ADVERTISEMENT

ನುಡಿ ಬೆಳಗು: ನಾವು ಕಳೆದುಕೊಳ್ಳುತ್ತಿರುವುದೇನು?

ನುಡಿ ಬೆಳಗು..

ಪ್ರೊ. ಎಂ. ಕೃಷ್ಣೇಗೌಡ
Published 14 ಡಿಸೆಂಬರ್ 2023, 18:39 IST
Last Updated 14 ಡಿಸೆಂಬರ್ 2023, 18:39 IST
ನುಡಿ ಬೆಳಗು
ನುಡಿ ಬೆಳಗು   

ಮೊನ್ನೆ ಮೊನ್ನೆ ನಮ್ಮೂರಿಗೆ ಮಳೆ ಬಂದಾಗ ಯಾಕೋ ನೆನಪಾಯಿತು- ‘ಈ ಮಳೆಯಲ್ಲಿ ತೊಯ್ದು ತಪ್ಪಡಿಯಾಗಿ ಓಡಾಡಿ ಎಷ್ಟೋ ವರ್ಷಗಳಾಗಿ ಹೋಯಿತಲ್ಲಾ?!’ ನಾವು ಗಟ್ಟಿಮುಟ್ಟು ಮನೆ ಕಟ್ಟಿಕೊಂಡ ಮೇಲೆ, ಕಾರು ಕೊಂಡ ಮೇಲೆ ಮಳೆಗೆ ನಾವು ತೋಯುವುದೇ ಇಲ್ಲ. ಕಾರಲ್ಲೊಂದು ಸಣ್ಣ ಛತ್ರಿ ಇಟ್ಟುಕೊಂಡಿದ್ದರೆ ಮಳೆಯ ಹನಿಗಳು ಕೂಡಾ ನಮ್ಮನ್ನು ಮುಟ್ಟುವುದಿಲ್ಲ. ನಮಗೆ ಬಯಲಲ್ಲಿ ಓಡಾಡುವಾಗಲೋ, ಸೈಕಲ್ ತುಳಿಯುವಾಗಲೋ ಮಳೆ ಬಂದರೆ ಆ ಮಳೆಯ ನೀರು ನಮ್ಮ ಅಂಗಾಗಗಳಲ್ಲೆಲ್ಲಾ ಹರಿದಾಡಿಬಿಡುತ್ತಿತ್ತು. ಈಗ ಮಳೆಗೂ ಆ ಪ್ರೀತಿಯಿಲ್ಲ, ನಮಗೂ ಆ ಭಾಗ್ಯವಿಲ್ಲ.

ಬೇಸಿಗೆಯನ್ನು ಕೂಡಾ ಬೀದಿಪಾಲು ಮಾಡಿದ್ದೇವೆ ನಾವು. ನಮ್ಮ ಕಾರು ಮನೆಗಳಲ್ಲಿರುವ ಎ.ಸಿ ಫ್ಯಾನುಗಳು ಬೇಸಿಗೆಯ ಅನುಭವವನ್ನೂ ಕಿತ್ತುಕೊಂಡಿವೆ. ನಮ್ಮ ಮೈಯಿ ಬೆವರುವುದನ್ನೂ ಮರೆತು ಕೂತಿದೆ.

ಈಗ ಚಳಿ ಕಾಲಿಕ್ಕಿದೆ. ನಮಗೆ ಮೂಗು ಸೋರುವುದು, ಗಂಟಲು ನೋಯುವುದು, ತುಟಿ ಒಡೆಯುವುದು, ಕೈಕಾಲು ಹುರುಪೇಳುವುದು ಈ ಚಳಿಗಾಲದಲ್ಲೇ. ಹೊಲಗದ್ದೆಗಳಲ್ಲಿ ಅವರೆಕಾಯಿಗೆ ಸೊನೆ ಬೀಳಬೇಕಾದರೆ ಈ ಚಳಿ, ಇಬ್ಬನಿ ಎಲ್ಲಾ ಬೇಕು. ಆದರೆ ಈ ಚಳಿ ಕೂಡಾ ಬಯಲು ಬೀದಿಗಳಲ್ಲೇ ಬದುಕಿ ಅಲ್ಲೇ ಮುದುಡಿ ಮಲಗಬೇಕು ಹಾಗೆ ಮಾಡಿಟ್ಟಿದ್ದೇವೆ. ಮನೆಯೊಳಗೆ, ಕಾರುಗಳಲ್ಲಿ ಈ ಹೀಟರು ಗೀಟರುಗಳನ್ನು ಹಾಕಿಬಿಟ್ಟರೆ ಪಾಪ, ಚಳಿ ಸತ್ತೇ ಹೋಗುತ್ತದೆ. ಹೊರಗೆ ಹೋದಾಗಲೂ ಚಳಿಗೆ, ‘ನಮ್ಮನ್ನು ಮುಟ್ಟಿದರೆ ಹುಷಾರ್!’ ಎಂದು ಹೆದರಿಸಿಬಿಟ್ಟಿದ್ದೇವೆ. ನಮ್ಮ ಸ್ವೆಟರು, ಶಾಲು, ಕೈಗವಸು, ಕಾಲುಚೀಲ, ಕೋತಿಕುಲಾವಿಗಳನ್ನು (ಮಂಕಿ ಕ್ಯಾಪ್) ದಾಟಿ ಚಳಿ ನಮ್ಮ ಮೈಮುಟ್ಟುವುದು ಹೇಗೆ ಹೇಳಿ?

ADVERTISEMENT

ಅಂತೂ ನಮ್ಮ ನಾಗರಿಕತೆ ವಿಜ್ಞಾನ, ತಂತ್ರಜ್ಞಾನಗಳೆಲ್ಲಾ ಸೇರಿ ನಮ್ಮ ಋತುಮಾನ ನಮ್ಮನ್ನು, ನಾವು ನಮ್ಮ ಋತುಮಾನಗಳನ್ನು ಮುಟ್ಟಿತಟ್ಟಿ ಮಾತಾಡಿಸದ ಹಾಗೆ ಮಾಡಿಬಿಟ್ಟಿವೆ. ನಮಗೂ ನಮ್ಮ ಹವಾಮಾನ ಋತುಮಾನಗಳಿಗೂ ಪರಸ್ಪರ ಪರಿಚಯವೇ ಮರೆತುಹೋದಂತಾಗಿದೆ.

ಈಚೀಚೆಗೆ ಚಳಿ ಮೊದಲಿನಷ್ಟಿಲ್ಲ ಅನ್ನುತ್ತಾರೆ ಕೆಲವರು. ಇರಬಹುದು. ತನಗೆ ಮರ್ಯಾದೆ ಇಲ್ಲದ ಜಾಗಕ್ಕೆ ಅದಾದರೂ ಯಾಕೆ ಬಂದೀತು ಹೇಳಿ. ಆಧುನಿಕರಾದ ನಾವು ಸದಾ ಹೊಸಹೊಸದನ್ನು ಪಡೆದುಕೊಳ್ಳುವ ಸಂಭ್ರಮದಲ್ಲಿರುತ್ತೇವೆ. ಅದು ಸಹಜವೇ. ಆದರೆ ಈ ಪಡೆದುಕೊಳ್ಳುವ ಭರದಲ್ಲಿ ಕಳೆದುಕೊಳ್ಳುತ್ತಿರುವುದೇನು ಎಂದು ಕೂಡಾ ಅವಾಗೀವಾಗ ಆಲೋಚನೆ ಮಾಡಬೇಕಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.