ADVERTISEMENT

ನುಡಿ ಬೆಳಗು: ಜ್ಞಾನದ ಸರಿಯಾದ ಬಳಕೆ

ನುಡಿ ಬೆಳಗು

ಎಚ್.ಎಸ್.ನವೀನಕುಮಾರ್
Published 23 ಜೂನ್ 2024, 18:34 IST
Last Updated 23 ಜೂನ್ 2024, 18:34 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಇದೊಂದು ಪಂಚತಂತ್ರದ ಕಥೆ. ಒಂದೂರಿನಲ್ಲಿ ನಾಲ್ವರು ಸ್ನೇಹಿತರಿದ್ದರು. ಅವರಲ್ಲಿ ಮೂವರು ಸ್ನೇಹಿತರು ಅರವತ್ತನಾಲ್ಕು ವಿದ್ಯೆಗಳನ್ನೂ ಅರೆದು ಕುಡಿದ ಮಹಾ ಪಂಡಿತರಾಗಿದ್ದರು. ನಾಲ್ಕನೆಯವ ಮಾತ್ರ ಈ ಮೂವರಷ್ಟು ವಿದ್ಯಾವಂತನಿರಲಿಲ್ಲ. ಆದರೆ ಅವನಲ್ಲಿ ಸಮಯ ಪ್ರಜ್ಞೆ, ಸಾಮಾನ್ಯ ತಿಳಿವಳಿಕೆ ಈ ಬುದ್ಧಿವಂತರಿಗಿಂತ ಜಾಸ್ತಿ ಇತ್ತು. ಈ ಸ್ನೇಹಿತರು ದೂರದ ದೇಶಕ್ಕೆ ಹೋಗಿ ತಾವು ಕಲಿತ ವಿದ್ಯೆಯಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ತೀರ್ಮಾನಕ್ಕೆ ಬಂದರು. ಹಾಗೆ ಹೋಗುವಾಗ ಮೂವರು ಮಿತ್ರರು, ನಾಲ್ಕನೆಯವನು ತಮ್ಮಷ್ಟು ಬುದ್ಧಿವಂತನಿರದ ಕಾರಣ, ಅವನನ್ನು ತಮ್ಮ ಜೊತೆಯಲ್ಲಿ ಕರೆದೊಯ್ಯಲು ಇಷ್ಟಪಡಲಿಲ್ಲ.

ಆದರೆ ಕೊನೆಗೆ ಆತ ತಮ್ಮ ಬಾಲ್ಯ ಸ್ನೇಹಿತನಾಗಿದ್ದರಿಂದ ಅವನೂ ಬರಲಿ ಎಂದು ತಮ್ಮೊಂದಿಗೆ ಕರೆದುಕೊಂಡು ದೂರದ ದೇಶಕ್ಕೆ ಹೊರಟರು. ಹಾಗೆ ಹೋಗುವಾಗ ಅವರು ದಟ್ಟವಾದ ಕಾಡೊಂದನ್ನು ದಾಟಿ ಹೋಗಬೇಕಾಗಿತ್ತು. ಆ ಕಾಡು ಹಾದಿಯಲ್ಲಿ ಅವರಿಗೆ ಒಂದು ಬೃಹತ್ ಪ್ರಾಣಿಯ ಮೂಳೆಗಳು ಗೋಚರಿಸಿದವು. ಮೂವರು ಸ್ನೇಹಿತರು ತಮ್ಮ ಬುದ್ಧಿಶಕ್ತಿ ಹಾಗೂ ಮಂತ್ರಶಕ್ತಿಯ ಬಲವನ್ನು ಇಲ್ಲಿಯೇ ಪರೀಕ್ಷಿಸೋಣ, ಇದಕ್ಕೊಂದು ಸರಿಯಾದ ಅವಕಾಶ ಸಿಕ್ಕಿದೆ, ಈ ಪ್ರಾಣಿಯ ಮೂಳೆಗಳನ್ನು ಸರಿಯಾಗಿ ಜೋಡಿಸಿ, ಇದಕ್ಕೆ ತಮ್ಮ ಮಂತ್ರಶಕ್ತಿಯಿಂದ ಮರು ಜೀವ ಕೊಡೋಣ ಎಂದು ನಿರ್ಧರಿಸಿದರು. ಆಗ ನಾಲ್ಕನೇ ಸ್ನೇಹಿತ, ‘ಮಿತ್ರರೇ, ಖಂಡಿತಾ ಬೇಡ, ಆ ರೀತಿ ಮಾಡುವ ಮುನ್ನ ಸ್ವಲ್ಪ ಯೋಚಿಸಿ’ ಎಂದು ಸಲಹೆ ನೀಡಿದ.

ADVERTISEMENT

‘ದಡ್ಡ ನಿನಗೆ ಈ ವಿದ್ಯೆ ಗೊತ್ತಿಲ್ಲವೆಂದು ಅಸೂಯೆ ಪಡಬೇಡ, ಸುಮ್ಮನಿರು’ ಎಂದು ಅವನನ್ನು ಮೂದಲಿಸಿ ಬೈದು ಸುಮ್ಮನಾಗಿಸಿದ ಮೂವರು ಸ್ನೇಹಿತರು, ಆ ಪ್ರಾಣಿಯ ಮೂಳೆಗಳನ್ನು ಜೋಡಿಸಿ, ತಮ್ಮ ಮಂತ್ರ ತಂತ್ರದ ಬಲದಿಂದ ಅದಕ್ಕೆ ರಕ್ತ ಮಾಂಸ ತುಂಬಿಸಿದರು. ಅದಕ್ಕೆ ಅಂಗಾಂಗಗಳ‌ ಮರು ಜೋಡಣೆ ಮಾಡಿ, ಚರ್ಮವನ್ನೂ ತೊಡಿಸಿದರು. ನೋಡಿದರೆ ಅದೊಂದು ಬೃಹತ್ ಸಿಂಹವಾಗಿತ್ತು. ಇನ್ನೂ ನಿರ್ಜೀವವಾಗಿದ್ದ ಈ ಸಿಂಹಕ್ಕೆ ತಮ್ಮ ಮಂತ್ರಶಕ್ತಿಯಿಂದ ಜೀವ ತುಂಬುವುದೊಂದೇ ಬಾಕಿ ಉಳಿದಿತ್ತು.

ಮೂವರು ಬುದ್ಧಿವಂತರು ಆ ಕೆಲಸಕ್ಕೂ ಮುಂದಾದಾಗ, ಸಾಮಾನ್ಯ ಪ್ರಜ್ಞೆಯುಳ್ಳ ನಾಲ್ಕನೇ ಸ್ನೇಹಿತ ಕೂಗಿ ಹೇಳಿದ ‘ದಯವಿಟ್ಟು ಅದಕ್ಕೆ ಜೀವ ತುಂಬಬೇಡಿ. ಅದರಿಂದ ನಮ್ಮ ಪ್ರಾಣಕ್ಕೇ ಅಪಾಯ ಬರಬಹುದು’.‌

ಆದರೆ ಈ ಅತಿ ಬುದ್ಧಿವಂತರು ದಡ್ಡ ಸ್ನೇಹಿತನ ಮಾತನ್ನು ಕೇಳಲಿಲ್ಲ. 

ಈ ಮೂರ್ಖರ ಮಧ್ಯೆ ಇದ್ದರೆ ತನಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರಿತ ನಾಲ್ಕನೇ ಸ್ನೇಹಿತ ಮಿಂಚಿನ ವೇಗದಲ್ಲಿ ಅಲ್ಲೇ ಹತ್ತಿರದಲ್ಲಿದ್ದ ಎತ್ತರದ ಮರವೊಂದನ್ನು ಏರಿ ಕುಳಿತ. ಈ ಮೂವರು ಮಿತ್ರರು, ಆ ನಿರ್ಜೀವ ಸಿಂಹಕ್ಕೆ ಜೀವ ತುಂಬಿಯೇ ಬಿಟ್ಟರು... ಆ ಭೀಕರ ಸಿಂಹ ತೀವ್ರವಾಗಿ ಹಸಿದಿತ್ತು. ತಕ್ಷಣವೇ ಈ ಮೂವರನ್ನು ಹರಿದು ತಿಂದು ಕಾಡಿನೊಳಗೆ ಪರಾರಿಯಾಯ್ತು.  

ನಮ್ಮಲ್ಲಿ ವಿದ್ಯೆ, ಬುದ್ಧಿವಂತಿಕೆಗಳಿದ್ದರಷ್ಟೇ ಸಾಲದು, ಅದನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕೆಂಬ ಸಾಮಾನ್ಯ ಪರಿಜ್ಞಾನ ಕೂಡಾ ಅತ್ಯಗತ್ಯವಾಗಿ ನಮ್ಮಲ್ಲಿರಬೇಕು. ಜ್ಞಾನದಷ್ಟೇ ಮುಖ್ಯ ಅದರ ಸೂಕ್ತ ಹಾಗೂ ಸಂದರ್ಭೋಚಿತ ಬಳಕೆ ಎಂಬ ಅಂಶವನ್ನು ನಾವೆಂದಿಗೂ ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.