ಇಂಗ್ಲೆಂಡಿನ ಜೊನಾಥನ್ ಎಡ್ವರ್ಡ್ಸ್ ಜಗತ್ತಿನ ಅತ್ಯುತ್ತಮ ಟ್ರಿಪಲ್ ಜಂಪ್ ಪಟು ಎನಿಸಿಕೊಂಡಿರುವವರು. ಮೊದಲಬಾರಿ 1988ರ ಸೋಲ್ ಓಲಂಪಿಕ್ಸ್‌ನಲ್ಲಿ ಭಾಗವಹಿಸಿದಾಗ ಆತನಿಗೆ ಇಪ್ಪತ್ತೆರಡು ವರ್ಷ. ನೂರಾರು ದೇಶಗಳ ಅತ್ಯುತ್ತಮ ಆಟಗಾರರ ನಡುವೆ ಜೊನಾಥನ್ ಪಡೆದ ಸ್ಥಾನ ಇಪ್ಪತ್ಮೂರು. 1992ರ ಬಾರ್ಸಿಲೋನಾ ಓಲಂಪಿಕ್ಸ್‌ನಲ್ಲಿ ಮೂವತೈದನೇ ಸ್ಥಾನ.
ಬೇಸರವಾದರೂ ಜೊನಾಥನ್ ಧೃತಿಗೆಡಲಿಲ್ಲ. ತಮ್ಮ ತಯಾರಿಯಲ್ಲಿ ಏನು ತಪ್ಪಾಗಿದೆ ಎಂದು ನೋಡಿಕೊಂಡರು. ಅಭ್ಯಾಸದ ಅವಧಿಯನ್ನು ಹಿಗ್ಗಿಸಿದರು. 1996ರ ಅಟ್ಲಾಂಟಾ ಓಲಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲೇಬೇಕೆಂದು ಪಣ ತೊಟ್ಟರು. ಈ ನಡುವೆ 1995ರ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಹದಿನೆಂಟು ಮೀಟರುಗಳಿಗಿಂತ ದೂರ ಜಿಗಿದು ಆ ಸಾಧನೆ ಮಾಡಿದ ಮೊದಲ ಟ್ರಿಪಲ್ ಜಂಪ್ ಪಟುವಾದರು. ಇಪ್ಪತ್ತು ನಿಮಿಷಗಳ ಅಂತರದಲ್ಲಿ ತಮ್ಮ ದಾಖಲೆ ತಾವೇ ಮುರಿದು ಎರಡೆರಡು ವಿಶ್ವದಾಖಲೆ ನಿರ್ಮಿಸಿದ್ದರು. ಇವತ್ತಿಗೂ ಆ ವಿಶ್ವದಾಖಲೆ ಹಾಗೇ ಇದೆ.
ವಿಶ್ವಚಾಂಪಿಯನ್ ಆದೆ ಎಂದು ಓಲಂಪಿಕ್ಸ್ ತಯಾರಿ ನಿಲ್ಲಿಸಲಿಲ್ಲ. ಆದರೆ 1996ರ ಅಟ್ಲಾಂಟಾ ಓಲಂಪಿಕ್ಸ್‌ನಲ್ಲಿ ಕನಿಷ್ಠ ಅಂತರದಲ್ಲಿ ಚಿನ್ನ ತಪ್ಪಿ ಬೆಳ್ಳಿ ಪದಕ ಮಡಿಲಿಗೆ ಬಿತ್ತು. ಆದರೆ ಜೊನಾಥನ್‌ಗೆ ಸಮಾಧಾನವಿಲ್ಲ. ಓಲಂಪಿಕ್ಸ್‌ನಲ್ಲಿ ದೇಶದ ರಾಷ್ಟ್ರಗೀತೆ ಮೊಳಗಿಸುವ ಕನಸನ್ನು 1988ರಿಂದ ಎದೆಯಲ್ಲಿಟ್ಟುಕೊಂಡಿದ್ದ ಆಟಗಾರನಾತ. 2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ಓಲಂಪಿಕ್ಸ್. ಹನ್ನೆರಡು ವರ್ಷಗಳ ಸತತ ಪರಿಶ್ರಮ ಫಲ ಕೊಟ್ಟಿತು. ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡಿನ ರಾಷ್ಟ್ರಗೀತೆ ಅನುರಣಿಸಿತು.
ಸೋಲಿಗೆ ತಲೆಬಾಗದೇ ಸತತವಾಗಿ ಪ್ರಯತ್ನಪಟ್ಟರೆ ಗುರಿ ಸಾಧಿಸಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ಇದು. ನಡೆಯುವಾಗ ಎಡವಿದೆವೆಂದು ನಡಿಗೆಯನ್ನೇ ನಿಲ್ಲಿಸಿದರೆ ಗುರಿ ತಲುಪಲು ಸಾಧ್ಯವಿಲ್ಲವೆಂಬ ಸರಳ ಸತ್ಯವನ್ನು ಅರ್ಥ ಮಾಡಿಕೊಳ್ಳದೇ ಎಷ್ಟೋ ಜನರು ಹತಾಶರಾಗುತ್ತಾರೆ. ಉದಾಹರಣೆಗೆ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಾಗ ಒಂದೆರಡು ಸಲ ಅಥವಾ ಒಂದೆರಡು ವರ್ಷ ಪ್ರಯತ್ನ ಪಟ್ಟು ನಿರಾಶರಾಗಿ ಓದುವುದನ್ನೇ ನಿಲ್ಲಿಸಿಬಿಡುತ್ತಾರೆ. ಕಳೆದ ವರ್ಷ ನಮ್ಮ ಪರಿಚಿತರೊಬ್ಬರ ಮಗಳಿಗೆ ಎರಡು ಬ್ಯಾಂಕುಗಳಲ್ಲಿ ಒಟ್ಟಿಗೇ ನೌಕರಿ ಸಿಕ್ಕಿತ್ತು. ಸಿಹಿ ಕೊಡಲು ಬಂದ ತಂದೆ ಮಗಳು ನಲವತ್ತನೇ ಬಾರಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದನ್ನು ಖುಶಿಯಿಂದ ಹೇಳಿದರು.
ನಿಜ, ಐದಾರು ವರ್ಷಗಳಷ್ಟು ದೀರ್ಘಾವಧಿ ಸಮಯ ಕೊಡುವುದು ಕಷ್ಟವೇ. ಆದರೆ ವಿದ್ಯಾಭ್ಯಾಸ ನಡೆಸುತ್ತಲೇ, ಉದ್ಯೋಗ ಮಾಡುತ್ತಲೇ ಪರೀಕ್ಷಾ ತಯಾರಿ ಮಾಡಿಕೊಳ್ಳಬಹುದು. ಸಮಯ ಹೊಂದಾಣಿಕೆ ಕಷ್ಟವಾದರೂ, ಸುಸ್ತಾದರೂ, ಮೊಬೈಲ್ ಸಹವಾಸ ಬಿಡುವುದು ಇಷ್ಟವಿಲ್ಲದಿದ್ದರೂ ಶಿಸ್ತಿನಿಂದ ಅಧ್ಯಯನ ನಡೆಸುವ ಪ್ರತಿಯೊಬ್ಬರೂ ಯಶಸ್ಸು ಕಾಣಬಹುದು. ಉದ್ಯೋಗ ಪಡೆಯುವುದು ಮಾತ್ರವಲ್ಲ, ನಮ್ಮ ಕ್ಷೇತ್ರ ಯಾವುದೇ ಇರಲಿ ತಾಳ್ಮೆಯಿಂದ ಮುನ್ನಡೆಯುವುದೊಂದೇ ಯಶಸ್ಸಿಗೆ ದಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.