ಒಂದು ಸಾವಿರದ ಒಂಬೈನೂರ ಅರವತ್ತೈದನೇ ಇಸವಿಯ ಸುಮಾರಿನಲ್ಲಿ ನಡೆದ ಒಂದು ಕತೆ. ಮಂಡ್ಯ ಜಿಲ್ಲೆಯ ಒಂದು ಹಳ್ಳಿ ಅದು. ಅಲ್ಲೊಂದು ಸರ್ಕಾರಿ ಪ್ರಾಥಮಿಕ ಪಾಠಶಾಲೆ. ಶಾಲೆಯೊಳಗೆ ಪಾಠ ನಡೀತಾ ಇತ್ತು. ಇನ್ನೇನು ಮಕ್ಕಳನ್ನು ಮಧ್ಯಾಹ್ನದ ಊಟಕ್ಕೆ ಬಿಡುವ ಹೊತ್ತು.
ಆಗ ಆ ಶಾಲೆಯ ಮುಂದೆ ಒಂದು ಹಸಿರು ಬಣ್ಣದ ಅಂಬಾಸಿಡರ್ ಕಾರು ಬಂದು ನಿಂತಿತು. ಅದರೊಳಗಿಂದ ಮುಚ್ಚುಕಾಲರಿನ ಕೋಟು, ಪ್ಯಾಂಟು, ತಲೆಗೆ ಪೇಟ ತೊಟ್ಟಿದ್ದ ತೇಜಸ್ವಿ ವ್ಯಕ್ತಿಯೊಬ್ಬರು ಕೆಳಗಿಳಿದರು. ಆಗೆಲ್ಲಾ ಹಳ್ಳಿಗಳಿಗೆ ಕಾರು ಬರುವುದೇ ಅಪರೂಪ. ಕಾರನ್ನು ನೋಡಿ ಹಳ್ಳಿಯ ನಾಲ್ಕಾರು ಜನ ಹತ್ತಿರಕ್ಕೆ ಬಂದರು. ಶಾಲೆಯೊಳಗೆ ಪಾಠ ಮಾಡುತ್ತಿದ್ದ ಮೇಷ್ಟರುಗಳೂ ತೀರಾ ಗಾಬರಿಯಾದರು- ಯಾರಾದರೂ ಮೇಲಧಿಕಾರಿಗಳು ತನಿಖೆಗೆ ಬಂದಿರಬಹುದಾ ಅಂತ. ಆದರೂ ಪಾಠ ಬಿಟ್ಟು ಹೊರಗೆ ಹೋಗಲಿಲ್ಲ.
ಇತ್ತ ಆ ದೊಡ್ಡ ಮನುಷ್ಯರು ಆ ಜನರನ್ನು, ‘ಈ ಶಾಲೆಯಲ್ಲಿ ತುಂಬಾ ಒಳ್ಳೆಯ ಮೇಷ್ಟ್ರು ಅಂದ್ರೆ ಯಾರು?’ ಅಂತ ಕೇಳಿದರು. ಜನರು ಒಕ್ಕರಲಿನಿಂದ ‘ವೀರಭದ್ರಪ್ಪ ಮೇಷ್ಟ್ರು ಸ್ವಾಮಿ’ ಅಂದರು. ‘ಆಗಲಿ’ ಅಂತ ಆ ಮಹನೀಯರು ಶಾಲೆಯ ಬೆಲ್ಲು ಹೊಡೆಯುವವರೆಗೆ ಹಳ್ಳಿಯವರ ಜೊತೆ ಮಳೆ ಬೆಳೆ ಕಷ್ಟ ಸುಖ ಕೇಳುತ್ತಾ ನಿಂತಿದ್ದರು.
ಬೆಲ್ ಹೊಡೆಯಿತು. ಮಕ್ಕಳು ಹೋ ಅಂತ ಹೊರಗೆ ಓಡಿದರು. ಆಗ ಆ ದೊಡ್ಡ ಮನುಷ್ಯರು ಶಾಲೆಯ ಕಡೆಗೆ ಹೋದರು. ಅವರು ಶಾಲೆಗೆ ಬರುತ್ತಿದ್ದುದನ್ನು ನೋಡಿ ಮೇಷ್ಟರುಗಳು ಮತ್ತಷ್ಟು ಗಾಬರಿಯಾದರು. ಬಂದ ಮಹನೀಯರನ್ನು ಗುರುತಿಸಿದವರು ವೀರಭದ್ರಪ್ಪ ಮೇಷ್ಟ್ರು ಮಾತ್ರವೇ. ಬಂದಿದ್ದವರು ಯಾರೋ ಅಲ್ಲ,
ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು.
ಎಲ್ಲ ಮೇಷ್ಟರೂ ಅವರಿಗೆ ಶಿರಬಾಗಿ ನಮಸ್ಕರಿಸಿದರು. ಹನುಮಂತಯ್ಯನವರು ‘ಇಲ್ಲಿ ವೀರಭದ್ರಪ್ಪ ಮೇಷ್ಟ್ರು ಯಾರು?’ ಅಂದರು. ಆಗ ವೀರಭದ್ರಪ್ಪನವರು ಬೆವರುತ್ತಾ, ನಡುಗುತ್ತಾ ಮುಂದೆ ಬಂದು ‘ಅಪ್ಪಣೆಯಾಗಬೇಕು ಮಹಾಸ್ವಾಮಿ’ ಅಂತ ತೊದಲಿದರು. ಆಗ ಹನುಮಂತಯ್ಯನವರು ಮೇಷ್ಟ್ರ ಭುಜದ ಮೇಲೆ ಕೈಯಿಟ್ಟು ‘ಗಾಬರಿ ಆಗಬೇಡಿ ವೀರಭದ್ರಪ್ಪನವರೆ, ನಿಮ್ಮ ಹತ್ರ ಸ್ವಲ್ಪ ಮಾತಾಡಬೇಕಿತ್ತು. ಸ್ವಂತ ವಿಷಯ’ ಅಂದರು. ಉಳಿದ ಮೇಷ್ಟರು ಹೊರಗೆ ಹೋದರು.
ಆಗ ಹನುಮಂತಯ್ಯನವರು- ‘ಮೇಷ್ಟ್ರೆ, ಈ ಊರಿನಿಂದ ನನ್ನ ಮಗಳಿಗೆ ಒಂದು ಮದುವೆ ಪ್ರಸ್ತಾಪ ಬಂದಿದೆ. ವರನ ಗುಣ, ನಡತೆ, ಮನೆ, ಮನೆತನ ವಿಚಾರಿಸೋಕೆ ನಿಮ್ಮಂಥ ಮೇಷ್ಟ್ರನ್ನೇ ಕೇಳೋದು ಸೂಕ್ತ ಅಂತ ಅನ್ನಿಸಿತು. ಅದಕ್ಕೆ ಬಂದೆ’ ಅಂದರು.
ಮೇಷ್ಟ್ರು- ‘ಒಳ್ಳೆ ಹುಡುಗ ಮಹಾಸ್ವಾಮಿ, ಒಳ್ಳೆಯ ಮನೆತನ, ತಾವು ಧಾರಾಳವಾಗಿ ಮುಂದುವರಿಯಬಹುದು’.
ಮತ್ತೊಬ್ಬರನ್ನು ವಿಚಾರಿಸಲಿಲ್ಲ ಹನುಮಂತಯ್ಯನವರು. ಅದೇ ವರನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದರು.
ಮೇಷ್ಟ್ರು ಅಂದರೆ ಆ ಕಾಲದಲ್ಲಿ ಎಂಥಾ ವಿಶ್ವಾಸಾರ್ಹತೆ... ಹನುಮಂತಯ್ಯನವರದು ಎಂಥಾ ಸರಳತೆ...
ಕೇಳಿ ಹೃದಯ ತೇವವಾದಂತಾಯ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.