ADVERTISEMENT

ನುಡಿ ಬೆಳಗು | ಹೊಂದಾಣಿಕೆ 

ಪಿ. ಚಂದ್ರಿಕಾ
Published 29 ಜುಲೈ 2024, 23:22 IST
Last Updated 29 ಜುಲೈ 2024, 23:22 IST
   

ಪೂರ್ವಿಕರಿಂದ ಅವನಿಗೆ ಬಳುವಳಿಯಾಗಿ ಬಂದ ಮನೆ ನಗರದ ಮಧ್ಯಭಾಗದಲ್ಲಿತ್ತು. ಹಳೆ ಮೇಜು, ಕುರ್ಚಿ ಎಲ್ಲವೂ ಮನೆಗೆ ಒಂದು ಶೋಭೆಯನ್ನು ನೀಡಿದ್ದವು. ಇದ್ದಕ್ಕಿದ್ದ ಹಾಗೆ ಒಂದು ದಿನ ಅವನಿಗೆ ಆ ಮನೆಯನ್ನು ಹೊಸದಾಗಿಸಬೇಕು ಎನ್ನುವ ಆಸೆ ಹುಟ್ಟಿಕೊಂಡಿತು. ಸೋಫಾ ಕುರ್ಚಿ ಮೇಜು ಕಡೆಗೆ ಕಿಟಕಿಯ ಪರದೆ ಹೀಗೆ ಮನೆಯಲ್ಲಿರುವ ಎಲ್ಲವನ್ನೂ ಬದಲಿಸುತ್ತಾ ಆಧುನಿಕವಾಗಿಸುತ್ತಾ ಹೋದ. ಅದೊಂದು ರೀತಿಯಲ್ಲಿ ಆಟವಾಗಿಬಿಟ್ಟಿತು. ಮತ್ತು ಅದಕ್ಕೆ ಕೊನೆಯೂ ಇಲ್ಲವಾಗಿಬಿಟ್ಟಿತ್ತು.

ಹೊಸದಾಗಿ ತಂದ ವಸ್ತುಗಳೆಲ್ಲವೂ ಹೊಳೆಯುತ್ತಿದ್ದರೆ ಬಣ್ಣ ಕಳೆದ ಗೋಡೆಗಳು ಮಂಕಾಗಿ, ಹೊಸದಾಗಿ ಬಣ್ಣ ಬಳೆಸಿದ. ಆದರೂ ಅವನ ಮನಸ್ಸಿಗೆ ಸಮಾಧಾನವಿಲ್ಲ, ಎಲ್ಲೋ ಏನೋ ಸರಿಯಾಗಲಿಲ್ಲ ಎನ್ನಿಸತೊಡಗಿತು. ಮತ್ತೆ ಮತ್ತೆ ನೋಡಿದ ಇದ್ದಕ್ಕಿದ್ದ ಹಾಗೆ ಹೊಳೆದದ್ದು ತಂದ ವಸ್ತುಗಳಿಗೂ, ಇರುವ ಗೋಡೆಗಳಿಗೂ ಸಂಬಂಧವೇ ಇಲ್ಲ, ಈಗ ಜರೂರಿರುವುದು ಗೋಡೆಗಳನ್ನೇ ಬದಲಿಸುವುದು ಎನ್ನಿಸಿಬಿಟ್ಟಿತ್ತು. 

ಒಂದೊಂದೇ ಗೋಡೆಗಳನ್ನು ಬದಲಿಸಿದ. ಅಷ್ಟಕ್ಕೂ ಸಮಾಧಾನ ಆಗಲೇ ಇಲ್ಲ. ಇಡೀ ಮನೆ ಯಾಕೋ ಪ್ರಸ್ತುತ ಅನ್ನಿಸದೆ ಪೂರ್ಣವಾಗಿ ತೆಗೆಯುವುದೇ ಸರಿ ಅನ್ನಿಸಿ ತನ್ನ ಇಚ್ಛೆಗೆ ತಕ್ಕಂತೆ ಹೊಸದಾಗಿ ಕಟ್ಟಿಸಿದ. ಅಷ್ಟು ಹೊತ್ತಿಗೆ ಅವನ ಹತ್ತಿರವಿದ್ದ ಎಲ್ಲ ಹಣವೂ ಖರ್ಚಾಗಿಹೋಗಿತ್ತು. ಆದರೂ ಮನೆ ಈಗ ಆ ರಸ್ತೆಯ ಎಲ್ಲ ಮನೆಗಳಿಗಿಂತಲೂ ಸೊಗಸಾಗಿ ಕಾಣುತ್ತಿತ್ತು. ಸುಖ ಕಾಣಲು ಒಂದಿಷ್ಟು ಕಳೆದುಕೊಳ್ಳಲೇ ಬೇಕಲ್ಲ. ಹಣ ಕಳೆದುಕೊಂಡರೂ, ಹೋಗಿ ಬರುವವರೆಲ್ಲಾ ಮನೆಯನ್ನು ಹೊಗಳುವುದು ಅವನ ಕಿವಿಗೆ ಹಿತವಾಗಿ, ತಾನು ಮನೆ ಕಟ್ಟಿದ್ದಕ್ಕೆ ಸಾರ್ಥಕ ಅನ್ನಿಸಿತೊಡಗಿತ್ತು.  

ADVERTISEMENT

ಸ್ವಲ್ಪ ದಿನ ಅಷ್ಟೇ ಮತ್ತೆ ಅವನಿಗೆ ಅಸಮಾಧಾನ ತಲೆ ಎತ್ತಿತು. ಅವನ ಅಸಮಾಧಾನ ಈಗ ತನ್ನ ಮನೆಯ ಮೇಲಲ್ಲ. ಇಷ್ಟು ಚಂದದ ತನ್ನ ಮನೆಗೆ ತಕ್ಕುದಾದ ಬೀದಿಯೇ ಇದಲ್ಲ ಒಂದಕ್ಕೊಂದು ಹೊಂದಾಣಿಕೆಯೇ ಆಗುತ್ತಿಲ್ಲ. ಛೇ ಎಂಥಾ ಕೆಟ್ಟ ಬೀದಿಯಲ್ಲಿ ತಾನಿದ್ದೇನಲ್ಲಾ ಎನ್ನಿಸಿ ಬೀದಿಯನ್ನು ಬದಲಿಸಬೇಕು ಅನ್ನಿಸತೊಡಗಿತು. ‘ಪೂರ್ವಿಕರು ಕಟ್ಟಿದ ನನ್ನ ಮನೆಯನ್ನೇನೋ ಒಡೆದೆ, ತನಗೆ ಹೇಗೆ ಬೇಕೋ ಹಾಗೆ ಕಟ್ಟಿ, ಆಧುನಿಕಗೊಳಿಸಿದೆ. ಅದು ನನ್ನದು. ಆದರೆ ಬೀದಿಯನ್ನೇನು ಮಾಡಲಿ? ಅದು ಸಾರ್ವಜನಿಕರದ್ದು. ಅದನ್ನು ಬದಲಿಸಲು ಸಾಧ್ಯವೇ ಇಲ್ಲ. ಆದರೆ ಒಂದಂತೂ ಸತ್ಯ ಇಂಥಾ ಚಂದದ ಮನೆ ಈ ಬೀದಿಯಲ್ಲಿರುವುದೇ ವ್ಯರ್ಥ. ಇಷ್ಟೆಲ್ಲಾ ಪ್ರಯತ್ನಪಟ್ಟು ಅತ್ಯುತ್ತಮ ಮನೆಯನ್ನು ಕಟ್ಟಿದ ನನ್ನ ಕಷ್ಟಕ್ಕೆ ಈ ಬೀದಿಯಿಂದಾಗಿ ಬೆಲೆಯೇ ಇಲ್ಲದಂತಾಗಿಬಿಟ್ಟಿತಲ್ಲ’ ಎನ್ನುವ ಕೊರಗು ಅವನನ್ನು ಬಾಧಿಸತೊಡಗಿತು.  

ನಾನು ಬದಲಾದೆ ಎಂದರೆ ನನ್ನ ಸುತ್ತಲಿರುವವರು ಬದಲಾದರು ಎಂದಲ್ಲ. ಅವರನ್ನು ಬದಲಿಸುವುದೂ ಸಾಧ್ಯವಿಲ್ಲ. ಹಾಗೆ ಬದಲಾದರೂ ಎಲ್ಲವೂ ಸರಿಯಾಗುತ್ತದೆ ಅಂತಲೂ ಅಲ್ಲ. ಎಲ್ಲದರ ನಡುವೆ ಇರುವುದು ಅನಿವಾರ್ಯ ಎನ್ನುವುದನ್ನು ತಿಳಿಯಬೇಕು. ಎಲ್ಲದರ ನಡುವೆ ಬದುಕುತ್ತೇನೆನ್ನುವ ಮನಸ್ಸಿನ ಹದವೇ ಬಹಳ ದೊಡ್ಡದು. ಒಮ್ಮೊಮ್ಮೆ ಸಣ್ಣ ಯೋಚನೆ ಎಲ್ಲವನ್ನೂ ಬದಲಿಸಬಹುದು. ಬದಲಿಸಲಾಗದೆಯೂ ಇರಬಹುದು. ಬದಲಿಸಲಾಗದೇ ಇದ್ದುದ್ದಕ್ಕೆ ಕೊರಗುವುದರಲ್ಲಿ ಅರ್ಥವಿಲ್ಲ. ಅದರ ಬಗ್ಗೆಯೇ ಯೋಚಿಸುತ್ತಾ ಉಳಿದರೆ ಮನಸ್ಸಿನ ಕಷ್ಟಕ್ಕೆ ಕೊನೆಯೂ ಇರುವುದಿಲ್ಲ. ಹೊಂದಿಕೊಂಡರೆ ಮಾತ್ರ ಜೀವನ ಸುಗಮ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.