನಾನು ಬದುಕುತ್ತೇನೆಯೇ? ನಾನೂ ಸಾಯುತ್ತೇನಲ್ಲವೇ ಇಷ್ಟೂ ಸರಳ ಸತ್ಯ ನನಗೆ ತಿಳಿಯದೆ? ನೀನೂ ಅರ್ಥ ಮಾಡಿಕೊಂಡು ನನ್ನನ್ನು ನಿನ್ನೊಂದಿಗೆ ಕರೆದೊಯ್ಯು’ ಎಂದಿತು.

ಜೊತೆಗಾರ ಆಮೆಗಳು ಇಂಥಾ ಕೆಲಸಕ್ಕೆ ಕೈ ಹಾಕಬೇಡವೆಂದು ಬುದ್ಧಿ ಹೇಳಿದವು. ‘ಗೊತ್ತಿರುವ ಸತ್ಯಗಳನ್ನು ಮತ್ತೆ ಮತ್ತೆ ಪ್ರಮಾಣೀಕರಿಸುವುದರಲ್ಲಿ ಯಾವ ಅರ್ಥವಿದೆ?’ ಎಂದು ಪದೇ ಪದೇ ಸಾರಿ ಹೇಳಿದರೂ ಕೇಳದ ಆಮೆ ಮಾತ್ರ ಚೇಳಿನ ಮಾತಲ್ಲಿ ಸತ್ಯ ಕಂಡು, ತನ್ನ ಜೀವವನ್ನು ಪಣಕ್ಕಿಟ್ಟು ‘ನನ್ನನ್ನು ಅದು ಹೇಗೆ ಕುಟುಕೀತು’ ಎಂದು ಮರುಪ್ರಶ್ನೆ ಮಾಡಿತು. ‘ನಿನ್ನ ಬುದ್ಧಿಯನ್ನು ಯಾರೂ ತಿದ್ದಲಿಕ್ಕೆ ಸಾಧ್ಯವಿಲ್ಲ’ ಎಂದು ಬೇಸರಗೊಂಡ ಆಮೆಗಳಿಗೆ, ‘ಇದು ಜೀವದ ಪ್ರಶ್ನೆ. ನಾನಿಲ್ಲೇ ಇದನ್ನು ಬಿಟ್ಟು ಹೋದರೆ ಈ ಪ್ರವಾಹದಲ್ಲಿ ಪಾಪ ಸತ್ತೇ ಹೋಗುತ್ತದೆ. ಅದಕ್ಕೆ ಆ ದಡಕ್ಕೆ ದಾಟಿಸುವೆ’ ಎಂದು ನಿರ್ಧರಿಸಿಬಿಟ್ಟಿತು. 

ADVERTISEMENT

ಪ್ರವಾಹದಲ್ಲಿ ಆಮೆಯ ಬೆನ್ನೇರಿ ಹೊರಟ ಚೇಳು ನೀರಿನ ಪ್ರವಾಹಕ್ಕೆ ಹೆದರಿ ಸ್ವಲ್ಪ ದೂರ ಹೋಗುವಾಗಲೇ ಕಚ್ಚಿಬಿಟ್ಟಿತು. ವಿಷವೇರಿ ಆಮೆ ನದಿಯಲ್ಲಿ ಸಾವು ಬದುಕಿನ ಕ್ಷಣಗಳನ್ನು ಎದುರಿಸುತ್ತಾ ಕೇಳಿತು, ‘ನನ್ನ ಕಚ್ಚುವುದಿಲ್ಲ ಎಂದು ಹೇಳಿದೆಯಲ್ಲಾ? ನಿನ್ನ ಮಾತನ್ನು ನಂಬಿದ್ದಕ್ಕೆ ನಾನು ಈಗ ಸಾಯುತ್ತಿರುವೆ. ಇದು ನಿನಗೆ ನ್ಯಾಯವೇ?’ ಎಂದಿತು. ಆಗ ಚೇಳೂ ಮುಳುಗುತ್ತಾ, ‘ಮಾತು ಕೊಟ್ಟಿದ್ದೆ. ಕಚ್ಚಬಾರದು ಎಂದೂ ಮನಸ್ಸೂ ಮಾಡಿದ್ದೆ. ಆದರೆ ಸಂದರ್ಭ ಬಂದಾಗ ನನ್ನ ಸ್ವಭಾವವೇ ಎದ್ದು ನಿಲ್ಲುತ್ತದೆ. ಅದು ನನ್ನ ದೌರ್ಬಲ್ಯವೂ ಹೌದು’ ಎಂದಿತು. ಆಗ ಆಮೆ, ‘ನಿನ್ನ ಬದಲಾಗದ ಸ್ವಭಾವದಿಂದ ನಾವಿಬ್ಬರೂ ಸಾಯುತ್ತಿದ್ದೇವೆ. ಕೊನೆಗೂ ನನ್ನ ಜೊತೆಗಾರ ಆಮೆಗಳೆಲ್ಲಾ ಹೇಳಿದ್ದೇ ಸತ್ಯವಾಯಿತು’ ಎಂದಿತು. ಪ್ರವಾಹದಲ್ಲಿ ಆಮೆ ಮತ್ತು ಚೇಳು ಎರಡು ಜೀವ ಬಿಟ್ಟವು.

ಯಾವುದನ್ನು ಮಾಡಬೇಕು ಮತ್ತು ಮಾಡಬಾರದು ಎನ್ನುವುದನ್ನು ವಿವೇಕದಿಂದ ತಿಳಿದುಕೊಳ್ಳಬೇಕು. ಬದಲಾಗದು ಎಂದು ಗೊತ್ತಿರುವ ಸತ್ಯವನ್ನು ಮತ್ತೆ ಮತ್ತೆ ಒರೆಹಚ್ಚಿ ನೋಡಬಾರದು. ನಮಗೆ ಇಂಥವರು ತೊಂದರೆ ಕೊಡಬಹುದು ಎನ್ನುವ ಸಣ್ಣ ಸೂಕ್ಷ್ಮತೆ ಗೊತ್ತಿದ್ದರೆ ಅಂಥವರಿಂದ, ಅಂಥಾ ಸಂಗತಿಗಳಿಂದ ದೂರವಿರಬೇಕು. ಪುಟ್ಟ ಮಗು ಒಮ್ಮೆ ದೀಪವನ್ನು ಮುಟ್ಟಿ ಕೈಸುಟ್ಟುಕೊಂಡಿದ್ದನ್ನು ಮರೆಯದೆ, ಮತ್ತೆಂದೂ ಅದನ್ನು ಮುಟ್ಟುವುದಿಲ್ಲ. ಅಂಥಾದ್ದರಲ್ಲಿ ಗೊತ್ತಿದ್ದರೂ ತಪ್ಪನ್ನು ಮಾಡಿದರೆ ನಮ್ಮಷ್ಟು ಮೂರ್ಖರು, ಅಸಮರ್ಥರು ಬೇರೆ ಯಾರೂ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.