ADVERTISEMENT

ನುಡಿ ಬೆಳಗು–41: ಮನಸ್ಸಿನ ಮೇಲೆ ಮೋಹಕ ಬಲೆ!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಮನೋವಿಜ್ಞಾನಿಗಳು ಮನಸ್ಸಿನ ಬಲೆಯ ಬಗ್ಗೆ ಬರೀತಾರ. ಓದಬೇಕು ಅನಕೋತೀರಿ, ಆದರೆ ಮನಸ್ಸು ಯಾವುದಾದರೂ ಬಲೆಯೊಳಗೆ ಸಿಲುಕಿಬಿಡತೈತಿ. ಬಹಳ ಬಡತನ ಐತ್ರಿ, ಅದಕ್ಕ ಓದಾಕ ಆಗಲಿಲ್ಲ ಅಂತೀರಿ. ಬಡತನ ಇದ್ದರ ಓದಾಕ ಆಗಲಿಲ್ಲ ಅಂದ್ರ ಪುದುಚೇರಿಯೊಳಗ ಬೋಟು ಕಟ್ಟುವವನ ಮಗ, ಪೇಪರ್ ಮಾರಿಕೊಂಡು ಬಂದು ಓದಿ ರಾಷ್ಟ್ರಪತಿ ಆದರಲ್ಲ ಅಬ್ದುಲ್ ಕಲಾಂ, ಅವರು ಶ್ರೀಮಂತರ ಮನೆಯಲ್ಲಿ ಹುಟ್ಟಿದ್ದರೇನು? ಬಡವರ ಮನೆಯಲ್ಲಿ ಹುಟ್ಟಿ ಭಾರತದ ಭಾಗ್ಯವಿದಾತರಾದರು ಅಬ್ದುಲ್ ಕಲಾಂ.

ನಮ್ಮದು ಬಹಳ ಕಷ್ಟಾರಿ. ಮನೆ ಬಾಗಿಲು ಪಶ್ಚಿಮ ದಿಕ್ಕಿಗೆ ಐತಿ. ಅದಕ್ಕೆ ಏಳಿಗೇನೆ ಆಗವಲ್ದು ಅಂತೀರಿ. ಮನೆ ಬಾಗಿಲು ಪಶ್ಚಿಮ ದಿಕ್ಕಿಗೆ ಇದ್ದರ ಏನಾತು? ನಿಮ್ಮ ಹಿತ್ತಲಲ್ಲಿ ಮಾವಿನ ಗಿಡ ಹಚ್ಚೀರಿ, ತೆಂಗಿನ ಗಿಡ ಹಚ್ಚೀರಿ, ಆ ಗಿಡಗಳು ಪಶ್ಚಿಮ ದಿಕ್ಕು ಒಳ್ಳೇದಲ್ಲ ಅಂತ ಆ ಕಡೆ ಕಾಯಿ ಬಿಡೋದು ನಿಲ್ಲಿಸ್ಯಾವೇನು? ದಕ್ಷಿಣ ದಿಕ್ಕಿಗೆ ಒಟ್ಟಾ ಕನ್ಯಾ ನೋಡಾಕ ಹೋಗಬಾರದು ಅಂತಿರ್ತಾರ ಕೆಲವು ಮಂದಿ. ಕನ್ಯಾ ಕೊಡೊ ದಕ್ಷಿಣೆ ಬೇಕು, ಆದರೆ ದಕ್ಷಿಣ ದಿಕ್ಕಿನ ಕನ್ಯಾ ಬೇಡ ಅಂತಾರ. ಹಂಗಾದರೆ ನಮ್ಮ ಸಮಸ್ಯೆ ಏನು? ಒಬ್ಬವ ಕಷ್ಟ ಬಂತು ಅಂತಾ ಮನೆಯ ಬಾಗಿಲು, ಕಿಟಕಿ, ದೇವರ ಮನೆ ಎಲ್ಲವನ್ನೂ ಬದಲು ಮಾಡಿದ. ಆಗ ಆ ಮನೆ ಕೇಳಿತು, ‘ಮನಿ ಬದಲು ಮಾಡಿದಿ, ಆದರೆ ನೀನೇ ಬದಲಾಗಲಿಲ್ಲೋ’ ಅಂತು. ಬದಲಾಗಬೇಕಾಗಿದ್ದು ಮನೆಯಲ್ಲ, ಮನೆಯೊಳಗಿನ ಮನಸುಗಳು. ವಾಸ್ತು ಪ್ರಕಾರ,ಮನೆ ಕಟ್ಟೋದಲ್ಲ, ಮನೆಯೊಳಗಿರುವವರ ಮನಗಳನ್ನು ವಾಸ್ತು ಪ್ರಕಾರ ಕಟ್ಟಬೇಕು. ಇದು ಜೀವನದ ಸೂತ್ರ.

ADVERTISEMENT

ದೇವರು ಕಾಡತಾನ, ಮನೆ ಕಾಡತೈತಿ, ನಮಗೆ ಒಟ್ಟ ಶನಿ ಕಾಡತಾನ ನೋಡ್ರಿ ಅಂತಾರ. ಶನಿ ದೇವರು ಇರೋನು ಒಬ್ಬನೆ. ಜನ ಇರೋದು ನೂರಾರು ಕೋಟಿ. ಭೂಮಂಡಲದಲ್ಲಿ ಏಷ್ಯಾಖಂಡಕ್ಕೆ ಬಂದು, ಅಲ್ಲಿಂದ ಭಾರತಕ್ಕೆ ಬಂದು, ನಂತರ ಕರ್ನಾಟಕಕಕ್ಕೆ ಬಂದು, ನಿಮ್ಮ ಜಿಲ್ಲೆ, ತಾಲ್ಲೂಕು ದಾಟಿ ನಿಮ್ಮೂರಿಗೆ ಬಂದು ನಿಮ್ಮ ಮನೆ ಹುಡುಕಿ ನಿಮ್ಮನ್ನು ಕಾಡುವುದಕ್ಕೆ ಶನಿಗೆ ಬೇರೆ ಕೆಲಸ ಇಲ್ಲೇನು? ಶನಿ ದೇವರು ಅಂದರ ಉತ್ಸಾಹಿ ಅವ. ಇನ್ನೊಬ್ಬರ ಜೀವ ಉಳಿಸೋದಕ್ಕ ಸಂಜೀವಿನಿ ಗುಡ್ಡನ ಹೊತ್ಕೊಂಡು ಬಂದವ ಅವ. ನಿಮ್ಮನ್ನ ಯಾಕ ಕಾಡ್ತಾನ?

ಒಬ್ಬ ಜ್ಯೋತಿಷಿ ಹತ್ತಿರ ಹೋಗಿ ತನಗೆ ಶನಿ ಕಾಡ್ತಾನ ಅಂದ. ಜ್ಯೋತಿಷಿ ‘ನೂರು ರೂಪಾಯಿ ಕೊಡು ನೋಡಿ ಹೇಳ್ತೀನಿ’ ಅಂದ. ಇವ ‘ನೂರು ರೂಪಾಯಿ ಇಲ್ಲ’ ಅಂದ. ‘ಆತು 50 ರೂಪಾಯಿ ಕೊಡು’ ಅಂದ. ‘ಐವತ್ತೂ ಇಲ್ಲ’ ಅಂದ ಅವ. ಕೊನೆಗೆ 25, 10 ರೂಪಾಯಿ ಕೇಳಿ ‘ಒಂದು ರೂಪಾಯಿಯಾದರೂ ಕೊಡಪಾ’ ಅಂದ ಜ್ಯೋತಿಷಿ. ‘ಅದೂ ಇಲ್ಲ’ ಅಂದ ಅವ. ‘ಹೋಗ್ ಹೋಗ್ ನಿನ್ನ ಬಳಿಗೆ ಯಾವ ಶನಿಯೂ ಬರಲ್ಲ, ಅವ ಬಂದು ಏನ್ ಮಾಡ್ತಾನ, ನೀನೇ ಅವನಿಗೆ ಕಾಡಬೇಕು ಅಷ್ಟೆ’ ಎಂದು ಕಳಿಸಿದ.

ದೇವರು ಯಾವಾಗಲೂ ಕಾಡುವುದಿಲ್ಲ. ಕಾಪಾಡ್ತಾನ ಅಷ್ಟೆ. ಕಾಡುತ್ತಾನೆ ಎನ್ನುವುದು ಮನಸ್ಸಿನ ಬಲೆ ಅಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.