ವರ್ಗೀಸ್ ಕುರಿಯನ್ ಅಂತ ಒಬ್ಬರಿದ್ದರು. ಸಾಮಾನ್ಯ ಎಂಜಿನಿಯರ್ ಆಗಿದ್ದರು. ಆದರೆ ಅವರಿಗೆ ಒಂದು ಕನಸಿತ್ತು. ವಿಶ್ವದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದಿಸುವ ಡೆನ್ಮಾರ್ಕ್ ದೇಶಕ್ಕಿಂತ ಭಾರತದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಬೇಕು ಅಂತ. ಅದಕ್ಕೆ ಅವರು ಗುಜರಾತಿನ ಆನಂದದಲ್ಲಿ ಅಮುಲ್ ಎಂಬ ಕಂಪೆನಿ ಆರಂಭಿಸಿದರು. ದಿನಕ್ಕೆ ನೂರು ಕೋಟಿ ಲೀಟರ್ ಹಾಲು ಉತ್ಪಾದಿಸುವ ಗುರಿ ಹೊಂದಿದ್ದರು. ಅದನ್ನುಸಾಧಿಸುವ ಮೂಲಕ ಅವರು Milk man of India ಆದರು.
ಜಾದವ್ ಪಾಯೆಂಗ್ ಅಂತ ಒಬ್ಬರು ಅಸ್ಸಾಂ ರಾಜ್ಯದಲ್ಲಿದ್ದಾರೆ. ಬ್ರಹ್ಮಪುತ್ರಾ ನದಿ ದಂಡೆಗೆ ನೆರೆ ಬಂದು ಭೂಮಿಯನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ಅದನ್ನು ತಡೆಯಲು ಅವರು ನದಿ ದಂಡೆಯಲ್ಲಿ ಗಿಡ ಹಚ್ಚಲು ಆರಂಭಿಸಿದರು. ಒಂದಲ್ಲ, ಎರಡಲ್ಲ, 1,400 ಎಕರೆ ಪ್ರದೇಶದಲ್ಲಿ ಕಾಡು ಬೆಳೆಸಿದರು. ಅದಕ್ಕೇ ಅವರನ್ನು Forest man of India ಎಂದು ಕರೆಯುತ್ತಾರೆ.
ದಶರಥ ಮಾಂಝಿ ಅಂತ ಒಬ್ಬರು ಬಿಹಾರದ ಸಣ್ಣ ಹಳ್ಳಿಯಲ್ಲಿದ್ದರು. ಆ ಹಳ್ಳಿ ಗುಡ್ಡದ ತಪ್ಪಲಿನಲ್ಲಿತ್ತು. ಆ ಗುಡ್ಡ ದಾಟಿ ಹೆದ್ದಾರಿಗೆ ಕೇವಲ 5 ಕಿ.ಮೀ ದೂರ. ಆದರೆ ರಸ್ತೆ ಇರಲಿಲ್ಲ. ಹೆದ್ದಾರಿಗೆ ಬರಬೇಕು ಅಂದರೆ 80 ಕಿಮೀ ಸುತ್ತಿ ಬರಬೇಕಿತ್ತು. ಅನಾರೋಗ್ಯ ಪೀಡಿತ ತನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದೆ ಆಕೆ ನಿಧನರಾದರು. ಹೆದ್ದಾರಿಗೆ ಸೂಕ್ತ ರಸ್ತೆ ಮಾಡಿಕೊಡಿ ಎಂದು ಗ್ರಾಮದವರು ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಅದಕ್ಕೆ ಮಾಂಝಿ ಅವರೇ ಗುಡ್ಡ ಕೊರೆದು ರಸ್ತೆ ನಿರ್ಮಿಸಿದರು. ಅದಕ್ಕೆ ಅವರನ್ನು Mountain man of India ಎಂದು ಕರೆಯುತ್ತಾರೆ.
ನಮ್ಮ ರಾಷ್ಟ್ರಪತಿಯಾಗಿದ್ದ ಡಾ.ಅಬ್ದುಲ್ ಕಲಾಂ ಅವರನ್ನು Missile man of India ಎಂದು ಕರೆಯಲಾಗುತ್ತದೆ.
ನಮ್ಮ ಮಕ್ಕಳಿಗೆ ಇವರೆಲ್ಲಾ ಆದರ್ಶವಾಗಬೇಕು. ಆದರೆ ನಮ್ಮ ಮಕ್ಕಳು ಮೊಬೈಲ್ ಮ್ಯಾನ್‌ಗಳಾಗಿದ್ದಾರೆ. ನಾವೂ ಮೊಬೈಲ್ ಮ್ಯಾನ್‌ಗಳಾಗಿದ್ದೇವೆ. Mobile is a good servant but bad master. ಮೊಬೈಲ್ ಎಲ್ಲ ಸಂಬಂಧಗಳನ್ನು ಕಡಿದು ಹಾಕಿಬಿಟ್ಟಿದೆ. ಎಷ್ಟೋ ಮಕ್ಕಳು ಬೆಳಿಗ್ಗೆ ಹಾಲು ಮಾರಿ, ಪೇಪರ್ ಹಾಕಿ ಶಾಲೆಗೆ ಹೋಗುತ್ತಾರೆ. ಮಂದಿ ಪಾದರಕ್ಷೆ ಹೊಲಿದು ತಮಗೆ ಪಾದರಕ್ಷೆ ಇಲ್ಲದೆ ಶಾಲೆಗೆ ಹೋಗುವ ಮಕ್ಕಳೂ ಇದ್ದಾರೆ. ಇಂಥ ಮಕ್ಕಳನ್ನು ಮೇಲೆತ್ತುವ ಮನಸ್ಸು ಇರಬೇಕು. ಮಕ್ಕಳು ಅಮೆರಿಕದಲ್ಲಿ ಇದ್ದರೆ, ಯುರೋಪದಲ್ಲಿ ಇದ್ದರೆ ನಾವು ಶ್ರೀಮಂತರಲ್ಲ. ಯಾವ ಮಗ ದುಡಿದು ಬಂದು ದಿನಾ ರಾತ್ರಿ ತಂದೆ ತಾಯಿ ಜೊತೆ ಇರ್ತಾನಲ್ಲ ಅವರು ಶ್ರೀಮಂತರು.
ರವೀಂದ್ರನಾಥ ಟ್ಯಾಗೋರ್ ಒಂದು ಕಡೆ, ‘ದೇವನೇ ನನಗೆ ಶಕ್ತಿ ಕೊಡು, ಸ್ವಾರ್ಥದ ಎದುರು ಮಂಡಿಯೂರಿ ನಾನು ಕುಂದಬಾರದು, ಬಡವರ ಕಣ್ಣೀರು ಒರೆಸುವ ಅವಕಾಶ ಕೊಡು, ಕಣ್ಣೀರಿಗೆ ಕರಗುವ ಹೃದಯ ಕೊಡು’
ಎಂದು ಹೇಳುತ್ತಾರೆ. ಆ ರೀತಿ ಮಕ್ಕಳನ್ನು ಬೆಳೆಸಬೇಕು. ದುಡಿಯೋದನ್ನು ಕಲಿಸಬೇಕು. ಎಷ್ಟು ದುಡಿಯಬೇಕು ಅಂದರೆ ಭೂಮಿ ತಾಯಿನೇ ‘ಸಾಕಪ್ಪ ಸಾಕು ನಾನೇ ದಣಿದೀನಿ ಸ್ವಲ್ಪ ಸುಮ್ಮನಿರು’ ಅಂತ ಹೇಳಬೇಕು ಹಾಗೆ ದುಡಿಯಬೇಕು. ದುಡುದು ಒಂದು ಸುಂದರ ಬದುಕು ಕಟ್ಟಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.