ADVERTISEMENT

ನುಡಿ ಬೆಳಗು–42: ನಾವು ಕೆಲಸ ಪ್ರೀತಿಸಬೇಕು!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 10 ಅಕ್ಟೋಬರ್ 2024, 23:30 IST
Last Updated 10 ಅಕ್ಟೋಬರ್ 2024, 23:30 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಜೀವನ ಅಂದ ಮೇಲೆ ಎಲ್ಲವೂ ನಾವು ಅಂದುಕೊಂಡಂತೆ ನಡೆಯೋದಿಲ್ಲ. ಸಮಾಧಾನ ಇರಬೇಕು. ಸಮುದ್ರದ ದಂಡೆಯ ಮೇಲೆ ಮನೆ ಮಾಡಿದರೆ ಅಲೆಗಳು ಬಂದು ಹೊಡೀತಿರ್ತಾವ. ಸಂತಿಯೊಳಗೆ ಮನಿ ಕಟ್ಟಿದರೆ ಶಬ್ದಗಳು ಬಂದು ಹೊಡೀತಾವ. ಕಾಡಿನಲ್ಲಿ ಕಾಡು ಪ್ರಾಣಿಗಳದಾವ, ನಾಡಿನಲ್ಲಿ ಕಾಡುವ ಪ್ರಾಣಿಗಳದಾವ. ಇದರ ಮಧ್ಯದೊಳಗೇ ಸಮಾಧಾನದಿಂದ ಬದುಕು ಕಟ್ಟಬೇಕು. ಲೋಕದಲ್ಲಿ ಸ್ತುತಿ ನಿಂದನೆಗಳು ಬಂದಲ್ಲಿ ಸಮಾಧಾನಿಯಾಗಿರಬೇಕು. ತಡಕೊಳ್ಳೋನು ಯಶಸ್ವಿಯಾಗ್ತಾನ. ತಾಳ್ಮೆಯಿಂದ ಇರುವವನು ತಪಸ್ವಿ. ತಪ್ಪಳ ತಿನ್ನೋನು ಮಾತ್ರ ತಪಸ್ವಿ ಅಲ್ಲ. ನಾವು ಯಾವಾಗಲೂ ಫಲದ ಬಗ್ಗೆ ಆಲೋಚಿಸುತ್ತೇವೆ. ಆದರೆ, ಒಂದು ತಿಳಕೋಬೇಕು; ಕೆಲಸ ಮಾಡೋದು ಈಗ, ಫಲ ಬರೋದು ಭವಿಷ್ಯದಲ್ಲಿ. ಅವೆರಡರ ನಡುವೆ ಸಾಮರಸ್ಯವೇ ಇಲ್ಲ. ಮೊದಲು ಕೆಲಸ ಮಾಡಬೇಕು ಮತ್ತು ಫಲ ನಮ್ಮ ಕೈಯಾಗ ಇಲ್ಲ ಎನ್ನೋದನ್ನು ತಿಳಕೋಬೇಕು.

ಈಗಿನ ಹುಡುಗರನ್ನು ನೋಡಿ; ಜಿಮ್‌ಗೆ ಹೋಗಲು ಶುರುಮಾಡಿ ಇನ್ನೂ 4–5 ದಿನಾ ಆಗಿರದಿಲ್ಲ, ಆಗಲೇ ಕನ್ನಡಿ ಮುಂದೆ ನಿಂತು ಸಿಕ್ಸ್ ಪ್ಯಾಕ್ ಬಂದೈತಾ ಅಂತಾ ನೋಡ್ತಾರ. ಕೈಯಾಗ ಸಿಗರೇಟ್ ಪ್ಯಾಕ್ ಹಿಡಕೊಂಡರ ಮೈಯಾಗ ಸಿಕ್ಸ್ ಪ್ಯಾಕ್ ಬರೋದಿಲ್ಲ ಅನ್ನೋದನ್ನ ತಿಳಕೊಬೇಕು. ವಿಶ್ವ ಪರಿಸರದ ದಿನ ಗಿಡ ನೆಡುತ್ತೀವಿ. ಫೋಟೊ ತೆಕ್ಕೋತೀವಿ. ಮಾರನೇ ದಿನ ನೋಡಾಕ ಹೋಗ್ತೀವಿ; ಏನನ್ನ? ಗಿಡವನ್ನಲ್ಲ, ಪೇಪರನ್ಯಾಗ ಫೋಟೊ ಬಂದೈತಾ ಇಲ್ಲಾ ಅಂತ. ನಾವು ಕೆಲಸ ಪ್ರೀತಿಸಲ್ಲ, ಫಲ ಪ್ರೀತಿಸ್ತೀವಿ. ಅದಕ್ಕ ನಮಗ ಕಷ್ಟಗಳು ಬಂದಾವ.

ADVERTISEMENT

ಒಬ್ಬ ಶ್ರೀಮಂತ ತನ್ನ ಮಗನಿಗೆ ಮದುವಿ ಇಟಕೊಂಡಿದ್ದ. ಅದಕ್ಕೆ ಸಂಬಂಧಿಕರಿಗೆಲ್ಲಾ ಸೀರಿ ತಂದಿದ್ದ. ಆದರೆ ಮನೆಯಲ್ಲಿ 30–40 ವರ್ಷದಿಂದ ಕೆಲಸ ಮಾಡೋ ಮುದುಕಿಗೆ ತಂದಿರಲಿಲ್ಲ. ಮಾರನೇ ದಿನ ಮನೆ ಯಜಮಾನಿಗೆ ಇದು ಗೊತ್ತಾಗಿ ಉರಾಗಿನ ಅಂಗಡಿಗೆ ಹೋಗಿ ‘ನಮ್ಮನೆ ಮುಸುರೆ ತಿಕ್ಕೋ ಮುದುಕಿಗೆ ಒಂದು ಸೀರೆ ಕೊಡಬೇಕು. ಯಾವುದಾದರೂ ಸುಮಾರಿನ ಸೀರೆ ಕೊಡು’ ಅಂದಳು. ಒಂದು ತಾಸಿನ ನಂತರ ಅದೇ ಅಂಗಡಿಗೆ ಆ ಕೆಲಸದಾಕಿ ಹೋಗಿ ‘ನಮ್ಮ ಮಾಲಕನ ಮನೇಲಿ ಮದುವೆ ಐತಿ. ನಾನೂ ಉಡುಗೊರೆ ಕೊಡಬೇಕು. ಒಂದು ಚಲೋ ಕಿಮ್ಮತ್ತಿನ ಸೀರೆ ಕೊಡು’ ಎಂದಳು. ಈಗ ನೀವೇ ಯೋಚನೆ ಮಾಡಿ, ಬಡತನ, ಸಿರಿತನ ಹೊರಗದಾವೋ ಅಥವಾ ಹೃದಯದೊಳಗೆ ಅದಾವೋ ಅಂತ.

ಮದುವೆ ಸಂದರ್ಭದೊಳಗೆ ಮದುಮಗನನ್ನು ಕುದುರಿ ಮ್ಯಾಲ ಮೆರವಣಿಗೆ ಮಾಡಿಸ್ತಾರ. ಆ ಮದುಮಗನಿಗೆ ಯಾವಾಗಲೂ ಹೀಂಗೇ ಇರಬೇಕು ಅನಸ್ತಿರತದ. ಆಗ ಕುದುರಿ ಅನತಿರತೈತಿ, ‘ನನ್ನ ಮ್ಯಾಲೆ ಕುಂತವರ್ಯಾರೂ ಕಾಯಂ ಕುಂತಿಲ್ಲ, ಏರತಾರ ಮತ್ತ ಇಳೀತಾರ’ ಅಂತ. ಜೀವನದಲ್ಲಿ ಬೆಂದರೆ ಬೇಂದ್ರೆ ಆಗ್ತಾರ ಅಂತ ಒಂದು ಮಾತೈತಿ. ದೇವರು ನಮಗೆ ಮುಂದಕ್ಕೇ ಎರಡು ಕಣ್ಣಿಟ್ಟಾನ. ಯಾಕೆ? ಹಿಂದೊಂದು ಕಣ್ಣು, ಮುಂದೊಂದು ಕಣ್ಣು ಯಾಕಿಟ್ಟಿಲ್ಲ? ಯಾಕೆ ಅಂದ್ರ ಹಿಂದ ನೋಡಬ್ಯಾಡ, ಮುಂದ ಮುಂದ ನೋಡಕೋತ ಹೋಗು ಅಂತಾ ಮುಂದೇ ಕಣ್ಣಿಟ್ಟಾನ. ಮುಂದ ಮುಂದ ನೋಡಕೋತಾ ಕೆಲಸ ಮಾಡಕೋತ ಹೋದರ ಜೀವನ ಸುಗಮ ಆಗತೈತಿ. ಅದಕ್ಕ ಸಮಾಧಾನದಿಂದ ಕೆಲಸ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.