ಮಾನವನ ಬದುಕಿನಲ್ಲಿ ಹುಟ್ಟಿನಷ್ಟೇ ಸಹಜವಾದದ್ದು ಸಾವು. ಸಾವೆಂಬುದು ಪ್ರತಿಯೊಬ್ಬರಿಗೂ ಖಚಿತ. ಅದು ಯಾವಾಗ ಬರುವುದೆಂಬುದು ಯಾರಿಗೂ ತಿಳಿಯದ ರಹಸ್ಯ. ಸಾವೆಂಬುದು ಪ್ರತಿಯೊಬ್ಬರ ಬದುಕಿನ ಅನಿವಾರ್ಯವೆಂಬ ಸತ್ಯದ ಅರಿವಿದ್ದರೂ, ಇಷ್ಟೇ ದಿನಗಳಲ್ಲಿ ಮರಣ ಸಂಭವಿಸುತ್ತದೆ ಎಂಬುದು ಯಾರಿಗಾದರೂ ಮೊದಲೇ ತಿಳಿದರೆ ಅವರ ಪ್ರತಿಕ್ರಿಯೆ ಹೇಗಿರಲು ಸಾಧ್ಯ? ಇಂತಹ ಸಂದರ್ಭದಲ್ಲಿಯೂ ವ್ಯಕ್ತಿ ಧನಾತ್ಮಕವಾಗಿ ಯೋಚಿಸಲು ಸಾಧ್ಯವಿದೆಯೇ? ಇದೆ ಎಂದು ಜಗತ್ತಿಗೆ ತೋರಿಸಿದ ವ್ಯಕ್ತಿಯೇ ರಾಂಡಾಲ್ಫ್ ಫ್ರೆಡ್ರಿಕ್ ಪಾಶ್. 1960ರಲ್ಲಿ ಅಮೆರಿಕದ ಬಾಲ್ಟಿಮೋರ್‌ನಲ್ಲಿ ಜನಿಸಿದ ಪಾಶ್ ಕಂಪ್ಯೂಟರ್ ವಿಜ್ಞಾನಿ ಹಾಗೂ ಯಶಸ್ವಿ ಪ್ರಾಧ್ಯಾಪಕ. ಅಮೆರಿಕದ ಡಿಸ್ನಿಲ್ಯಾಂಡ್‌ನಲ್ಲಿ ವರ್ಚುಯಲ್ ಎಂಜಿನಿಯರ್ ಆಗಿ ಕೂಡ ಕೆಲಸ ಮಾಡಿದ್ದ ಪಾಶ್, ತನ್ನ ಚಿಕ್ಕ ವಯಸ್ಸಿನಲ್ಲಿಯೇ ಪರಿಶ್ರಮ ಹಾಗೂ ಬುದ್ಧಿವಂತಿಕೆಯಿಂದ ಸಿರಿವಂತರಾಗಿದ್ದರು. ಒಳ್ಳೆಯ ಕುಟುಂಬ, ಚಂದದ ಮನೆ ಮಡದಿ ಮಕ್ಕಳು... ಹೀಗೆ ಬದುಕಿನಲ್ಲಿ ನೆಮ್ಮದಿಯಾಗಿರಲು ಅಗತ್ಯವಿರುವ ಅಂಶಗಳೆಲ್ಲ ಪಾಶ್ ಅವರ ಬದುಕಿನಲ್ಲಿತ್ತು. ಆದರೆ 2008ರಲ್ಲಿ ಅಂದರೆ 48ನೇ ವಯಸ್ಸಿನಲ್ಲಿ ಪಾಶ್ ಅವರು ಟರ್ಮಿನಲ್ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ಗೆ ಒಳಗಾಗುತ್ತಾರೆ. ವೈದ್ಯರು ‘ನೀವಿನ್ನು ಮೂರು ತಿಂಗಳು ಬದುಕಿರುತ್ತೀರಿ’ ಎಂಬ ಕಠೋರ ಸತ್ಯವನ್ನು ಇವರಿಗೆ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಎಂತಹ ಧನಾತ್ಮಕ ವ್ಯಕ್ತಿಯಾದರೂ ಎದೆಗುಂದುವುದು ಸಹಜ. ಆರಂಭಿಕ ಆಘಾತದಿಂದ ಹೊರಬಂದ ಪಾಶ್, ಸಾವನ್ನೂ ಹೇಗೆ ಧನಾತ್ಮಕವಾಗಿ ನೋಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿ ಮಾದರಿಯಾಗುತ್ತಾರೆ. ‘ನನ್ನ ಕಾಯಿಲೆಯನ್ನು ಗುರುತಿಸಿದ ವೈದ್ಯರು ಸಹ ಅತ್ಯಂತ ಧನಾತ್ಮಕ ವ್ಯಕ್ತಿ. ಅವರು ಮೂರು ತಿಂಗಳಲ್ಲಿ ನೀನು ಸಾಯುತ್ತಿ ಎಂದು ಹೇಳಲಿಲ್ಲ ಬದಲಿಗೆ ಮೂರು ತಿಂಗಳು ನೀನು ಬದುಕಿರುತ್ತಿ ಎಂದರು. ಆಗ ನನಗೆ ಏನಾದರೂ ಮಾಡಲು ಇನ್ನೂ ಮೂರು ತಿಂಗಳು ಅವಕಾಶವಿದೆ ಎಂದೆನ್ನಿಸಿತು’ ಎನ್ನುವ ಪಾಶ್ ಈ ಅವಧಿಯಲ್ಲಿ ತಾವು ಕಲಿತಿದ್ದ ಅಮೆರಿಕದ ಕಾರ್ನೆಗಿ ಮೆಲ್ಲನ್ ಯುನಿವರ್ಸಿಟಿಯಲ್ಲಿ ‘ರಿಯಲಿ ಅಚೀವಿಂಗ್ ಯುವರ್ ಚೈಲ್ಡ್‌ಹುಡ್ ಡ್ರೀಮ್ಸ್’ ಎನ್ನುವ ವಿಷಯದ ಕುರಿತು ಒಂದು ವಿಶೇಷ ಉಪನ್ಯಾಸವನ್ನು ನೀಡುತ್ತಾರೆ. ಇದು ‘ದಿ ಲಾಸ್ಟ್ ಲೆಕ್ಚರ್’ ಎಂಬ ಹೆಸರಿನಲ್ಲಿ ಅತ್ಯಂತ ಜನಪ್ರಿಯವಾಗುತ್ತದೆ. ಈ ಉಪನ್ಯಾಸದ ವಿಡಿಯೊ ಯೂಟ್ಯೂಬ್‌ನಲ್ಲಿ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೊ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ನೊಂದವರಿಗೆ, ಕುಗ್ಗಿ ಹೋದವರಿಗೆ ಇದು ಸಕಾರಾತ್ಮಕತೆಯ ಸೆಲೆಯುಕ್ಕುವಂತೆ ಮಾಡುತ್ತದೆ.
ಈ ಉಪನ್ಯಾಸದಲ್ಲಿ, ಬದುಕಿನಲ್ಲಿ ಪ್ರತಿಯೊಂದು ಸನ್ನಿವೇಶವನ್ನೂ ನಾವು ಹೇಗೆ ಧನಾತ್ಮಕವಾಗಿ ನೋಡಬಹುದು ಎಂಬುದರ ಅದ್ಭುತ ಚಿತ್ರಣ ನೀಡುವ ಪಾಶ್ ಈ ರೀತಿಯ ಆಲೋಚನೆ ಇದ್ದರೆ ಯಾವುದೇ ಕ್ಷಣದಲ್ಲಿ ಸಾವು ಎದುರಾದರೂ ನಾವದನ್ನು ಸಕಾರಾತ್ಮಕವಾಗಿ ಸ್ವೀಕರಿಸಲು ಸಾಧ್ಯ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತಾರೆ. ಬದುಕಿನ ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಅನುಭವಿಸುವುದೇ ಇದಕ್ಕಿರುವ ಏಕೈಕ ದಾರಿ ಎಂದು ಹೇಳುವ ಪಾಶ್ ಅವರು ಇದಕ್ಕೆ ಕೊಡುವ ಹತ್ತು ಹಲವಾರು ಉದಾಹರಣೆಗಳಲ್ಲಿ ಒಂದು ಉದಾಹರಣೆ ಇಲ್ಲಿ ಉಲ್ಲೇಖಾರ್ಹ. ಡಿಸ್ನಿಲ್ಯಾಂಡ್‌ನಲ್ಲಿ ಕೆಲಸ ಮಾಡಿದ್ದ ಪಾಶ್ ಅಲ್ಲಿನ ಗೇಟ್‌ಕೀಪರ್‌ಗಳ ಉದಾಹರಣೆಯನ್ನು ನೀಡುತ್ತಾ ‘ಡಿಸ್ನಿ ಲ್ಯಾಂಡಿನ ಗೇಟ್‌ಕೀಪರ್ ಬಳಿ ಇಲ್ಲಿನ ಗೇಟ್‌ಗಳು ಎಷ್ಟು ಹೊತ್ತಿಗೆ ‘ಮುಚ್ಚುತ್ತವೆ’ ಎಂದು ಕೇಳಿ ನೋಡಿ ಆಗವರು ಇವು ಸಂಜೆ ಎಂಟು ಗಂಟೆಯವರೆಗೂ ‘ತೆರೆದಿರುತ್ತವೆ’ ಎಂದು ಉತ್ತರಿಸುತ್ತಾರೆ. ಮುಚ್ಚುವುದು ಹಾಗೂ ತೆರೆದಿರುವುದು ಇಲ್ಲಿ ಒಂದೇ ಅರ್ಥವನ್ನು ನೀಡುತ್ತವೆ ಆದರೆ ಅದರ ಸಕಾರಾತ್ಮಕತೆಯಲ್ಲಿ ಬಹುದೊಡ್ಡ ವ್ಯತ್ಯಾಸವಿದೆ. ನಮ್ಮ ಬದುಕನ್ನು ಹಾಗೆಯೇ ನಾವು ಎಲ್ಲಿಯವರೆಗೆ ತೆರೆದಿರುತ್ತದೆ ಎಂಬುದಾಗಿ ಯೋಚಿಸುತ್ತಾ ಬದುಕಬೇಕು’ ಎನ್ನುತ್ತಾರೆ.
ಎಷ್ಟು ವಿಶೇಷವಾಗಿದೆಯಲ್ಲವೇ ಈ ಚಿಂತನೆ? ಅಂದಹಾಗೆ ಪಾಶ್ ಅವರ ಈ ವಿಶೇಷ ಪುಸ್ತಕ ‘ದಿ ಲಾಸ್ಟ್ ಲೆಕ್ಚರ್’ ಕನ್ನಡದಲ್ಲೂ ಲಭ್ಯ. ಎಂಜಿನಿಯರ್ ಉಮೇಶ್ ಎಸ್. ಅವರು ಇದನ್ನು ಬಹಳ ಉತ್ತಮವಾಗಿ ಕನ್ನಡೀಕರಿಸಿದ್ದಾರೆ. ಎಲ್ಲರೂ ಖಂಡಿತವಾಗಿ ಓದಬೇಕಾದ ಪುಸ್ತಕ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.