ADVERTISEMENT

ನುಡಿ ಬೆಳಗು-39: ಕಷ್ಟ ಪರಿಹಾರಕ್ಕೆ ಮೂರು ಸೂತ್ರಗಳು!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 7 ಅಕ್ಟೋಬರ್ 2024, 23:30 IST
Last Updated 7 ಅಕ್ಟೋಬರ್ 2024, 23:30 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಜೀವನದಲ್ಲಿ ಕಷ್ಟ ಬಂದಾವ, ಕಷ್ಟ ಎದಿಮ್ಯಾಲೇ ಕುಂತೈತಿ. ಬಗೆಹರಿಸಿಕೊಳ್ಳೋದು ಹ್ಯಾಂಗೆ ಹೇಳಿ ಮೊದ್ಲು ಅಂತಾರ. ಇದಕ್ಕೆ ಜ್ಞಾನಿಗಳು, ಹಿರಿಯರು ಮೂರು ಸೂತ್ರ ಮಾಡಿಟ್ಟಾರ. ಎಷ್ಟೇ ಕಷ್ಟ ಬಂದರೂ ಈ ಮೂರು ಸೂತ್ರ ಪಾಲನೆ ಮಾಡಿ. ಎಲ್ಲದಕ್ಕೂ ಪರಿಹಾರ ಸಿಕ್ತಾವ. ಒಂದನೆಯದ್ದು ಸಹನಶೀಲತೆ, ಎರಡನೆಯದ್ದು ಸಾಹಸ, ಮೂರನೆಯದ್ದು ಸಮಾಧಾನ.

ಸಹನಶೀಲತೆ ಅಂದರ ಜೀವನದಲ್ಲಿ ಬರುವ ಸುಖದುಃಖಗಳನ್ನು ಅಪ್ರತೀಕಾರ ಪೂರಕವಾಗಿ ಸ್ವೀಕಾರ ಮಾಡೋದು. ಯಾವುದಕ್ಕೂ ಪ್ರತೀಕಾರ ಮಾಡಬ್ಯಾಡ್ರಿ. ನಿಮಗೆ ಯಾರಾದರೂ ನಿಂದನೆ ಮಾಡಿದರೆ ಪ್ರತೀಕಾರ ಮಾಡಬೇಕು ಅನಸತೈತಿ. ಅಂದರೆ ನನ್ನ ದೇಹ, ನನ್ನ ಮನಸ್ಸು ನನ್ನ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿಲ್ಲ. ಅವ ಹೇಳಿದ ಶಬ್ದಕ್ಕೆ ಪೂರಕವಾಗಿ ಕೆಲಸ ಮಾಡಾಕ ಹತ್ತೈತಿ. ನಮ್ಮ ದೇಹ, ನಮ್ಮ ಮನಸ್ಸು ಅವ ಹೇಳಿದ ಶಬ್ದದ ಸ್ವಾಧೀನ, ಗುಲಾಮ ಆಗಬಿಡತೈತಿ. ಅದಕ್ಕೆ ಅವಕಾಶ ಕೊಡಬಾರದು. ಸಹನೆಯಿಂದ ಜಗತ್ತನ್ನು ನೋಡಬೇಕು.

ADVERTISEMENT

ಒಂದು ಕಡೆ ಡಾಂಬರ್ ರೋಡ್ ಮಾಡಾಕತ್ತಿದ್ರು. ಅಲ್ಲೊಂದು ಜಲ್ಲಿ ಕಲ್ಲು (ಕಂಕರ) ಬಿದ್ದಿತ್ತಂತೆ. ಅದರ ಮುಂದೆ ಒಂದು ಗುಡಿ ಇತ್ತು. ಈ ಕಂಕರ, ಗುಡ್ಯಾಗಿನ ಮೂರ್ತಿಗೆ ಕೇಳಿತಂತ, ‘ಅಲ್ಲಾ ನಾವಿಬ್ಬರೂ ಒಂದೇ ಬೆಟ್ಟದ ಕಲ್ಲುಗಳು. ನನಗ ಇಲ್ಲಿ ಜನ ತುಳೀತಾರ, ಬಸ್ಸು ಲಾರಿ ಎಲ್ಲಾ ಓಡಿಸ್ತಾರ, ಆದರೆ ನಿನಗ ಪೂಜೆ ಮಾಡ್ತಾರ. ಯಾಕೆ’ ಎಂದು. ಅದಕ್ಕೆ ಮೂರ್ತಿ ಹೇಳಿತಂತ, ‘ನೀನು ಕೇಳಿದ್ದು ಸರಿ ಐತಿ. ಮೂರ್ತಿ ಮಾಡಾಂವ ಮೊದಲು ನಿನ್ನನ್ನೇ ಆಯ್ಕೆ ಮಾಡಿಕೊಂಡ. ನಾಲ್ಕೇಟು ಹೊಡೆಯೋದರೊಳಗ ನೀನು ಎರಡು ಹೋಳಾಗಿ ಬಿದ್ದೆ. ಆ ಮ್ಯಾಲ ನನ್ನ ತಗಂಡ. ನನಗೆ ನೂರು ಬಾರಿ, ಸಾವಿರ ಬಾರಿ ಹೊಡದಾ. ನಾನು ಸುಮ್ಮನೆ ಇದ್ದೆ. ತಾಳಿಕೊಂಡೆ, ಒಂದು ದಿನ ಸುತ್ತಿಗೆ ಚಾಣ ತೆಗೆದಿಟ್ಟು ‘ನಿನ್ನ ಸಹನೆಗೆ ನಾನು ಶರಣಾದೆ ಎಂದು ಅವನೇ ಕೈಮುಗಿದ. ಇಬ್ಬರೂ ಒಂದೇ ಬೆಟ್ಟದಿಂದ ಬಂದಿದ್ದರೂ ನೀನು ಸಹನೆ ಇಲ್ಲದೆ ಕ್ರಶರ್‌ಗೆ ಸಿಕ್ಕು ಕಂಕರ ಆದೆ. ನಾನು ಸಹನೆ ಇದ್ದಿದ್ದರಿಂದ ಗುಡಿಯಾಗ ಬಂದು ಶಂಕರ ಆದೆ’ ಎಂತು.

ಸಹನೆ ಇದ್ದವರು ಶಂಕರರಾಗುತ್ತಾರೆ. ಸಂಸಾರ ದೊಳಗೆ ಸಹನೆ ಇರಬೇಕು. ಸಾಲ ಹೆಚ್ಚಾತಂತ ರೈತರು ಆತ್ಮಹತ್ಯೆ ಮಾಡಿಕೊಳ್ತಾರ. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ರೈತರು ವಿಚಾರ ಮಾಡಬೇಕು. ನಿಮ್ಮ ಕೊಟ್ಟಿಗೆಯಲ್ಲಿ ಇರುವ ಆಕಳು, ಎತ್ತು, ಕುರಿ ಕೋಳಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕಳ, ಕುರಿ ಕೋಳಿ ಆತ್ಮಹತ್ಯೆ ಮಾಡಿಕೊಂಡಿವೆ ಎಂದು ಯಾವುದಾದರೂ ಪೇಪರ್ನ್ಯಾಗ ನೋಡಿರೇನು? ಅಂದರೆ ಮನುಷ್ಯ ಕುರಿ, ಕೋಳಿ, ಆಕಳಿಗಿಂತ ಹೇಡಿಯಾದ ಅಂತ ಅರ್ಥ ಅಲ್ಲೇನು? ಪರೀಕ್ಷೆಯಲ್ಲಿ ಫೆಲಾತು ಅಂತ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗರೂ ಯೋಚಿಸಬೇಕು. ಪಿಯುಸಿ, ಎಸ್ಎಸ್ಎಸ್‌ಎಲ್‌ಸಿ ಫೇಲಾತು ಅಂದರೆ ಮತ್ತೆ ಪರೀಕ್ಷೆ ಬರ್ತದ. ಅದೇನು 12 ವರ್ಷಕ್ಕೆ ಬರೋ ಕುಂಭಮೇಳನಾ? 3 ತಿಂಗಳಿಗೆ 6 ತಿಂಗಳಿಗೆ ಮತ್ತೆ ಬಂದೇ ಬರ್ತದ. ಆಗ ಪಾಸು ಮಾಡಿದರಾತು. ಪರೀಕ್ಷೆ ಅಂದ ಮೇಲೆ ಪಾಸು ಫೇಲು ಎಲ್ಲಾ ಇದ್ದೇ ಇರ್ತದ. ಫೇಲಾತು ಅಂತ ಕುಗ್ಗಬಾರದು. ಜೀವನದಲ್ಲಿ ಸಹನೆ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.