ADVERTISEMENT

ನುಡಿ ಬೆಳಗು: ಗಾಸಿಪ್‌ ಎಂಬ ಕಾಯಿಲೆ

ದೀಪಾ ಹಿರೇಗುತ್ತಿ
Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
   

ಒಂದೂರಲ್ಲಿ ಒಬ್ಬ ವ್ಯಕ್ತಿಯಿದ್ದ. ಬೇರೆಯವರನ್ನು ಟೀಕಿಸುತ್ತ ದೂಷಿಸುತ್ತ ಇರುವುದೇ ಅವನ ಸ್ವಭಾವ. ಒಮ್ಮೆ ಊರಲ್ಲಿ ಯಾವುದೋ ಕಳ್ಳತನವಾದಾಗ ಪಕ್ಕದ ಮನೆಯ ತರುಣನೇ ಕಳ್ಳ ಎಂದು ಸುದ್ದಿ ಹಬ್ಬಿಸಿದ. ತರುಣನನ್ನು ಪೋಲೀಸರು ಬಂಧಿಸಿದರು. ಕೆಲ ದಿನಗಳ ನಂತರ ನಿಜವಾದ ಕಳ್ಳ ಸಿಕ್ಕಿದ ಮತ್ತು ತರುಣ ನಿರಪರಾಧಿ ಎಂದು ಬಿಡುಗಡೆ ಮಾಡಲ್ಪಟ್ಟ.

ಅವಮಾನಿತನಾದ ಯುವಕ ಈ ವ್ಯಕ್ತಿಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ. ನ್ಯಾಯಾಲಯದಲ್ಲಿ ಆ ವ್ಯಕ್ತಿ, ‘ನಾನು ಸುಮ್ಮನೆ ಹೇಳಿದ್ದು, ಅದರಿಂದ ಯಾರಿಗೇನೂ ತೊಂದರೆಯಾಗುವುದಿಲ್ಲವಲ್ಲ’ ಎಂದ. ವಿಚಾರಣೆ ಮುಗಿಯಿತು. ಎದ್ದು ಹೋಗುವ ಮುನ್ನ ನ್ಯಾಯಾಧೀಶರು ಆತನಿಗೆ ಹೇಳಿದರು, ‘ನೀನು ಆ ಯುವಕನ ಬಗ್ಗೆ ಹೇಳಿದ ಮಾತುಗಳನ್ನೆಲ್ಲ ಒಂದು ಕಾಗದದ ಮೇಲೆ ಬರಿ, ಕಾಗದವನ್ನು ಚೂರು ಚೂರು ಮಾಡಿ ಮನೆಗೆ ಹೋಗುವಾಗ ರಸ್ತೆಯುದ್ದಕ್ಕೂ ಚೆಲ್ಲುತ್ತ ಹೋಗು, ನಾಳೆ ತೀರ್ಪು ಕೇಳಲು ಬಾ’.

ಮಾರನೇ ದಿನ ತೀರ್ಪು ಕೇಳಲು ಬಂದಾಗ ನ್ಯಾಯಾಧೀಶರು, ‘ನಿನ್ನೆ ನೀನು ಚೆಲ್ಲಿದ ಕಾಗದದ ಚೂರುಗಳನ್ನು ವಾಪಾಸು ತೆಗೆದುಕೊಂಡು ಬಾ’ ಎಂದರು. ಆಗ ಆ ವ್ಯಕ್ತಿ, ‘ಅವು ಈಗ ಎಲ್ಲಿವೆ, ಗಾಳಿಗೆ ಹಾರಿ ಹೋಗಿವೆ. ಅವನ್ನು ಹುಡುಕಿ ತರುವುದು ಸಾಧ್ಯವಿಲ್ಲದ ಮಾತು’ ಎಂದ. ಆಗ ನ್ಯಾಯಾಧೀಶರೆಂದರು, ‘ಅದೇ ರೀತಿ ಸುಮ್ಮನೆ ಒಬ್ಬ ವ್ಯಕ್ತಿಯ ಬಗ್ಗೆ ಆಡಿದ ಮಾತುಗಳು ಆತನ ಘನತೆಗೆ ಹಾನಿ ಮಾಡಬಲ್ಲವು, ಕೆಲವೊಮ್ಮೆ ತಪ್ಪನ್ನು ಸರಿಪಡಿಸಲು ಸಾಧ್ಯವೇ ಇಲ್ಲವಾಗಬಹುದು’. ಆ ವ್ಯಕ್ತಿಗೆ ತಪ್ಪಿನ ಅರಿವಾಗಿ ಯುವಕನ ಹತ್ತಿರ ಕ್ಷಮೆ ಯಾಚಿಸಿದ.

ADVERTISEMENT

ನಾಲ್ಕು ಮಂದಿಯ ಗುಂಪಿನಲ್ಲಿ ನೀವು ಕುಳಿತಿದ್ದೀರಿ ಎಂದುಕೊಳ್ಳಿ. ನಿಮ್ಮ ಬಗ್ಗೆ ಏನಾದರೂ ಚರ್ಚೆ ಆಗಬೇಕೇ? ಹಾಗಾದರೆ ಅಲ್ಲಿಂದ ಎದ್ದು ಹೋಗಿ ಎಂಬ ನಗೆಹನಿ ವಾಸ್ತವವೇ. ಮತ್ತೊಬ್ಬರ ಬಗ್ಗೆ ಹಿಂದಿನಿಂದ ಮಾತಾಡುವ ಗಾಸಿಪ್‌ ಎಂಬುದು ಅತ್ಯಂತ ಸಾಮಾನ್ಯ ಸಂಗತಿ. ಸತ್ಯ ಗೊತ್ತಿಲ್ಲದೇ ಯಾರ ಬಗ್ಗೆಯಾದರೂ ಮಾತಾಡುವುದು ತಪ್ಪು. ಈ ಅವಿವೇಕಿತನದ ಕೆಲಸದಿಂದ ಒಬ್ಬರ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದು. ತಮ್ಮ ತಪ್ಪೇ ಇಲ್ಲದೇ ಅವರು ಶಿಕ್ಷೆ ಅನುಭವಿಸುವಂತಾಗಬಹುದು. ಅದೂ ಅಲ್ಲದೇ, ನಮ್ಮ ಕೈಲಿರುವ ಕೆಂಡ ಬೇರೆಯವರನ್ನು ಸುಡುವ ಮುಂಚೆ ನಮ್ಮನ್ನೇ ಸುಡುವಂತೆ ಇತರರ ಬಗೆಗಿನ ಕೆಟ್ಟ ಮಾತುಗಳು ನಮ್ಮ ವ್ಯಕ್ತಿತ್ವದ ಕನ್ನಡಿಯಾಗುತ್ತವೆ. ಸದಾ ಬೇರೆಯವರ ಬಗ್ಗೆ ಕೆಟ್ಟ ಮಾತುಗಳನ್ನಾಡುವ ವ್ಯಕ್ತಿಯನ್ನು ಯಾರೂ ಗೌರವಿಸುವುದಿಲ್ಲ. ಗಾಸಿಪ್‌ ಎಂಬುದೊಂದು ರೋಗ, ಅದರಿಂದ ದೂರವಿರುವುದು ನಮಗೂ ಸಮಾಜಕ್ಕೂ ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.