ಜೀವನದಲ್ಲಿ ಕಷ್ಟ ಬಂತು ಅಂದ್ರ ಮಾನವ ಸಾಹಸ ಮಾಡಬೇಕು. ಸಾಹಸ ಮಾಡೋದು ಅಂದ್ರ ಯುದ್ಧ ಮಾಡೋದಲ್ಲ. ಗೊತ್ತಿಲ್ಲದ ದಾರಿಯಲ್ಲಿ ನಡೆಯೋದು ಅಷ್ಟೆ. ಕೊಲಂಬಸ್, ವಾಸ್ಕೊಡಾಗಾಮ ಅವರು ಹೊಸ ಭೂ ಪ್ರದೇಶ ಕಂಡುಹಿಡಿಯಲು ಕೈಯಲ್ಲಿ ಏನು ನಕಾಶೆ ಹಿಡಕೊಂಡು ಹೋಗಿದ್ದರೇನು? ಕಾಣದ ದಾರಿಯಲ್ಲಿ ಸಾಗಿದರು. ನಕಾಶೆ ಇಲ್ಲದೆ ಸಮುದ್ರದೊಳಗೆ ಪ್ರಯಾಣಿಸೋದು ಸಾಹಸ. ಅವರು ಸಾಹಸ ಮಾಡಿದರು.
ಮುಂದ ಏನಾಗತ್ತ ಅಂತ ಗೊತ್ತಿಲ್ಲದಿದ್ದರೂ ದೃಢ ಹೆಜ್ಜೆ ಇಡೋದು ಸಾಹಸ. ಮಾನವನ ಇತಿಹಾಸವನ್ನು ನೋಡಿದರ ಇದು ಸ್ಪಷ್ಟವಾಗುತ್ತದೆ. ಗುಹೆಯಿಂದ ಹಿಡಕೊಂಡು ಗೂಗಲ್‌ವರೆಗೆ ಮಾನವನ ವಿಕಾಸದ ಹೆಜ್ಜೆಗಳು ಅಂದರ ಮಾನವನ ಸಾಹಸದ ಹೆಜ್ಜೆಗಳು ಅಷ್ಟೆ. ಸಾಹಸಿಯಾಗಬೇಕು ಮನುಷ್ಯ.
ಒಬ್ಬ ವ್ಯಕ್ತಿ ಇದ್ದ. ಅವ ಶಾಲೆಗೆ ಬಂದರೆ ಶಾಲೆ ಅಪವಿತ್ರ ಆಗತೈತಿ ಅಂತ ದೂರ ಕುಡಸ್ತಿದ್ರು. ಟಾಂಗಾದಲ್ಲಿ ಕುಳಿತರೆ ಅಪವಿತ್ರ ಅಂತ ಟಾಂಗಾದಿಂದ ಇಳಸ್ತಿದ್ರು. ಯಾವುದೇ ಗುಡಿಯೊಳಗ ಅವನನ್ನು ಸೇರಿಸ್ತಿರಲಿಲ್ಲ. ಗ್ರಂಥಾಲಯಕ್ಕೆ ಹೋದರೆ ಗ್ರಂಥ ಮುಟ್ಟಲು ಕೊಡುತ್ತಿರಲಿಲ್ಲ. ಅಂತಹ ಮನುಷ್ಯ ಒಂದು ಗ್ರಂಥ ಬರೆದ. ಅದೇ ಭಾರತದ ಸಂವಿಧಾನ. ಅದನ್ನು ಬರೆದವರು ಡಾ.ಬಿ.ಆರ್.ಅಂಬೇಡ್ಕರ್. ಇಡೀ ಭಾರತವೇ ಅದನ್ನು ಪವಿತ್ರ ಗ್ರಂಥ ಎಂದಿತು. ಅಪ್ಪಿಕೊಂಡಿತು. ಇದು ಸಾಹಸ.
ಹಿಮಾದಾಸ್ ಅಂತ ಒಬ್ಬಳು ಹುಡುಗಿ ಇದ್ದಾಳ. ಆಕಿಗೆ ಲೇಡಿ ಉಸೇನ್ ಬೋಲ್ಟ್ ಅಂತಾರ. ಓಟದ ರಾಣಿ ಅಂತಾನು ಕರೀತಾರ. ಅಸ್ಸಾಂ ರಾಜ್ಯದ ಒಂದು ಸಣ್ಣ ಹಳ್ಳಿಯ ಹುಡುಗಿ ಆಕಿ. ಶಾಲೆಯಲ್ಲಿ ಫುಟ್‌ಬಾಲ್ ಆಡಾಕ ಹೋಗುತ್ತಿದ್ದಳು. ಆಕೆಯ ಆಟ ನೋಡಿದ ಒಬ್ಬ ಕೋಚ್ ‘ನೀನು ಛೊಲೊ ಓಡ್ತಿ, ಫುಟ್‌ಬಾಲ್ ಬೇಡ, ಓಟದ ಅಭ್ಯಾಸ ಮಾಡು’ ಅಂದ. ಆಕಿ ಓಟದ ಅಭ್ಯಾಸ ಮಾಡಿದಳು. ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದಳು.
ಅವಳು ಒಂದಿಷ್ಟು ದಿನ ಬರಿಗಾಲಲ್ಲಿ ಓಡುತ್ತಿದ್ದಳು. ಆಕಿಗೆ ಬೂಟ್ಸ್ ತೆಗೆದುಕೊಳ್ಳಲು ರೊಕ್ಕ ಇದ್ದಿರಲಿಲ್ಲ. ಆಕಿ ಅಪ್ಪ ಅಲ್ಲಿ ಇಲ್ಲಿ ರೊಕ್ಕ ಕೂಡಿಸಿ ಲೋಕಲ್ ಬೂಟ್ಸ್ ಕೊಡಿಸುತ್ತಿದ್ದ. ಆಕಿ ಸ್ನೇಹಿತೆಯರು ಅಡಿಡಾಸ್ ಕಂಪನಿ ಬೂಟ್ಸ್ ಹಾಕ್ಕೊಂಡು ಅಭ್ಯಾಸ ಮಾಡಿದರೆ, ಈಕಿ ತನ್ನ ಲೋಕಲ್ ಬೂಟ್ಸ್‌ಗಳ ಮೇಲೆ ಅಡಿಡಾಸ್ ಎಂದು ಪೆನ್ನಿಂದ ಬರಕೋತ್ತಿದ್ದಳು. 2018ರಲ್ಲಿ ಹಿಮಾದಾಸ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಬಂದಳು. ಆಗ ಅಡಿಡಾಸ್ ಕಂಪನಿಯವರು ತಮ್ಮ ಒಂದು ಉತ್ಪನ್ನಕ್ಕೆ ಹಿಮಾದಾಸ್ ಅಂತಲೇ ಹೆಸರಿಟ್ಟು ಪ್ರಚಾರ ಮಾಡಿದರು. ಯಾವುದು ಅಡಿಡಾಸ್ ಆಗಿತ್ತೋ, ಅದು ಹಿಮಾದಾಸ್ ಅಡಿಯಲ್ಲೇ ಬಂದು ಬಿತ್ತು. ಅದು ಸಾಹಸದಿಂದ ಆಗಿದ್ದು. ಸಾಹಸ ಇಲ್ಲದೆ ಜೀವನ ಸಾಧ್ಯವಿಲ್ಲ.
ಭೂಮಿಯಲ್ಲಿ ಒಂದು ಸೂರ್ಯಕಾಂತಿ ಬೀಜ ಬಿದ್ದಿರತೈತಿ. ಸೂರ್ಯ ಎಷ್ಟು ದೊಡ್ಡವ, ಭೂಮಿ ಎಷ್ಟು ದೊಡ್ಡದು, ಗಾಳಿ ಎಷ್ಟೈತಿ, ನೀರು ಎಷ್ಟೈತಿ? ಇವರೆಲ್ಲರ ಸಹಕಾರ ಪಡೆದು ಬೆಳೆದರೂ ಸೂರ್ಯಕಾಂತಿ ಸೂರ್ಯನಂಗೂ ಆಗಲಿಲ್ಲ, ಭೂಮಿಯಂಗೂ ಆಗಲಿಲ್ಲ. ಅದು ತನ್ನ ಬಣ್ಣ ಬಿಟ್ಟುಕೊಡಲಿಲ್ಲ. ತನ್ನಿಚ್ಛೆ ಹ್ಯಾಂಗೈತೋ ಹಾಂಗ ಬದುಕಿ ಬೆಳದೈತಿ. ಅದು ಸಾಹಸ. ಜೀವನಕ್ಕೆ ಸಾಹಸ ಎನ್ನುವುದು ಅನಿವಾರ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.