ಟೇಬಲ್ ಮೇಲೆ ಕ್ರಿಕೆಟ್ ತಾರೆಯರು, ಸಿನೆಮಾ ತಾರೆಯರ ಚಿತ್ರಗಳನ್ನು ಇಡಿ. ಜೊತೆಗೆ ನಿಮ್ಮದೂ ಒಂದು ಚಿತ್ರ ಇರಲಿ. ನಿಮ್ಮ ಮಗನನ್ನು ಕರೆದು ಇದರಲ್ಲಿ ನಿನ್ನ ಹೀರೊ ಯಾರು ಎಂದು ಕೇಳಿ ನೋಡಿ. ಅವನು ಖಂಡಿತ ನಿಮ್ಮ ಚಿತ್ರ ತೋರಿಸೋದಿಲ್ಲ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗೆ ಅಥವಾ ಮಗಳಿಗೆ ನಾನು ಹೀರೋ ಆಗದಿದ್ದರೆ ತಂದೆ ಎನ್ನುವ ಅಥವಾ ತಾಯಿ ಎನ್ನುವ ಪದಕ್ಕೆ ಅರ್ಥವೇ ಇರೋದಿಲ್ಲ. ಮಕ್ಕಳಿಗೆ ತಂದೆ ತಾಯಂದಿರೇ ಹೀರೋ ಹೀರೋಯಿನ್ ಆಗದಿದ್ದರೆ, ತಂದೆ ತಾಯಿಗಳು ಬಿಸ್ಕೆಟ್ ತಯಾರು ಮಾಡುವ, ಮೊಬೈಲ್ ತಯಾರು ಮಾಡುವ ಫ್ಯಾಕ್ಟರಿಗಳಾಗಿಬಿಡುತ್ತಾರೆ. ಮಕ್ಕಳಿಗೆ ಆಸ್ತಿ ಬಿಟ್ಟು ಹೋದವ ತಂದೆಯಾಗುವುದಿಲ್ಲ. ಮಕ್ಕಳಿಗೆ ಆದರ್ಶ ಕೊಟ್ಟು ಹೋದವ ತಂದೆಯಾಗುತ್ತಾನೆ. ಕೆಲವನ್ನು ಶಾಸ್ತ್ರಗಳಿಂದಲೂ ಕಲಿಯಬೇಕು. ಶಾಸ್ತ್ರ ಅಂದರೆ ಇದನ್ನು ಮಾಡು ಇದನ್ನು ಮಾಡಬೇಡ ಎಂದು ತಿಳಿಸಿಕೊಡುವುದು. ಈಗ ನೋಡಿ, ಮನುಷ್ಯನಿಗೆ ಏನಾದರೂ ಆಗು ಮೊದಲು ಮಾನವನಾಗು ಅಂತಾರೆ. ಏನಾದರೂ ಆಗು ಮೊದಲು ಹುಲಿ ಆಗು ಅಂತ ಯಾವುದೇ ಹುಲಿಗೆ ಹೇಳ್ಯಾರೇನು? ಏನಾದರೂ ಆಗು ಮೊದಲು ಆಕಳು ಆಗು ಅಂತ ಆಕಳಿಗೆ ಯಾರಾದರೂ ಹೇಳ್ಯಾರೇನು? ಮನುಷ್ಯನಿಗೇ ಯಾಕೆ ಈ ಮಾತು ಹೇಳ್ತಾರೆ? ಯಾಕೆ ಎಂದರೆ, ಮನುಷ್ಯ ಮನುಷ್ಯನಂತೆ ಕಾಣ್ತಾನೆ ಆದರೆ ಮನುಷ್ಯನಂಗೆ ಇಲ್ಲ ಅದಕ್ಕೆ. ಕೆಲವು ವಿಷಯಗಳನ್ನು ಇನ್ನೊಬ್ಬರನ್ನು ನೋಡಿ ಕಲಿಯಬೇಕು. ಎಲ್ಲವನ್ನೂ ಓದಿಯೇ ತಿಳಕೋಬೇಕು ಅಂದರೆ ಆಗೋದಿಲ್ಲ. ಇನ್ನೊಬ್ಬರು ಮಾಡಿದ್ದನ್ನು ನೋಡಿಯೂ ತಿಳಕೋಬೇಕು. ಬರೀ ಅಷ್ಟೇ ಅಲ್ಲ. ಕೆಲವನ್ನು ಜ್ಞಾನದಿಂದ ತಿಳಕೋಬೇಕು. ಅವರು ಮಾಡ್ತಾರೆ ಅಂತ ನೀನೂ ಮಾಡಬೇಡ. ಸರಿತಪ್ಪು ಆಲೋಚಿಸಿ ಮಾಡೋದನ್ನು ತಿಳಕೋಬೇಕು.
ಗ್ರಾಮೀಣ ಪ್ರದೇಶದಲ್ಲಿ ಸೊಸೆಯ ಕಾಲ್ಗುಣ ಚೆನ್ನಾಗಿದೆ ಅಂತಾರೆ. ಕಾಲ್ಗುಣ ಅಂದರೆ ಅದು ಕಾಲಾಗಿರೋದಿಲ್ಲ. ಕಾಲಕ್ಕೆ ತಕ್ಕ ನಡವಳಿಕೆಯಲ್ಲಿ ಇರುತ್ತದೆ. ಮನೆಯ ಪರಿಸ್ಥಿತಿಯನ್ನು ಅರಿತುಕೊಂಡು ಸಂಸಾರವನ್ನು ತೂಗಿಸಿದರೆ ಒಳ್ಳೆಯದಾಗುತ್ತದೆ. ಹೀಗೆ ಒಳ್ಳೆಯದಾದರೆ ಅದಕ್ಕೆ ಕಾಲ್ಗುಣ ಅಂತಾರೆ. ಕೆಲವು ವಿಷಯಗಳನ್ನು ಸಜ್ಜನರ ಸಂಗದಿಂದ ಅರಿತುಕೊಳ್ಳಬೇಕು. ಹಾಗಾದರೆ ಯಾರು ಸಜ್ಜನರು? ಯಾರ ಬಳಿ ಕುಳಿತರೆ ಸಮಾಧಾನ ಸಿಗುತ್ತದೋ ಅವರು ಸಜ್ಜನರು. ಯಾರ ಬಳಿಗೆ ಹೋದರೆ ನಮ್ಮ ಮನದ ತಾಪ ಕಡಿಮೆಯಾಗುತ್ತದೆಯೋ ಅವರು ಸಜ್ಜನರು. ಒಮ್ಮೆ ಇದ್ದಿಲು ಬೆಂಕಿಗೆ ಕೇಳಿತಂತೆ, ‘ನಾನು ನಿನ್ನಂಗೆ ಕೆಂಪಗೆ ಆಗಬೇಕಲ್ಲ, ಅದಕ್ಕೆ ಏನು ಮಾಡಬೇಕು’ ಅಂತ. ಅದಕ್ಕೆ ಬೆಂಕಿ ‘ಏನೂ ಮಾಡಬೇಡ. ಸುಮ್ಮನೆ ನನ್ನ ಜೊತೆ ಇರು ನೀನೂ ಕೆಂಪಗೆ ಆಗುತ್ತೀಯ’ ಎಂದು ಹೇಳಿತು. ಒಂದು ಬಿದಿರು ಕಟ್ಟಿಗೆ ಮಾರೋನ ಕೈಗೆ ಸಿಕ್ಕರೆ ಸುಟ್ಟು ಬೂದಿಯಾಗತೈತಿ. ಕೊಳಲು ಮಾಡುವವನ ಕೈಗೆ ಸಿಕ್ಕರೆ ಕೃಷ್ಣನ ಕೈಯೊಳಗಿನ ಕೊಳಲಾಗುತೈತಿ. ಅಂದರೆ, ನೀವು ಯಾರ ಸಂಗ ಮಾಡುತ್ತೀರಿ ಎನ್ನುವುದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಮಾಣ ಆಗತೈತಿ. ದೊಡ್ಡವರ ಸಂಗ ಮಾಡಿದರೆ ಕೈ ಮುಗೀತಾರೆ. ದುಷ್ಟರ ಸಂಗ ಮಾಡಿದರೆ ಬಡೀತಾರೆ ಎನ್ನುವುದು ನಮಗೆ ಗೊತ್ತಿರಬೇಕು. ಮನುಷ್ಯನ ಮನಸ್ಸು ಅಂದರೆ ಮಣ್ಣಿನ ಗೋಡೆ ಇದ್ದ ಹಾಗೆ. ಎಷ್ಟು ತೊಳೆದರೂ ಕೆಸರು ಹಾಗೇ ಇರತೈತಿ. ಒಬ್ಬ ವ್ಯಕ್ತಿ ಒಂದು ಶಕ್ತಿಯಾಗಿ ಬೆಳೆಯಲು ಸದ್ವಿಚಾರ, ಸತ್ಸಂಗದಿಂದ ಮಾತ್ರ ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.