ತುಂಬಾ ಬುದ್ಧಿವಂತ ಹುಡುಗ. ತಂದೆ ವಿದೇಶದಲ್ಲಿ ವೈದ್ಯರಾಗಿದ್ದು ಹೆಸರು, ಹಣ ಮಾಡಿದವರು. ಇವನು ಓದಿ ಬೆಳೆದದ್ದು ಹಾಸ್ಟೆಲ್‌ನಲ್ಲಿ. ಅಪ್ಪ ಅಮ್ಮನ ದಿನನಿತ್ಯದ ಪ್ರೀತಿಯಿಂದ ವಂಚಿತ. ಪತ್ರಗಳ ಮೂಲಕ ತನ್ನೆಲ್ಲಾ ದುಗುಡ ದುಮ್ಮಾನಗಳನ್ನು ದೂರದಲ್ಲಿದ್ದ ಹೆತ್ತವರಿಗೆ ಹೇಳಿಕೊಳ್ಳಲು ಆಗದವನು. ಫೋನಿನಲ್ಲಿ ಆಗೀಗ ಸಿಕ್ಕಿದ್ದು ಚುಟುಕು ಮಾತುಕತೆ ಅಷ್ಟೇ. ಅದೂ ಅಪೂರ್ಣ. ವಿದೇಶದಿಂದ ಹೆತ್ತವರು ಬಂದಾಗ ಹೊಸ ಗೊಂಬೆಗಳು, ಮಿಠಾಯಿ, ಬಟ್ಟೆ ಜೊತೆ ಆಧುನಿಕ ಆಟ ಸಾಮಾಗ್ರಿ ಹೊತ್ತು ತರುತ್ತಿದ್ದರು. ಇಷ್ಟವಾಗದೆ ಇವನು ಎತ್ತಿ ಬಿಸಾಡುತ್ತಿದ್ದ. ಕೆಲವೇ ದಿನಗಳಷ್ಟೇ ಅಪ್ಪ ಅಮ್ಮ ಉಳಿಯುತ್ತಿದ್ದರು. ತನ್ನೊಳಗಿನ ಪೂರ್ಣ ಭಾವನೆಗಳ
ಸ್ಪಷ್ಟವಾಗಿ ಹೇಳಿಕೊಳ್ಳಲಾಗದೆ ಅವನು ಚಡಪಡಿಸಿ ಅತ್ತು ಬಿಡುತ್ತಿದ್ದ. ಅವರು ತಬ್ಬಿ ಮುತ್ತಿಕ್ಕಿ ಹೊರಟು ಹೋಗುತ್ತಿದ್ದರು.
ಮತ್ತಿವನು ಏಕಾಂಗಿ. ನೆಂಟರು ಬಂಧು ಬಳಗದವರು ಇದ್ದರೂ ಯಾರೂ ಇವನ ಬಾಲ್ಯದ ಸೊಬಗನ್ನು ಹೆಚ್ಚಿಸಲಿಲ್ಲ. ಒಳ್ಳೆ ಬಟ್ಟೆ, ಖರ್ಚಿಗೆ ಹಣ, ಇರಲು ಸುಸಜ್ಜಿತ ಹಾಸ್ಟೆಲ್ ಕಲ್ಪಿಸಿದರೆ ತಮ್ಮ ಕರ್ತವ್ಯ ಮುಗಿದಂತೆ ಎಂದು ಹೆತ್ತವರು ಭಾವಿಸಿದ್ದರು. ಇವನು ಅವರ ನಿರಂತರ ಪ್ರೀತಿಗೆ ಕೈಚಾಚಿ ದಣಿಯುತ್ತಿದ್ದ. ಜೊತೆಗಾರ ಗೆಳೆಯರ ಅಪ್ಪ ಅವ್ವಂದಿರು ಆಗಾಗ ಬಂದು ತಮ್ಮ ಐಕಳಿಗೆ ತೋರುವ ಬೆಚ್ಚಗಿನ ಪ್ರೀತಿ ಕಂಡು ಕೀಳರಿಮೆ ಹೆಚ್ಚುತ್ತಿತ್ತು. ಗೆಣೆಕಾರರು ಊರಿಗೆ ಹೊರಟಾಗ ಇವನು ಮತ್ತೆ ಒಬ್ಬಂಟಿ. ಕೆಲ ಗೆಳೆಯರು ಮರುಕಗೊಂಡು ರಜೆಗಳಲ್ಲಿ ತಮ್ಮ ಹಳ್ಳಿಗೆ ಕರೆದುಕೊಂಡು ಹೋಗಿ ವಾತ್ಸಲ್ಯ, ಪ್ರೀತಿ, ತೋರಿದರು. ಈಗಲೂ ಇವನಲ್ಲಿ ಉಳಿದಿರುವ ತಾಜಾ ನೆನಪುಗಳು ಇವು ಮಾತ್ರ.
ಸಂಪತ್ತು ಸಂಗ್ರಹಿಕೊಂಡು ಪೋಷಕರು ವಿದೇಶದಿಂದ ಬರುವ ಹೊತ್ತಿಗೆ ಇವನು ಬೆಳೆದಿದ್ದ. ತಾನು ಓದಬೇಕು ಎಂದು ಬಯಸಿದ ಪದವಿ ಬಿಟ್ಟು ಎಂಜಿನಿಯರಿಂಗ್ ಕಲಿಯುವಂತೆ ಅಪ್ಪ-ಅಮ್ಮ ಒತ್ತಡ ಹೇರಿದ್ದರು. ತನಗೆ ಇಷ್ಟವಿಲ್ಲದಿದ್ದರೂ ಒಪ್ಪಿಕೊಂಡಿದ್ದ. ಓದು ಪೂರೈಸಿದ ಮೇಲೆ ಜೇಬು ತುಂಬುವ ಕೆಲಸವೂ ಸಿಕ್ಕಿತು. ಒಂದು ಚಡ್ಡಿ ಬನೀನಿನಲ್ಲಿ ತಾಸುಗಟ್ಟಲೆ ಮನೆಯಲ್ಲಿ ಕೂತು ಕಂಪ್ಯೂಟರ್ ಕೀಲಿಸುವುದು. ದಿನಕ್ಕೆ ಐದಾರು ವಿದೇಶಿ ಕಂಪನಿಗಳ ಜೊತೆ ಎಡೆಬಿಡದೆ ಮೀಟಿಂಗ್. ರಾತ್ರಿ ಹಗಲುಗಳು ಕಲೆಸಿ ರಾಡಿಯಾದವು. ಯಾವಾಗಲೋ ತಿನ್ನುವ, ಸಮಯ ಮೀರಿ ಎದ್ದೇಳುವ, ಚೆಲ್ಲಾಪಿಲ್ಲಿಯಾದ ಕನಸು ಮನಸ್ಸಿನ ಜೀವನ ರೂಪಿಸಿಕೊಂಡ. ಈಗ
ಮದುವೆಯ ವಯಸ್ಸು ಮೀರುತ್ತಿದೆ. ಹೀಗೆ ಇದ್ದು ಬಿಡುವೆ ಎನ್ನುತ್ತಿದ್ದಾನೆ. ಹೆಚ್ಚು ಗೆಳೆಯರಿಲ್ಲದೆ ಮೌನವಾಗಿ ಇರುವುದು ಇವನ ಅಭ್ಯಾಸ.
ಯಾರ ಜೊತೆ ಹೇಗೆ ಹೊಂದಿಕೊಂಡು ಬದುಕಬೇಕು ಎಂಬ ಸಾಮಾಜಿಕ ನಡವಳಿಕೆ ಅವನಲ್ಲಿ ಸ್ವಲ್ಪವೂ ಇಲ್ಲ. ಭಯಗ್ರಸ್ತ ಮನಃಸ್ಥಿತಿ ಬೆಳೆಸಿಕೊಂಡಿದ್ದಾನೆ. ಒಂದೇ ಮನೆಯಲ್ಲಿದ್ದರೂ ಅಪ್ಪ ಅಮ್ಮನಿಂದ ಪ್ರತ್ಯೇಕ. ಮಗುವಾಗಿದ್ದಾಗ ಎತ್ತಿ ಆಡಿಸಲು ಸಮಯ ಹುಡುಕದ ಪೋಷಕರು ಈಗ ತೋರಗೊಡುವ ಪ್ರೀತಿ ಆತನಿಗೆ ನಾಟುತ್ತಿಲ್ಲ. ಗಿಡ ಬತ್ತಿದ ಮೇಲೆ ಗೊಬ್ಬರ, ನೀರು ಸುರಿದರೇನು ಪ್ರಯೋಜನ. ತಾವು ತಪ್ಪಿದ್ದೆಲ್ಲಿ ಎಂದು ಹಿರಿಯರಿಗೆ ಈಗ ಅರಿವಾಗಿದೆ. ಆದರೆ ಸಮಯ ಮೀರಿ ಹೋಗಿದೆ. ಅವನು ಎಲ್ಲರಂತೆ ಸಹಜವಾಗುವ ಹಂಬಲ ಇಟ್ಟುಕೊಂಡಿದ್ಧಾನೆ. ಆಗಲೂ ಬಹುದು, ಕಾಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.