ADVERTISEMENT

ನುಡಿ ಬೆಳಗು: ಕತ್ತಲಲ್ಲಿ ಕೈ ತುತ್ತಿಟ್ಟ ತಾಯಿ

ಪ್ರೊ. ಎಂ. ಕೃಷ್ಣೇಗೌಡ
Published 14 ಜೂನ್ 2024, 0:10 IST
Last Updated 14 ಜೂನ್ 2024, 0:10 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮೈಸೂರಿನ ಎಂ.ಎನ್. ಜೋಯಿಸ್ ಅವರು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನನ್ನೊಂದಿಗೆ ಹೇಳಿದ ಒಂದು ಕತೆ ನನ್ನನ್ನು ಈಗಲೂ ಕಾಡುತ್ತದೆ. ಅದನ್ನು ಅವರ ಮಾತುಗಳಲ್ಲೇ ಹೇಳುತ್ತೇನೆ, ಕೇಳಿ-

‘ಆಗ ಸ್ವದೇಶೀ ಪ್ರಚಾರಕ್ಕಾಗಿ ನಾವು ಹಳ್ಳಿ ಹಳ್ಳಿಗಳಿಗೆ ಹೋಗ್ತಾ ಇದ್ದೊ. ಆಗೆಲ್ಲಾ ಬಸ್ಸುಗಿಸ್ಸು ಇರಲಿಲ್ಲ, ನಡೆದುಕೊಂಡೇ ಪ್ರಯಾಣ. ಜೊತೆಗೆ ನಮ್ಮ ಮೇಲೆ ಅರೆಸ್ಟ್ ವಾರಂಟ್ ಬೇರೆ ಇದ್ದದ್ದರಿಂದ ನಾವು ದೊಡ್ಡರಸ್ತೆಗಳನ್ನು ಬಿಟ್ಟು ಒಳದಾರಿಗಳಲ್ಲಿ ಓಡಾಡುತ್ತಿದ್ದೊ’.

ADVERTISEMENT

‘ಅದೊಂದು ದಿನ ನಾನೂ ತಗಡೂರು ರಾಮಚಂದ್ರರಾಯರೂ ಮಳವಳ್ಳಿ ಕಡೆ ಹಳ್ಳಿಗಳಿಗೆ ಹೋಗಿದ್ದೊ. ಅದೊಂದು ಊರಿನಲ್ಲಿ ಕತ್ತಲಾಯಿತು. ಸಿಕ್ಕಾಪಟ್ಟೆ ನಡೆದು ಆಯಾಸವಾಗಿತ್ತು. ಆವತ್ತು ಬೆಳಿಗ್ಗಿನಿಂದಲೂ ಹೊಟ್ಟೆಗೆ ಏನೆಂದರೆ ಏನೂ ಹಾಕಿರಲಿಲ್ಲ. ಆಗೆಲ್ಲಾ ಈ‌ ಕರೆಂಟ್ ಗಿರೆಂಟ್ ಇರಲಿಲ್ಲವಲ್ಲ, ರಾತ್ರಿ ಬಹಳ ಹೊತ್ತು ದೀಪ ಉರಿಸೋಕೆ ಹಳ್ಳಿಯವರಿಗೆ ಸೀಮೆಎಣ್ಣೆ ಸಿಕ್ತಾ ಇರಲಿಲ್ಲ. ಹಾಗಾಗಿ ಹೊತ್ತುಮುಳುಗಿದ ಸ್ವಲ್ಪ ಹೊತ್ತಿಗೆಲ್ಲಾ ಹಳ್ಳಿಗಳ ಸದ್ದಡಗಿ ಹೋಗುತ್ತಿತ್ತು’.

‘ಅದ್ಯಾವ ಊರೋ ಈವತ್ತಿಗೂ ಗೊತ್ತಿಲ್ಲ. ಒಬ್ಬರ ಮುಖ ಒಬ್ಬರಿಗೆ ಕಾಣದಂಥಾ ಕತ್ತಲು. ನಾವಿಬ್ಬರೂ ಒಂದು ಮನೆಯ ಹಿಂಭಾಗದ ಗೋಡೆಗೆ ಒರಗಿಕೊಂಡು ಸಣ್ಣಗೆ ಮಾತಾಡುತ್ತಾ ಕುಳಿತಿದ್ದೊ. ರಾಮಚಂದ್ರರಾಯರು, ‘ಈವತ್ತು ಹೊಟ್ಟೆಗೆ ಏನೂ ಸಿಗಲಿಲ್ವಲ್ಲೋ ಜೋಯಿಸ? ನನಗಂತೂ ತುಂಬಾ ಹಸಿವಾಗ್ತಾ ಇದೆ, ಏನೋ ಮಾಡೋದು..?’ ಅಂದ್ರು. ಆಗ ನಮ್ಮ ತಲೆಯ ಮೇಲಿದ್ದ ಆ ಮನೆಯ ಒಂದು ಸಣ್ಣ ಕಿಟಕಿ ತೆರೆದುಕೊಳ್ತು. ಒಳಗಿನಿಂದ ಯಾರೋ ತಾಯಿ ‘ಯಾರಪ್ಪಾ? ಸೊಸಂತ್ರದೋರಾ?’ ಅಂದ್ಳು. ‘ಹೌದು ತಾಯಿ’ ಅಂದೊ. ‘ಅಯ್ಯೋ ಪಾಪ, ಒಟ್ಟೆ ಅಸೀತಾ ಇದ್ದದಾ? ನಮ್ಮನೇಲೂ ಅಟ್ಟುಂಡು ಮುಗೀತಲ್ಲಪ್ಪಾ, ಏನ್ ಮಾಡೂದು....? ನಮ್ಮನೇಲಿ ಒಸಿ ಹಳಸಿದ ಅನ್ನ ಅದೆ , ಹುಳಿ ಮಜ್ಜಗೆ ಅದೆ. ನೀವೇನೂ ತೆಪ್ಪುತಿಳಕೊಳ್ಳದೆ ಓದ್ರೆ ಅದನ್ನೇ ಕಲಸಿಕೊಡ್ತೀನಿ, ತಿನ್ತಿರಾ?’ ಅಂದ್ಳು. ಆನಂದವಾಗೋಯ್ತು ನಮಗೆ. ‘ಕೊಡು ತಾಯಿ ತಿನ್ತೀವಿ’ ಅಂದೊ.

‘ಆ ತಾಯಿ, ಹುಳಿ ಮಜ್ಜಿಗೆಯಲ್ಲಿ ಕಲಸಿದ ಹಳಸಿದ ಅನ್ನವನ್ನ ಕಿಟಕಿಯೊಳಗಿಂದ ಕೈತುತ್ತು ಕೊಟ್ಟಳು. ನಾವು ಈ ಕಡೆಯಿಂದ ಅದನ್ನ ಈಸ್ಕೊಂಡು ತಿಂದೊ. ಆ ದೃಶ್ಯವನ್ನ ಕಲ್ಪನೆ ಮಾಡ್ಕೊಳ್ಳಿ. ನಮಗೆ ಕೈತುತ್ತು ಕೊಡೋ ತಾಯಿಯ ಮುಖ ನಮಗೆ ಕಾಣಿಸ್ತಿಲ್ಲ. ಅವಳಿಗೆ ನಮ್ಮ ಮುಖ ಕಾಣ್ತಾ ಇಲ್ಲ. ಆ ಹಸಿವಿನಲ್ಲಿ ಆ ತಾಯಿ ಕೊಟ್ಟದ್ದು ಊಟವಲ್ಲ ಕಣಪ್ಪಾ...ಪ್ರಸಾದ.. ಹಾಗಂತ ನಾನೂ ತಗಡೂರು ರಾಮಚಂದ್ರರಾಯರೂ ಕಣ್ಣಿಗೊತ್ತಿಕೊಂಡು ಊಟ ಮಾಡಿದೊ’.

ಈ ಕತೆ ಹೇಳಿ ಮುಗಿಸುವಷ್ಟರಲ್ಲಿ ಜೋಯಿಸರ ಕಣ್ಣಲ್ಲಿ ನೀರು ತುಳುಕುತ್ತಿದ್ದವು. ಸ್ವಲ್ಪ ಹೊತ್ತಾದ ಮೇಲೆ ಅವರ ನೆನಪಿನ‌ ಲೋಕದಿಂದ ಹೊರಬಂದು ಜೋಯಿಸರು ಹೇಳಿದರು-

‘ಸ್ವಾತಂತ್ರ್ಯ ಸುಮ್ನೆ ಸಿಕ್ಕಿದ್ದಲ್ಲಪ್ಪ, ನಿಮ್ಮ ಮನೆ, ಊರು, ಕಚೇರಿಗಳಲ್ಲಿ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ, ಅಧಿಕಾರ ಸಿಕ್ಕರೆ ಜನರನ್ನ ಅಯ್ಯೋ ಅನ್ನಸಬೇಡಿ. ಈ ಸ್ವಾತಂತ್ರ್ಯಕ್ಕಾಗಿ ರಕ್ತವೂ ಹರಿದಿದೆ, ಕಣ್ಣೀರೂ ಹರಿದಿದೆ. ಯಾರಾದರೂ ಅದನ್ನ ಬೇಕಾಬಿಟ್ಟಿ ಬಳಸಿದರೆ ನಮಗೆ ಹೊಟ್ಟೆ ಉರಿಯುತ್ತೆ...’ ಹೀಗೆಂದು ಮಾತು ಮುಗಿಸಿದರು ಎಂ.ಎನ್. ಜೋಯಿಸರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.