ADVERTISEMENT

ನುಡಿ ಬೆಳಗು: ಸ್ತ್ರೀ ಸಮಾನತೆ ಎಂದರೆ...

ಎಚ್.ಎಸ್.ನವೀನಕುಮಾರ್
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಈಕೆಯ ಹೆಸರು ಲಿಮ್ ಲೀ ಬೆಂಗ್. ಹೊಳೆವ ಕಂಗಳ ಹಾಗೂ ಸದಾ ಚಟುವಟಿಕೆಯ ಚಿಲುಮೆಯಂತಿರುತ್ತಿದ್ದ ಈಕೆ ನಮ್ಮ ಸಿಂಗಪುರ ಪ್ರವಾಸದ ಟೂರಿಸ್ಟ್ ಗೈಡ್. ತನ್ನ ದೇಶಕ್ಕೆ 1965ರಲ್ಲಿ ಸ್ವಾತಂತ್ರ್ಯ ಸಿಕ್ಕಾಗಿನಿಂದ, ತನ್ನ ದೇಶದ ಅನನ್ಯ ಹಸಿರು ಕಾಳಜಿ, ಇದಕ್ಕೆ ಮೂಲ ಕಾರಣಕರ್ತರಾದ ದೇಶದ ಮೊದಲ ಪ್ರಧಾನಿ ಲಿನ್ ಕ್ಯೂನ್ ಅವರ ಕಾರ್ಯಕ್ಷಮತೆ ಮುಂತಾದುದರ ಬಗ್ಗೆ ತುಂಬು ಅಭಿಮಾನದಿಂದ ‘ಮೈ ಕಂಟ್ರಿ’, ‘ಮೈ ಪ್ರೈಮ್ ಮಿನಿಸ್ಟರ್’ ಎಂದು ಹೇಳಿಕೊಳ್ಳುತ್ತಿದ್ದ, ಈಕೆಯ ವಯಸ್ಸೆಷ್ಟೆಂದು ಕೇಳಿದಾಗ ನನಗೆ ನಿಜಕ್ಕೂ ಅಚ್ಚರಿ ಆಯ್ತು. ನಾವು ನಿವೃತ್ತಿಯ ವಯಸ್ಸು ಎಂದು ಪರಿಗಣಿಸುವ 60ರ ಹರೆಯವನ್ನು ಈಕೆ ದಾಟಿದ್ದಾಳೆ ಎನ್ನುವುದು ನಿಜಕ್ಕೂ ನಂಬಲಸಾಧ್ಯವಾಗಿತ್ತು.

ನಮ್ಮ ಪ್ರವಾಸೀ ಗುಂಪಿನ ಜೊತೆಗಿದ್ದು, ಬೇರೆ ಬೇರೆ ವಿಶೇಷ ಸ್ಥಳಗಳಿಗೆ ನಮ್ಮನ್ನು ಕರೆದೊಯ್ದು, ಅಲ್ಲಿನ ವೈಶಿಷ್ಟ್ಯಗಳ ಕುರಿತು ವಿವರವಾದ ಮಾಹಿತಿಗಳನ್ನು ನಮಗೆ ನೀಡುತ್ತಿದ್ದ ಈಕೆ, ಸಿಂಗಪುರದ ಮುಖ್ಯ ಉದ್ಯೋಗಗಳಲ್ಲಿ ಒಂದಾದ 6,000ಕ್ಕೂ ಹೆಚ್ಚಿರುವ ಟೂರಿಸ್ಟ್ ಗೈಡ್ ಗಳಲ್ಲಿ ಒಬ್ಬಳು. ವಿಶೇಷವೆಂದರೆ ಈ ಟೂರಿಸ್ಟ್ ಗೈಡ್‌ಗಳಲ್ಲಿ ಶೇಕಡ 50ಕ್ಕೂ ಹೆಚ್ಚು ಮಹಿಳೆಯರೇ. 

ADVERTISEMENT

‘ಮಹಿಳೆಯರಿಗೆ ಈ ಕೆಲಸ ಕಷ್ಟಕರವಲ್ಲವೇ’ ಎಂದು ನಾನು ನಮ್ಮ ದೇಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರಶ್ನಿಸಿದಾಗ ಆಕೆ ಕೊಟ್ಟ ಉತ್ತರ: ‘ನಮ್ಮ ದೇಶದಲ್ಲಿ ಹೆಣ್ಣು–ಗಂಡು, ಜಾತಿ, ಮತ, ಧರ್ಮವೆಂಬ ಯಾವುದೇ ಭೇದಭಾವಗಳಿಲ್ಲ. ಇಲ್ಲಿನ ಏಕೈಕ ಮಾನದಂಡ ಪ್ರತಿಭೆ’. ಸಮಯಕ್ಕೆ ಸರಿಯಾಗಿ ಬೇರೆ ಬೇರೆ ಬಸ್‌ಗಳನ್ನು ಬದಲಾಯಿಸುತ್ತಾ, ನಮಗೆ ಬೇಕಾದ ಊಟ ತಿಂಡಿ ಹಾಗೂ ಪ್ರೇಕ್ಷಣೀಯ ಸ್ಥಳಗಳ ಟಿಕೆಟ್ ವ್ಯವಸ್ಥೆ ಮಾಡಿಸುತ್ತಾ, ತಂಡವನ್ನು ಈಕೆ ಮುನ್ನಡೆಸುತ್ತಿದ್ದ ರೀತಿ ನನಗೆ ನಿಜಕ್ಕೂ ವಿಶೇಷವೆನಿಸಿತು.

ಯಾನ್ ಹೇಳಿದಂತೆ, ‘ಈ ದೇಶದಲ್ಲಿ ಮಧ್ಯರಾತ್ರಿಯಲ್ಲೂ ಒಂಟಿ ಹೆಣ್ಣು ಎಲ್ಲಿ ಬೇಕಾದರೂ ಸಂಚರಿಸಬಹುದು. ನಗರದ ರಸ್ತೆಗಳಲ್ಲಿ ಎಲ್ಲೂ ಪೊಲೀಸರಿಲ್ಲ. ಆದರೆ ಕಾಣದ ಕಣ್ಣುಗಳು ಎಲ್ಲವನ್ನೂ ವೀಕ್ಷಿಸುತ್ತಿರುತ್ತವೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಇಲ್ಲಿನ ಕಾನೂನಿನಲ್ಲಿ ಅತ್ಯಂತ ಕಠಿಣ ಶಿಕ್ಷೆ ಇದೆ. ಹಾಗಾಗಿ ಎಲ್ಲಾ ಸಮಯ ಸಂದರ್ಭಗಳಲ್ಲೂ ಮಹಿಳೆ ಅತ್ಯಂತ ಸುರಕ್ಷಿತ’.

ಸ್ತ್ರೀಯರಿಗೆ ವಿಶೇಷ ಗೌರವ ನೀಡುವುದೇ ನಮ್ಮ ಸಂಸ್ಕೃತಿ ಎಂದು ಬಡಾಯಿ ಕೊಚ್ಚಿಕೊಳ್ಳುವ ನಮ್ಮ ದೇಶದಲ್ಲಿ ಏಕೆ ಇದು ಸಾಧ್ಯವಾಗಿಲ್ಲ? ನಮ್ಮ ಸಂಸ್ಕೃತಿಯೇ ಶ್ರೇಷ್ಠ ಎಂದು ಸದಾ ಹೇಳಿಕೊಂಡು ಓಡಾಡುವ ನಮ್ಮ ಸಮಾಜದ ಕಿವಿಗೇಕೆ ದಿನ ಬೆಳಗಾದರೆ ಕೇಳಿ ಬರುವ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಕೂಗು ಬೀಳುತ್ತಿಲ್ಲ? ಯೋಚಿಸಬೇಕಾದ ವಿಚಾರವಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.