ADVERTISEMENT

ನುಡಿ ಬೆಳಗು | ಬಾಧಿಸದಿರಲಿ ಮೇಲರಿಮೆಯ ವೈರಸ್ಸು

ಎಚ್.ಎಸ್.ನವೀನಕುಮಾರ್
Published 25 ಸೆಪ್ಟೆಂಬರ್ 2023, 0:27 IST
Last Updated 25 ಸೆಪ್ಟೆಂಬರ್ 2023, 0:27 IST
ನುಡಿ ಬೆಳಗು
ನುಡಿ ಬೆಳಗು   

ದೇಹಕ್ಕೆ ಬಾಧೆ ಕೊಡುವ ವಿಭಿನ್ನ ವೈರಸ್‌ಗಳಂತೆ, ಮನಸ್ಸಿಗೆ ಮುತ್ತಿಕ್ಕಿ, ನಮ್ಮ ವ್ಯಕ್ತಿತ್ವವನ್ನೇ ಬಾಧಿಸುವ ಹಲವಾರು ವೈರಸ್‌ಗಳೂ ಇವೆ. ಅವುಗಳಲ್ಲಿ ನಮಗೆಲ್ಲ ಗೊತ್ತು ಎಂಬ ಅಹಂಕಾರವನ್ನು ಮೂಡಿಸಿ ಅಜ್ಞಾನಕ್ಕೆಡೆ ಮಾಡಿಕೊಡುವ ‘ಮೇಲರಿಮೆ’ ಅಥವಾ ‘ಸುಪೀರಿಯಾರಿಟಿ ಕಾಂಪ್ಲೆಕ್ಸ್’ ಎಂಬುದು ಪ್ರಮುಖವಾದುದು. ಈ ವೈರಸ್‌ ನಮ್ಮ ತಲೆಯೊಳಗೆ ಹೊಕ್ಕರೆ, ಕಲಿಕೆ  ನಿಂತ ನೀರಾಗಿ ಬಿಡುತ್ತದೆ. ಇದನ್ನು ದೂರಾಗಿಸಲು, ಯಾವುದೇ ಹೊಸ ವಿಷಯವನ್ನು ಕಲಿಯುವ ಮುನ್ನ ನಮಗೆ ಏನೂ ಗೊತ್ತಿಲ್ಲ ಎನ್ನುವ ‘unlearnig’ ಬಹಳ ಮುಖ್ಯ ಎನ್ನುವುದು ಬಲ್ಲವರ ಅಭಿಮತ.

ಒಮ್ಮೆ ಒಬ್ಬ ಝೆನ್ ಗುರುವಿನ ಬಳಿ, ಈ ಮೇಲರಿಮೆಯ ವೈರಸ್‌ನಿಂದ ತೀವ್ರವಾಗಿ ಬಾಧಿತರಗಿದ್ದ, ಎರಡೆರಡು ಪದವಿಗಳನ್ನು ಪಡೆದಿದ್ದ ಪ್ರೊಫೆಸರ್ ಒಬ್ಬರು ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಬಂದರು. ಈ ವ್ಯಕ್ತಿಯ ಅಹಂಕಾರವನ್ನು ಗಮನಿಸಿದ ಝೆನ್ ಗುರುಗಳು ಸಂಪ್ರದಾಯದಂತೆ ಅವರಿಗೆ ಚಹಾ ನೀಡಿ ಸತ್ಕರಿಸಿದರು. ಪ್ರೊಫೆಸರ್ ಎದುರಿಗೆ ಒಂದು ಕಪ್ ಇರಿಸಿದ ಮಾಸ್ಟರ್, ಆ ಕಪ್ಪಿಗೆ ಪಾತ್ರೆಯಲ್ಲಿದ್ದ ಚಹಾವನ್ನು ಸುರಿಯುತ್ತಾ ಹೋದರು. ಕಪ್ ಭರ್ತಿಯಾಯ್ತು. ಆದರೆ ಝೆನ್ ಗುರು ಮಾತ್ರ ಪಾತ್ರೆಯಲ್ಲಿದ್ದ ಚಹಾವನ್ನು ಕಪ್‌ಗೆ ಸುರಿಯುವುದನ್ನು ನಿಲ್ಲಿಸಲಿಲ್ಲ. ಆಗ ಚಹಾ, ಕಪ್‌ನಿಂದ ಹೊರಗೆಲ್ಲಾ ಚೆಲ್ಲಲಾರಂಭಿಸಿತು. ಇದನ್ನು ಗಮನಿಸಿದ ಪ್ರೊಫೆಸರ್ ಸಾಹೇಬರು, ತಾಳ್ಮೆ ಕಳೆದುಕೊಂಡು ‘ಇದೇನು ಮಾಡುತ್ತಿದ್ದೀರಿ? ನೀವೇನೋ ದೊಡ್ಡ ಜ್ಞಾನಿಗಳು ಎಂದು ನಿಮ್ಮ ಬಳಿ ಹೆಚ್ಚಿನ ಜ್ಞಾನ ಪಡೆಯಲು ಬಂದೆ. ನೀವು ನೋಡಿದರೆ ತುಂಬಿರುವ ಕಪ್ಪಿಗೆ ಚಹಾ ಸುರಿಯುತ್ತಿದ್ದೀರಿ. ನೀವೆಂಥ ಜ್ಞಾನಿಗಳು’ ಎಂದು ಪ್ರಶ್ನಿಸಿದರು. 

ಆಗ ಆ ಝೆನ್ ಗುರುಗಳು ನಗುತ್ತಾ ‘ಈಗ ನಿಮ್ಮ ಮನಃಸ್ಥಿತಿ ಕೂಡ ಈ ಚಹಾ ಕಪ್ಪಿನಂತೆಯೇ ಇದೆ. ಎಲ್ಲವೂ ಗೊತ್ತು ಎಂದು ತಲೆಯಲ್ಲಿ ಮೇಲೆ ತುಂಬಿಕೊಂಡ ನಿಮಗೆ ಯಾವ ಜ್ಞಾನವನ್ನು ನೀಡಿದರೂ ಅದು ನಿಮ್ಮ ಮನಸ್ಸಿನೊಳಗೆ ಇಳಿಯಲಾರದು. ಮೊದಲು ನಿಮ್ಮ ಮನಸ್ಸನ್ನು ಖಾಲಿ ಮಾಡಿಕೊಂಡು ನನಗೇನೂ ಗೊತ್ತಿಲ್ಲ ಎಂಬ ಭಾವದೊಂದಿಗೆ ಬನ್ನಿ‌. ಆಗ ಏನಾದರೂ ಜ್ಞಾನ ನಿಮ್ಮ ತಲೆಯೊಳಗೆ ಹೊಕ್ಕೀತು’ ಎಂದು ನುಡಿದರು. 

ADVERTISEMENT

ನಮ್ಮ ಮನಸ್ಸು ಎಲ್ಲಾ ಗೊತ್ತಿದೆ ಎಂಬ ಭಾವದಿಂದ ಮುಕ್ತವಾದಾಗ ಮಾತ್ರ ಹೊಸ ವಿಷಯವನ್ನು ಕಲಿಯಲು ಸಾಧ್ಯವಾಗುತ್ತದೆ. ಅದಕ್ಕೇ ಹೇಳುವುದು ಅಹಂಕಾರ  ಅಜ್ಞಾನಜನ್ಯವಾದುದು ಹಾಗೂ ವಿನಯ ಜ್ಞಾನಜನ್ಯವಾದುದು ಎಂದು. ಇಂತಹ ಜ್ಞಾನ ಆತ್ಮವಿಶ್ವಾಸಕ್ಕೆ ನಾಂದಿ ಹಾಡುತ್ತದೆ. 

ಹಿರಿಯ ಕವಿ ಪಂಜೆ ಮಂಗೇಶರಾಯರ ಕವಿತೆಯ ಸಾಲಿನಂತೆ ‘ಏರುವನು ರವಿ ಏರುವನು.. ಬಾನೊಳು ಸಣ್ಣಗೆ ತೋರುವನು.. ಏರಿದವನು ಚಿಕ್ಕವನಿರಬೇಕಲೆ ಎಂಬ ಮಾತನು ಸಾರುವನು’ ಅಷ್ಟು ಅಗಾಧಶಕ್ತಿಯ ಕೇಂದ್ರವಾದ ಸೂರ್ಯ ಎತ್ತರದಿಂದ ಬಲು ಚಿಕ್ಕವನಾಗಿಯೇ ಕಾಣಿಸುತ್ತಾನೆ. ಹಾಗೆಯೇ  ನಿಜವಾದ ಜ್ಞಾನಿ ಯಾವುದೇ ಆಡಂಬರಗಳಿಲ್ಲದೇ ಅಹಂಕಾರವಿಲ್ಲದೇ, ಸರಳವಾಗಿರುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.