ADVERTISEMENT

ನುಡಿ ಬೆಳಗು | ಹೇಳುವ ಮುನ್ನ ಚೆನ್ನಾಗಿ ಕೇಳಿಸಿಕೊಳ್ಳಿ

ಎಚ್.ಎಸ್.ನವೀನಕುಮಾರ್
Published 28 ಜುಲೈ 2024, 23:50 IST
Last Updated 28 ಜುಲೈ 2024, 23:50 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಪರಿಣಾಮಕಾರಿ ಸಂವಹನದ ಕುರಿತು ತರಬೇತಿ ನೀಡುವಾಗ ಸಾಮಾನ್ಯವಾಗಿ ಒಂದು ಆಟ ಆಡಿಸುತ್ತಾರೆ. ಹತ್ತು ಜನರನ್ನು ವೇದಿಕೆಯ ಮೇಲೆ ಕರೆದು ಸ್ವಲ್ಪ ದೂರ ದೂರದಲ್ಲಿ  ಸಾಲಾಗಿ ನಿಲ್ಲಿಸಿ, ಮೊದಲ ವ್ಯಕ್ತಿಯ ಕಿವಿಯಲ್ಲಿ ಒಂದು ವಾಕ್ಯವನ್ನು ಹೇಳಲಾಗುತ್ತದೆ. ಉದಾಹರಣೆಗೆ ‘ನಾನು ಇಂದು ಮನೆಯಿಂದ, ಸಿದ್ಧನಾಗಿ ಆಟೋದಲ್ಲಿ ಆಫೀಸಿಗೆ ಹೋದೆ’ ಎಂಬುದು ಆ ವಾಕ್ಯ ಎಂದಿಟ್ಟುಕೊಳ್ಳಿ. ಇದನ್ನು ಮೊದಲನೇ ವ್ಯಕ್ತಿ ಎರಡನೆಯ ವ್ಯಕ್ತಿಯ ಕಿವಿಯಲ್ಲಿ ಉಸುರಬೇಕು. ಹೀಗೆ ಈ ಸಂವಹನ ಪಿಸು ಮಾತಿನಲ್ಲಿ ಕೊನೆಯ ವ್ಯಕ್ತಿಯನ್ನು ತಲುಪಬೇಕು. ಕೊನೆಯ ವ್ಯಕ್ತಿ ತಾನು ಕೇಳಿಸಿಕೊಂಡಿದ್ದನ್ನು ಗಟ್ಟಿಯಾಗಿ ಎಲ್ಲರಿಗೂ ಕೇಳುವಂತೆ ಹೇಳಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಈ ಸರಳ ವಾಕ್ಯ ಕೊನೆಯ ವ್ಯಕ್ತಿಯನ್ನು ತಲುಪುವಾಗ ಸಂಪೂರ್ಣವಾಗಿ ವ್ಯತಿರಿಕ್ತ ಅರ್ಥವನ್ನೇ ಪಡೆದುಕೊಂಡಿರುತ್ತದೆ. ಮೇಲಿನ ಉದಾಹರಣೆಯ ವಾಕ್ಯ ಕೊನೆಯ ವ್ಯಕ್ತಿಯ ಬಾಯಲ್ಲಿ ‘ನಾನು ಆಫೀಸಿನಿಂದ ಆಟೋದಲ್ಲಿ ಮನೆಗೆ ಹೊರಟೆ’ ಎಂದು ತಿರುವು ಮುರುವಾಗಿ ಬಿಡುವ ಸಾಧ್ಯತೆಯೂ ಇದೆ.


ಏಕೆ ಹೀಗೆ? ಇದು ನಮ್ಮೆಲ್ಲರಲ್ಲೂ ಕಂಡು ಬರುವ ಪರಿಣಾಮಕಾರಿ ಸಂವಹನ ಕೌಶಲದ ಕೊರತೆಯ ಫಲ. ಪರಿಣಾಮಕಾರಿ ಸಂವಹನದಲ್ಲಿ ಹೇಳುವುದರಷ್ಟೇ ಮುಖ್ಯ, ಕೇಳಿಸಿಕೊಳ್ಳುವುದು. ಕೇಳಿಸಿಕೊಳ್ಳುವುದು ಪರಿಣಾಮಕಾರಿ ಸಂವಹನದ ಅತ್ಯಂತ ಪ್ರಮುಖ ಅಂಗ. ಇದಕ್ಕೆ ಪ್ರಕೃತಿ ನಮ್ಮ ದೇಹದಲ್ಲಿಯೇ ಒಂದು ಸೂತ್ರವನ್ನು ನೀಡಿದೆ. ನಮಗೆಲ್ಲರಿಗೂ ಇರುವುದು ಒಂದು ಬಾಯಿ ಹಾಗೂ ಎರಡು ಕಿವಿಗಳು. ಅಂದರೆ ನಾವು ಎಷ್ಟು ಮಾತಾಡುತ್ತೇವೆಯೋ, ಅದರ ಎರಡು ಪಟ್ಟು ಕೇಳಿಸಿಕೊಳ್ಳಬೇಕು ಎನ್ನುವುದು ಈ ಸೂತ್ರದ ಅರ್ಥ. ಆದರೆ ನಮ್ಮೆಲ್ಲರಿಗೂ ನಾವು ಹೇಳುವುದನ್ನು ಬೇರೆಯವರು ಕೇಳಿಸಿಕೊಳ್ಳಬೇಕೆಂಬ ಕಾತರವಿರುತ್ತದೆ. ಆದರೆ ನಮಗೆ ಬೇರೆಯವರು ಹೇಳುವುದನ್ನು ಕೇಳಿಸಿಕೊಳ್ಳುವ ತಾಳ್ಮೆಯೇ ಇರುವುದಿಲ್ಲ.

ADVERTISEMENT

ತಾಳ್ಮೆಯಿಂದ ಇನ್ನೊಬ್ಬರ ಮಾತಿಗೆ ಸರಿಯಾಗಿ ಕಿವಿಗೊಟ್ಟಿದ್ದೇ ಆದರೆ ಬಹುಪಾಲು ಸಮಸ್ಯೆಗಳು ಉದ್ಭವಿಸುವುದೇ ಇಲ್ಲ. ಮನೆಯಾಗಿರಬಹುದು, ನಾವು ಕೆಲಸ ಮಾಡುವ ಕಚೇರಿಯಾಗಿರಬಹುದು, ಸಂಘ ಸಂಸ್ಥೆಗಳೇ ಇರಬಹುದು, ಎಲ್ಲ ಕಡೆಯಲ್ಲೂ ನಾವು ಇನ್ನೊಬ್ಬರ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳುವ ಸಂವಹನದ ಮುಖ್ಯ ಅಗತ್ಯವನ್ನು ರೂಢಿಸಿಕೊಳ್ಳಲೇಬೇಕು. ಇದರ ಜೊತೆಗೆ ಇನ್ನೊಬ್ಬರು ಹೇಳಿದ್ದನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ ಎಂಬುದು ಸಹ ಅಷ್ಟೇ ಮುಖ್ಯ. ಸದಾ ಇನ್ನೊಬ್ಬರು ಆಡುವ ಮಾತುಗಳನ್ನು ಚಿತ್ತವಿಟ್ಟು ಆಲಿಸಿ, ಅರ್ಥೈಸಿಕೊಂಡು ನಂತರವೇ ಪ್ರತಿಕ್ರಿಯಿಸಬೇಕು. ಅರ್ಧಂಬರ್ಧ ಕೇಳಿಸಿಕೊಂಡರೆ, ಅಥವಾ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ, ಅದು ಅವಸರದ ಅಪಾಯಕಾರಿ ಪ್ರತಿಕ್ರಿಯೆಗೆ ಕಾರಣವಾಗಬಹುದು. ಬಹುಪಾಲು ಮಂದಿ ಪರಿಣಾಮಕಾರಿ ಸಂವಹನವೆಂದರೆ ನಾವು ಚೆನ್ನಾಗಿ ಹೇಳುವುದು ಮಾತ್ರ ಎಂದುಕೊಂಡಿದ್ದಾರೆ.  ಚೆನ್ನಾಗಿ ಕೇಳಿಸಿಕೊಳ್ಳುವವರು ಇದ್ದಾಗ ಮಾತ್ರ ನಮ್ಮ ಸಂವಹನ ಅರ್ಥಪೂರ್ಣವಾಗಲು, ಪರಿಪೂರ್ಣವಾಗಲು ಸಾಧ್ಯ. ಆದ್ದರಿಂದ ಸರಿಯಾಗಿ ಕೇಳಿಸಿಕೊಳ್ಳುವ ಕಲೆಯನ್ನು ನಾವು ಸದಾ ಕರಗತ ಮಾಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.