ADVERTISEMENT

ನುಡಿ ಬೆಳಗು–26: ದೇವರು ಹಚ್ಚಿದ ದೀಪಗಳು!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 18 ಸೆಪ್ಟೆಂಬರ್ 2024, 22:42 IST
Last Updated 18 ಸೆಪ್ಟೆಂಬರ್ 2024, 22:42 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಕೆಲವು ತಾಯಂದಿರು ತಮಗೆ ಮೂರು ಮಕ್ಕಳು ಹೆಣ್ಣಾದವೆಂದು ಚಿಂತಿ ಮಾಡ್ತಾರ. ಯಾಕ ಹೆಣ್ಣು ಆಗಬಾರದ? ಅದರಾಗೇನು ತಪ್ಪೈತಿ? ‘ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು. ಹೆಣ್ಣಲ್ಲವೆ ನಮ್ಮನ್ನೆಲ್ಲಾ ಹಡೆದ ತಾಯಿ, ಹೆಣ್ಣಲ್ಲವೆ ಪೊರೆಯುವವಳು’ ಎಂದು ಹೇಳ್ತಾಳ ಸಂಚಿ ಹೊನ್ನಮ್ಮ.

ಮಕ್ಕಳನ್ನು ಹೆಣ್ಣು ಗಂಡು ಅಂತೆಲ್ಲಾ ಭೇದ ಮಾಡಬಾರದು. ಮಕ್ಕಳು ಅಂತಷ್ಟೇ ಸ್ವೀಕರಿಸಬೇಕು. ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಇಂತಹ ಭೇದ ಭಾವ ತೆಗೆದಿದ್ದಾರೆ. ಅಲ್ಲಿ ಮಕ್ಕಳು ಅಂದರೆ ಮಕ್ಕಳು ಅಷ್ಟೆ.
ಮಕ್ಕಳು ಅಂದರೆ ದೀಪ ಇದ್ದಂಗೆ. ದೀಪಕ್ಕೆ ಹೆಣ್ಣು ದೀಪ, ಗಂಡು ದೀಪ ಅಂತಿಲ್ಲ. ಹಾಗೆಯೇ ಮಕ್ಕಳಿಗೂ. ಮಕ್ಕಳು ಅಂದರೆ ದೇವರು ಹಚ್ಚಿದ ದೀಪಗಳು.

ADVERTISEMENT

ಮನುಷ್ಯಗ ಭಯ ಎಲ್ಲೈತಿ ಅಂದರ ತೀರಾ ಮುಂದಾಲೋಚನೆಯಲ್ಲೈತಿ. ನಾಳೆ, ನಾಡಿದ್ದು ಏನಾಗತೈತೋ ಅಂತ ಕಲ್ಪನೆ ಮಾಡತಾನಲ್ಲ, ಆ ಕಲ್ಪನೆಯೊಳಗೆ ಭಯ ಐತಿ. ಹಿಂದೆ ನಡೆದಿದ್ದನ್ನು ನೆನಪಿಸಿಕೊಂಡು ಅಳತೀವಲ್ಲ ಅದರೊಳಗೆ ದುಃಖ ಐತಿ. ನಾಳೆ ಅನ್ನುವುದು ಇಲ್ಲ. ಇವತ್ತು ನಾಳೆ ಅಂತೀರಿ. ಬೆಳಕು ಹರಿದ ತಕ್ಷಣ ಅದಕ್ಕೊಂದು ನಾಳೆ ಹುಟ್ಟಿಕೊಳ್ಳುತೈತಿ. ಅದಕ್ಕೆ ಇವತ್ತು ದೇವರು ಏನು ಕೊಟ್ಟಾನ ಅದರಾಗ ಸಂತೋಷವಾಗಿರಬೇಕು.

ಬಹಳ ಜನರಿಗೆ ಅನಸ್ತಿರತೈತಿ ನಾವು ಬಡವರಿದೀವಿ, ಅವ್ರು ಶ್ರೀಮಂತರು ಅಂತ. ಅವರ ಮನ್ಯಾಗ ಟಿವಿ, ಫ್ರಿಜ್ ಅದಾವ, ನಮ್ಮೊನೆಯೊಳಗ ಇಲ್ಲ ಅಂತ. ನಾವು ಗುಡಿಸಲಿನಲ್ಲಿದೀವಿ, ಅವರು ಮಹಡಿಯಲ್ಲಿದ್ದಾರೆ ಅಂತ. ಆದರೆ ಇದನ್ನು ಹೀಂಗ ನೋಡಬಾರದು. ಫ್ರಿಜ್ ಇದ್ದರ ಆಹಾರವನ್ನು 3–4 ದಿನ ಅದರಲ್ಲಿ ಇಟ್ಟುಕೊಂಡು ತಿನ್ತಾರ, ನಾವು ತಾಜಾ ತಾಜಾ ಮಾಡಕೊಂಡು ತಿನ್ತೀವಿ. ಅದಕ್ಕೆ ನಾವೇ ಶ್ರೀಮಂತರು ಅನಕೋಬೇಕು. ಜೀವನದಲ್ಲಿ ಇಂಥ ದೃಷ್ಟಿಕೋನ ಇರಬೇಕು. ಅದು ಖುಷಿ ಕೊಡತೈತಿ.

ಹೊಲದಲ್ಲಿ ಯಾರೂ ಕಳೆ ಬೆಳೆಯೋದಿಲ್ಲ. ಬಿತ್ತಿದ್ದು ಬೆಳೆ ಆದರೂ ಕಳೆ ಬೆಳೀತೈತಿ. ಜಾಣ ರೈತ ಏನು ಮಾಡ್ತಾನೆ ಅಂದರ ಕಳೆ ತೆಗೀತಾನೆ ಬೆಳೆ ಉಳಿಸ್ಕೊತಾನೆ. ಹಾಂಗೆ ಜೀವನದಲ್ಲೂ ಕೆಟ್ಟದ್ದು ಒಳ್ಳೇದು ಎಲ್ಲಾ ಇರತೈತಿ. ಜಾಣ ಮನುಷ್ಯ ಜೀವನದ ಕೆಟ್ಟದ್ದು ಬಿಟ್ಟು ಚಲೋದು ಸ್ವೀಕಾರ ಮಾಡ್ತಾನೆ. ಅದು ಜೀವನ.

ಗ್ರಾಮ ಗ್ರಾಮಗಳಲ್ಲಿ ನಾಗಪ್ಪನ ಕಲ್ಲು ಇರ್ತಾವಲ್ಲ. ಒಮ್ಮೆ ನಾಗಪ್ಪ ‌ಹನುಮಪ್ಪಗೆ ಕೇಳಿದನಂತೆ. ‘ನಿನಗೆ ಎಷ್ಟೊಂದು ಜನ ಬರ್ತಾರೆ. ಆದರೆ ನನಗೆ ಯಾರೂ ಬರಲ್ಲ. ವರ್ಷದಲ್ಲಿ ಒಮ್ಮೆ ಪಂಚಮಿಗೆ‌ ಬಂದ್ರೆ ಮುಗೀತು ನಂತರ ಯಾರೂ ಬರೋದೇ ಇಲ್ಲ. ನಿನಗಾದರೆ ಭಕ್ತರ ಕ್ಯೂ ಯಾವಾಗಲೂ ಇರ್ತದೆ ಯಾಕೆ’ ಎಂದು. ಅದಕ್ಕೆಹನುಮಪ್ಪ ‘ಅವರು ನನ್ನ ನೋಡಾಕೆ ಬರೋದಿಲ್ಲ. ಕೈಲಿ ಒಂದು ಲಿಸ್ಟ್ ಹಿಡಕೊಂಡೇ ಬಂದಿರ್ತಾರ, ಕೇಳಿದ್ದೇ ಕೇಳ್ತಾರ. ಅದಕ್ಕೆ ನಾನು ಅವರನ್ನು ನೋಡೋದೇ ಇಲ್ಲ’ ಅಂತಾನೆ. ಹನುಮಪ್ಪಗೆ ಗೊತ್ತು ಯಾರೂ ತನ್ನ ಮೇಲಿನ ಪ್ರೀತಿಗೆ ಬಂದಿಲ್ಲ ಅಂತ. ತಮಗೆ ಬೇಕು ಅಂತ ಬಂದಾರ. ಕಷ್ಟಪಡದೆ ಫಲ ಬೇಕು ಎಂದು ಬಂದಾರ ಅಂತ. ಅದಕ್ಕ‌ ಹನುಮಪ್ಪ ಯಾವಾಗಲೂ ಮುಖ ತಿರುಗಿಸಿ ನಿಂತಿರ್ತಾನ. ಮಕ್ಕಳಿಗೆ ಕೆಲಸ ಮಾಡೋದ ಕಲಿಸಿ. ಫಲ ತಾನಾಗಿಯೇ ಬರ್ತೈತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.