ಒಬ್ಬ ಮನುಷ್ಯನಿಗೆ ಜೀವನದಲ್ಲಿ ತುಂಬಾ ಜಿಗುಪ್ಸೆ ಬಂದಿತ್ತು. ಅವನು ಎಲ್ಲವನ್ನೂ ಬಿಟ್ಟು ಎಲ್ಲಿಗಾದರೂ ಹೋಗಿಬಿಡುವುದೆಂದು ತೀರ್ಮಾನಿಸಿದ್ದ. ತನ್ನ ಬಳಿ ಹಣವಿಲ್ಲ, ಪ್ರೀತಿಸುವ ಜನರಿಲ್ಲ, ತನ್ನಪ್ಪ ತನಗಾಗಿ ಏನನ್ನೂ ಮಾಡಿಡಲಿಲ್ಲ... ಹೀಗೆ ತನ್ನ ಬೇಸರಕ್ಕೆ ತಾನೇ ಕಾರಣಗಳನ್ನು ಹುಡುಕಿಕೊಳ್ಳುತ್ತಿದ್ದ. ಹೀಗೆ ನಡೆದುಕೊಂಡು ಹೋಗುವಾಗ ತುಂಬಾ ದಣಿವಾಗಿ, ಹಣ್ಣುಗಳು ತುಂಬಿದ ಒಂದು ಮರದ ಕೆಳಗೆ ಕುಳಿತ.
ಮರದ ಮೇಲಿಂದ ಹಕ್ಕಿಯೊಂದು ನೆಲದಕಡೆಗೆ ಹಾರಿ ಬಂತು. ಅದರ ಚಲನವಲನವನ್ನು ನೋಡಿದರೆ ಯಾರಿಗಾದರೂ ಈ ಹಕ್ಕಿ ಖುಷಿಯಾಗಿದೆ ಎನ್ನಿಸುವಂತಿತ್ತು. ಅದು ಹಾರಿ ನೆಲಕ್ಕೆ ಇಳಿಯುವವರೆಗೂ ಅವನಿಗೆ ಆ ಹಕ್ಕಿಗೆ ಒಂದು ಕಾಲಿಲ್ಲ ಎಂದು ಗೊತ್ತಾಗಲೇ ಇಲ್ಲ. ಒಂಟಿ ಕಾಲಲ್ಲಿ ಕುಂಟುತ್ತಾ ನಡೆಯುತ್ತಾ ತನಗೆ ಬೇಕಾದ ಹಣ್ಣುಗಳನ್ನು ಬೀಜಗಳನ್ನು ಹೆಕ್ಕಿ ತಿನ್ನುತ್ತಾ ಖುಷಿಯಲ್ಲಿ ಕೂಗುತ್ತಾ ಓಡಾಡುತ್ತಿತ್ತು. ಆ ಮನುಷ್ಯನಿಗೆ ಆಶ್ಚರ್ಯವಾಯ್ತು; ಒಂದು ಕಾಲಿಲ್ಲ ಆದರೂ ಇಷ್ಟು ಖುಷಿಯಾಗಿದೆಯಲ್ಲಾ! ಎನ್ನಿಸಿ, ಆ ಪಕ್ಷಿಯನ್ನು ತಡೆದು, ‘ಎಲೆ ಹಕ್ಕಿಯೇ ಇಷ್ಟು ಖುಷಿಯಾಗಿದ್ದೀಯಲ್ಲಾ ನಿನಗೆ ಒಂದು ಕಾಲಿಲ್ಲ ಎನ್ನುವುದು ಗೊತ್ತಿದೆಯೇ?’ ಎಂದು ಕೇಳಿದ. ಹಕ್ಕಿ ನಗುತ್ತಾ, ‘ಯಾಕೆ ಗೊತ್ತಿಲ್ಲ ಗೊತ್ತಿದೆ’ ಎಂದಿತು. ‘ಇಂಥಾ ದೊಡ್ಡ ಕೊರತೆ ನಿನಗಿದ್ದಾಗಲೂ ನೀನು ಹೇಗೆ ಸಂತಸದಲ್ಲಿದ್ದೀಯ?’ ಎಂದು ಮರು ಪ್ರಶ್ನಿಸಿದ.
ಅಷ್ಟರಲ್ಲಿ ಅಲ್ಲೊಂದು ಹಾವು ಹರಿದು ಹೋಯಿತು. ಹಕ್ಕಿ ಅದನ್ನು ತೋರಿಸುತ್ತಾ, ‘ನೋಡು ದೇವರು ನನಗೆ ಒಂದು ಕಾಲನ್ನಾದರೂ ಕೊಟ್ಟಿದ್ದಾನೆ. ಜೊತೆಗೆ ಹಾರುವ ಚೈತನ್ಯ ತುಂಬಿದ ರೆಕ್ಕೆಗಳನ್ನು ಕೊಟ್ಟಿದ್ದಾನೆ. ನೆಲದಲ್ಲಿ ತೆವಳುತ್ತಿರುವ ಹಾವಿಗೆ ಕಾಲನ್ನೇ ಕೊಟ್ಟಿಲ್ಲ. ಅದಕ್ಕೆ ರೆಕ್ಕೆಗಳೂ ಇಲ್ಲ. ಈಗ ಹೇಳು ನನಗೆ ಸಂತಸಪಡಲಿಕ್ಕೆ ಇದಕ್ಕಿಂತ ಹೆಚ್ಚಿನದ್ದೇನು ಬೇಕು? ಇಲ್ಲ ಎನ್ನುವ ಲೆಕ್ಕದಲ್ಲಿ ಆಸಕ್ತಿ ಬಂದುಬಿಟ್ಟರೆ, ಇರುವುದು ಮರೆತು ಹೋಗುತ್ತದೆ. ಅದಕ್ಕೆ ನನ್ನ ಬಳಿ ಇರುವುದನ್ನು ಬೇರೆಯವರ ಬಳಿ ಇಲ್ಲದಿರುವುದನ್ನು ಮಾತ್ರ ನೋಡು. ಆಗ ಜಗತ್ತಿನ ಖುಷಿ ನಿನ್ನ ಬಳಿ ಇರುತ್ತದೆ’ ಎಂದು ಹಾರಿ ಹೋಯಿತು.
‘ಹಕ್ಕಿಯ ಮಾತು ಎಷ್ಟು ಸರಿಯಲ್ಲವಾ! ನನ್ನ ಹತ್ತಿರ ಇಲ್ಲ ಎಂದು ಕೊರಗುತ್ತಿರುವುದೆಲ್ಲವನ್ನೂ ನಾನು ಗಳಿಸಿಕೊಳ್ಳಬಹುದು. ನನಗೆ ಎಲ್ಲವೂ ಇದೆ. ಮುಖ್ಯ ಗಟ್ಟಿಯಾಗಿ ನಿಲ್ಲಲು ಎರಡು ಕಾಲು. ಅದೇ ಇಲ್ಲದಿರುವ ಹಕ್ಕಿ ಸಂತೋಷದಿಂದ ಇರುವುದಾದರೆ ನಾನ್ಯಾಕೆ ಇರಬಾರದು?’ ಎಂದು ಮನೆಗೆ ವಾಪಸಾದ. ಕಷ್ಟಪಟ್ಟು ದುಡಿದ. ಎಲ್ಲವನ್ನೂ ಗಳಿಸಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.