ಒಂದು ದಿನ ನನ್ನ ಹೆಂಡತಿಯ ಕಳೆದುಹೋಗಿದ್ದ ಬಾಲ್ಯದ ಕ್ಲಾಸ್‌ಮೇಟ್ ಇಲೆನಾ, ಅದು ಹೇಗೋ ನಮ್ಮನೆ ಪತ್ತೆ ಹಚ್ಚಿ ಬಂದೇ ಬಿಟ್ಟರು. ಮಾತಿನಲ್ಲಿ, ಚೈತನ್ಯದಲ್ಲಿ, ಧೀಮಂತಿಕೆಯಲ್ಲಿ ಈ ಇಲೆನಾ ದಿಟ್ಟ ಹೆಣ್ಣುಮಗಳು. ತುಂಬಾ ವರ್ಷದ ನಂತರ ಸಿಕ್ಕ ಗೆಳತಿಯರಿಬ್ಬರೂ ಮಾತಿಗೆ ಕೂತರು. ನೆನಪುಗಳು ತಮ್ಮ ಪ್ರೈಮರಿ ಶಾಲೆಯ ದಿನಗಳ ಕಡೆಗೆ ಜಾರಿದವು.
ಇಲೆನಾಗೆ ಅದ್ಭುತ ನೆನಪಿನ ಶಕ್ತಿ ಇತ್ತು. ಬಾಲ್ಯದ ಅನೇಕ ಮಿತ್ರರ ಹೆಸರುಗಳನ್ನೂ ಹಾಜರಾತಿ ಹಾಕಿದಂತೆ ಹೇಳಿದರು. ನಲವತ್ತು ವರ್ಷಗಳ ನಂತರವೂ ಹೀಗೆ ತಮ್ಮ ಬಾಲ್ಯದ ಗೆಣೆಕಾರರನ್ನು ನೆನಪಿಟ್ಟುಕೊಳ್ಳುವುದು ನಿಜಕ್ಕೂ ಅಸಾಧ್ಯದ ಮಾತು. ಎಳವೆಯಲ್ಲಿ ಒಟ್ಟಿಗೆ ಓದಿದ ಸಹಪಾಟಿಗಳು ಕಾಲಚಕ್ರಕ್ಕೆ ಸಿಕ್ಕು ಎಲ್ಲೆಲ್ಲಿಯೋ ಹೊರಟು ಹೋಗಿರುತ್ತಾರೆ. ಇವರನ್ನೆಲ್ಲಾ ಒಟ್ಟುಗೂಡಿಸುವುದು ತೀರಾ ಕಷ್ಟದ ಕೆಲಸ. ಎಲ್ಲರನ್ನೂ ಒಟ್ಟಿಗೆ ಸೇರಿಸಿದರೆ ಎಷ್ಟು ಚೆನ್ನಾಗಿರುತ್ತೆ ಅಲ್ಲವೇನೇ ಎಂದು ಪರಸ್ಪರ ಚರ್ಚಿಸಿಕೊಂಡರು. ನನಗೆ ಯಾಕೋ ಇದು ಖಂಡಿತ ಸಾಧ್ಯವಿಲ್ಲದ ಮಾತು ಎಂದೆನಿಸಿತು. ಆಚ್ಚರಿ ಎಂದರೆ ಪ್ರತಿ ವರ್ಷವೂ ಒಂದಿಬ್ಬರನ್ನು ಹೆರಕುತ್ತಾ,
ಅವರ ಮೂಲಕ ಮತ್ತೊಬ್ಬರ ವಿಳಾಸ ಪಡೆಯುತ್ತಾ, ಅಂತೂ ಇಂತೂ ಹತ್ತು ವರ್ಷದಲ್ಲಿ ಎಲ್ಲರನ್ನೂ ಗುಡ್ಡೆ ಹಾಕಿಯೇ ಬಿಟ್ಟರು. ಮೊದಲಿಗೆ ತಾವು ಓದಿದ ಪ್ರಾಥಮಿಕ ಶಾಲೆಯಲ್ಲಿ ಎಲ್ಲರೂ ಒಂದು ದಿನ ಕಲೆತರು.
ತಮ್ಮನ್ನು ಓದಿಸಿದ ಮೇಷ್ಟ್ರುಗಳಿಗೆ ವಂದಿಸಿದರು. ಶಾಲೆಗೆ ಕೈಲಾದ ಸಹಾಯ ಮಾಡಿದರು. ನಂತರ ಪರಸ್ಪರ ತಮ್ಮ ತಮ್ಮ ಕುಟುಂಬಗಳನ್ನು ಪರಿಚಯಿಸುವ ಹೊಸ ಕಾರ್ಯಕ್ರಮ ಹಾಕಿಕೊಂಡರು. ಪ್ರತಿಸಲವೂ ಒಬ್ಬೊಬ್ಬರ ಮನೆಯಲ್ಲಿ ಎಲ್ಲರೂ ಸೇರುವುದು. ಒಟ್ಟಿಗೆ ಊಟ, ಹಾಡು, ಮಾತಿನ ಸಂತೋಷಗಳ ಸೇರಿಸಿ ಹಳೆಯ ನೆನಪಿನ ದಿನಗಳಿಗೆ ಜೀವ ಕೊಟ್ಟರು. ಸದ್ಯದ ಜೀವನದಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ. ಕೆಲವರ ಜೀವನ ಹಸಿರಾದರೆ, ಹಲವರದು ಮುರಿದು ಹೋದ, ಬಾಡಿ
ನೊಂದ ಕಥೆಗಳು. ಸುಖ ಸಂಪತ್ತು ಗಳಿಸಿದವರು, ಕಳಕೊಂಡವರು, ಗೆದ್ದವರು, ಹೀಗೆ ಹಲವು ಪರಿಯ ಮುಖಗಳು. ಇರುವ ಸಂಕಷ್ಟಗಳ ಮರೆತು ಮತ್ತೆ ಮಕ್ಕಳಂತೆ ಹಾಡಿ ನಲಿಯುತ್ತಾ, ಕೂಡಿ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಸಂದರ್ಭ ಹುಟ್ಟಿತು. ಪರಸ್ಪರ ಧೈರ್ಯ ಸಾಂತ್ವನ, ಸಹಾಯ ಸಲ್ಲಿಸುವ ಮಧುರ ಕ್ಷಣಗಳು ಸಿಕ್ಕವು.
ಎಲ್ಲರ ಬದುಕಿನಲ್ಲೂ ಹೀಗೆ ಬಾಲ್ಯದ ನೆನಪುಗಳು, ಬಾಲ್ಯದ ಗೆಳೆಯರ ಜೊತೆ ಕಳೆದ ಅಪೂರ್ವ ನೆನಪಿನ ಕ್ಷಣಗಳ ರಾಶಿಯೇ ಇರುತ್ತದೆ. ಈ ಬಾಲ್ಯದ ಬುತ್ತಿ ಬಿಚ್ಚಲು ಇದಕ್ಕೊಂದು ಸಂತೋಷದ ಸ್ಪರ್ಶ ಸಿಗಲು ಪ್ರೈಮರಿಯ ಗೆಳೆಯ ಗೆಳತಿಯರೇ ಬೇಕು. ಒಂದೆಡೆ ಸೇರಿದಾಗ ಮತ್ತೆ ಶಾಲೆಯ ಬೆಲ್ಲು ಹೊಡೆಯುತ್ತದೆ. ಈ ನಡು ವಯಸ್ಸಿನ ಕಾಲದಿಂದ ಜಾರಿ ಬಾಲ್ಯಕ್ಕೆ ಮರಳುವ ಹಿಗ್ಗು ಸಾಗುತ್ತಲೇ ಇರುತ್ತದೆ.
ಇತ್ತೀಚೆಗೆ ಹಳೆಯ ಗೆಳೆಯರು ಸಮೂಹ ಮಾಧ್ಯಮ ಬಳಸಿಕೊಂಡು ಒಂದಾಗುತ್ತಿದ್ದಾರೆ. ಕಳೆದು ಹೋದ ಗೆಳೆತನದ ಕಂಪ ಹುಡುಕುತ್ತಿದ್ದಾರೆ. ಇಂತಹ ಆರೋಗ್ಯಕರ ಗುಂಪುಗಳು ಹೆಚ್ಚಾಗಬೇಕು. ಜಂಜಾಟದ ಬದುಕಿನ ನೂರೆಂಟು ಗದ್ದಲದಲ್ಲಿ ಇಲ್ಲೊಂದು ಬೆಳಕಿನ ಹೊಸದಾರಿ ಕಾಣುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.