ADVERTISEMENT

ನುಡಿ ಬೆಳಗು: ಸಾಯುವುದು ಹೇಗೆ? ಸಾಯಿಸುವುದು ಹೇಗೆ?

ಪ್ರೊ. ಎಂ. ಕೃಷ್ಣೇಗೌಡ
Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಅರ್ಜುನದೊಂದು ಶಪಥ ಇತ್ತು- ‘ಯಾರಾದರೂ ನನ್ನನ್ನು ನಿಂದಿಸಿದರೆ ಸಹಿಸಿಕೊಂಡೇನು, ಆದರೆ ನನ್ನ ದಿವ್ಯವಾದ ಧನಸ್ಸು, ಗಾಂಡೀವವನ್ನು ನಿಂದಿಸಿದರೆ ಆ ನಿಂದಿಸಿದವರನ್ನು ನಾನು ಕೊಲ್ಲದೆ ಬಿಡುವುದಿಲ್ಲ’ ಅನ್ನುವುದು ಆ ಶಪಥ.

ಒಮ್ಮೆ ಪ್ರಸಂಗವಶಾತ್ ಧರ್ಮರಾಯ ಅರ್ಜುನನ ಗಾಂಡೀವವನ್ನು ನಿಂದಿಸಿಬಿಟ್ಟ. ಥಟ್ಟನೆ ಸಿಟ್ಟಿಗೆದ್ದ ಅರ್ಜುನ. ಶಪಥ ನೆನಪಾಯಿತು. ಆದರೆ ಪೂಜ್ಯನಾದ ಅಣ್ಣನನ್ನು ಕೊಲ್ಲುವುದು ಹೇಗೆ? ಕೊಲ್ಲದಿದ್ದರೆ ಶಪಥದ ಗತಿಯೇನು? ಸಂಕಟಕ್ಕೆ ಬಿದ್ದ ಅರ್ಜುನ. ಆಗ ಕೃಷ್ಣ ಬಂದ. ಕೃಷ್ಣನ ಬಳಿ ಅರ್ಜುನ ತನ್ನ ಸಂಕಟವನ್ನು ಹೇಳಿಕೊಂಡ. ಆಗ ಕೃಷ್ಣ ಹೇಳಿದ- ‘ಅರ್ಜುನಾ, ಧರ್ಮಜನನ್ನು ಕೊಲ್ಲಬೇಕೆಂದರೆ ಅವನನ್ನು ಕತ್ತರಿಸಿ ಕೊಲ್ಲಬೇಕೆಂದಿಲ್ಲ. ಅವನನ್ನು ಚೆನ್ನಾಗಿ ಬಯ್ದುಬಿಡು. ಯಾಕೆಂದರೆ ದೊಡ್ಡವರನ್ನು ಬಯ್ದರೆ ಅವರನ್ನು ಕೊಂದ ಹಾಗೆ’.

ADVERTISEMENT

ಅರ್ಜುನ ಹಾಗೇ ಮಾಡಿದ. ಅಣ್ಣನನ್ನು ವಾಚಾಮಗೋಚರ ಬಯ್ದ. ‘ನಿನ್ನಿಂದಾಗಿ, ನಿನ್ನ ದ್ಯೂತ ವ್ಯಸನದಿಂದಾಗಿ ನಾವೆಲ್ಲಾ ಎಷ್ಟೊಂದು ಕಷ್ಟ ಎದುರಿಸಬೇಕಾಯಿತು, ಅವಮಾನ ಅನುಭವಿಸಬೇಕಾಯಿತು, ಮಡದಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಕಾರಣನಾದ ಪಾಪಿಯೂ ನೀನೇ. ಗಂಡಸರಾದ ನಾವು ಷಂಡರಾಗಿ ಬದುಕಿದ್ದೂ ಅವಿವೇಕಿಯಾದ ನಿನ್ನಿಂದಲೇ...’  ಹೀಗೆ ಪರಿಪರಿಯಾಗಿ ಧರ್ಮಜನನ್ನು ಬಯ್ದ ಅರ್ಜುನ. ಅಂತೂ ಅದರಿಂದ ಕೃಷ್ಣ ಹೇಳಿದಂತೆ ಧರ್ಮರಾಯ ಸತ್ತ ಹಾಗಾಯಿತು.
ಈಗ ಇನ್ನೊಂದು ಸಮಸ್ಯೆ. ಪಾಂಡವರಲ್ಲಿ ಒಬ್ಬ ಸತ್ತರೂ ಉಳಿದವರೆಲ್ಲರೂ ಸತ್ತುಹೋಗಬೇಕೆಂಬುದು ಇನ್ನೊಂದು ಶಪಥ. ಅಣ್ಣ ‘ಸತ್ತ ಮೇಲೆ’ ಈಗ ಉಳಿದ ಮೂವರಿಗಿಂತ ಮೊದಲು ತಾನು ಸಾಯಬೇಕಲ್ಲ, ಸಾಯುವುದು ಹೇಗೆ? ಮೂರು ಲೋಕದ ಗಂಡ ಆತ್ಮಹತ್ಯೆ ಮಾಡಿಕೊಳ್ಳುವುದೆ? ಹೇಗೆ ಮಾಡುವುದು? ತೋಚಲಿಲ್ಲ. ‘ಕೃಷ್ಣಾ’ ಎಂದ.

ಮತ್ತೆ ಬಂದ ಕೃಷ್ಣ. ‘ಅರ್ಜುನಾ, ನಿನ್ನ ಸಂಕಟ ತಿಳಿಯಿತು ನನಗೆ. ನೀನೀಗ ಸಾಯಬೇಕೆಂದು ಬಯಸಿದ್ದಿ. ಹಾಗಾದರೆ ನೀನು ಹೀಗೆ ಮಾಡು. ನಿನ್ನನ್ನು ನೀನೇ ಹೊಗಳಿಕೋ. ಬೇರೆಯವರಿಗೆ ಬೇಸರವಾಗುವಷ್ಟು ನೀನೇ ನಿನ್ನ ಗುಣಗಾನ ಮಾಡಿಕೋ. ಆಗ ನೀನು ಸತ್ತಂತೆ...’

ಅರ್ಜುನ ತನ್ನ ಬಿರುದು ಪರಾಕ್ರಮಗಳನ್ನೆಲ್ಲಾ ತಾನೇ ಹೊಗಳಿಕೊಂಡ- ತನಗೇ ನಾಚಿಕೆಯಾಗುವಷ್ಟು. ಎದುರಿದ್ದವರಿಗೆ ಹೇಸಿಗೆಯಾಗುವಷ್ಟು.
ಹಾಗೆ ಅರ್ಜುನನೂ ‘ಸತ್ತ’.

ಕೃಷ್ಣನ ಮಾತು ಎಷ್ಟು ಧ್ವನಿಪೂರ್ಣ... ನಾವೂ ಆಗಾಗ ಹೀಗೆ ಯಾರುಯಾರನ್ನೋ ಸಾಯಿಸುತ್ತೇವೆ ಮತ್ತು ನಾವೂ ಸಾಯುತ್ತಿರುತ್ತೇವೆ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.