ADVERTISEMENT

ನುಡಿ ಬೆಳಗು - 53 | ಪಾಪ, ಪುಣ್ಯ ನಿರ್ಣಯ ಮಾಡೋದು ಹೇಗೆ?

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 27 ಅಕ್ಟೋಬರ್ 2024, 23:36 IST
Last Updated 27 ಅಕ್ಟೋಬರ್ 2024, 23:36 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಹೌದು, ಪಾಪ, ಪುಣ್ಯ ಅನ್ನುತ್ತೀರಿ. ಅದನ್ನು ನಿರ್ಣಯ ಮಾಡೋದು ಹೇಗೆ? ಯಾರಿಗಾದರೂ ಹೊಟ್ಟೆಗೆ ಚೂರಿ ಹಾಕಿದರೆ, ಅದನ್ನು ಪಾಪ ಅಂತೀರಿ. ಕಳ್ಳನೊಬ್ಬ ಹಾಗೆ ಮಾಡಬಹುದು. ಆದರೆ, ಡಾಕ್ಟರ್ ಕೂಡಾ ಹೊಟ್ಟೆಗೆ ಚೂರಿ ಹಾಕಿಯೇ ಆಪರೇಷನ್ ಮಾಡ್ತಾನ. ಡಾಕ್ಟರ್ ಮಾಡೋ ಕೆಲಸ ಪಾಪವೇನು? ಕೊಲೆ ಮಾಡೋದು ಪಾಪ ಅಂತೀವಿ. ಗಲ್ಲು ಶಿಕ್ಷೆಯಾದವರನ್ನು ಗಲ್ಲಿಗೆ ಏರಿಸ್ತಾರ. ಗಲ್ಲಿಗೆ ಏರಿಸುವ ಮನುಷ್ಯ ಕೂಡಾ ಪಾಪಿ ಏನು? ಸೈನಿಕರು, ಪೊಲೀಸರು ಉಗ್ರಗಾಮಿಗಳನ್ನು ಗುಂಡು ಹಾರಿಸಿ ಕೊಲ್ಲುತ್ತಾರೆ. ಅದನ್ನು ಪಾಪ ಎನ್ನಲಿಕ್ಕಾಗುತ್ತೇನು? ಕೈಯಲ್ಲಿ ಕತ್ತಿ ಹಿಡಿದು ಯುದ್ಧ ಮಾಡುವುದು ಪಾಪ ಎಂದರೆ, 12ನೇ ಶತಮಾನದಲ್ಲಿ ಶರಣರು ವಚನಗಳನ್ನು ರಕ್ಷಣೆ ಮಾಡಲು ಕೈಯಲ್ಲಿ ಕತ್ತಿ ಹಿಡಿದು ಯುದ್ಧ ಮಾಡಿದರಲ್ಲ, ಅದನ್ನು ಏನಂತ ಕರಿಯೋದು? ಅಂದರೆ ಕರ್ಮ ಅಥವಾ ಕಾರ್ಯ ಯಾವುದಿದೆಯಲ್ಲ, ಅದು ತನ್ನಷ್ಟಕ್ಕೆ ತಾನು ಕೆಟ್ಟದ್ದೂ ಅಲ್ಲ, ಒಳ್ಳೆಯದೂ ಅಲ್ಲ. ಯಾವ ಉದ್ದೇಶದಿಂದ ಹೊಟ್ಟೆಗೆ ಚೂರಿ ಹಾಕಿದ್ದಾನೆ ಎನ್ನುವುದರ ಮೇಲೆ ಪಾಪ, ಪುಣ್ಯ ನಿರ್ಣಯವಾಗುತ್ತದೆ. ಜೀವ ತೆಗೆಯಲು ಹೊಟ್ಟೆಗೆ ಚೂರಿ ಹಾಕಿದರೆ ಅದು ಪಾಪ. ಜೀವ ಉಳಿಸಲು ಚೂರಿ ಹಾಕಿದರೆ ಅದು ಪುಣ್ಯ. ನಾವು ಮಾಡುವ ಕಾರ್ಯಗಳು ಸ್ವಾರ್ಥದಿಂದ ಕೂಡಿದ್ದರೆ ಅದು ಪಾಪ. ನಾವು ಮಾಡುವ ಕಾರ್ಯಗಳು ಲೋಕ ಕಲ್ಯಾಣ, ಆತ್ಮ ಕಲ್ಯಾಣದ ಉದ್ದೇಶ ಹೊಂದಿದ್ದರೆ ಅದು ಪುಣ್ಯದ ಕಾರ್ಯ. ಪುಣ್ಯವನ್ನು ಗಳಿಸಬೇಕು, ಪಾಪವನ್ನು ಕಳೆದುಕೊಳ್ಳಬೇಕು.

ನಮಗೆ ಅರಿವಿಲ್ಲದೆ ಎಷ್ಟೋ ಪಾಪಕರ್ಮಗಳು ನಮ್ಮಿಂದ ಆಗಿವೆ. ಆತ್ಮವಂಚನೆ ಮಾಡಿಕೊಂಡು ಮಾಡಿದ ಕರ್ಮಗಳೂ ಇವೆ. ಕೈ ಹಿಡಿದ ಪತ್ನಿಗೆ ಸುಳ್ಳು ಹೇಳಿ ಮಾಡಿದ ಪಾಪಗಳಿವೆ. ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ನಮ್ಮಿಂದಾದ ಮೋಸ ಕಾರ್ಯಗಳೆಷ್ಟು? ನಂಬಿದ ಸ್ನೇಹಿತರಿಗೆ, ಬಂಧುಬಾಂಧವರಿಗೆ, ಸಮಾಜಕ್ಕೆ ಅಷ್ಟೇ ಏಕೆ ಆ ದೇವರಿಗೂ ಮೋಸ ಮಾಡಲಿಕ್ಕೆ ನಾವು ಹಿಂದೆ ಮುಂದೆ ನೋಡಿದವರಲ್ಲ. ಒಂದೇ, ಎರಡೇ, ನೂರೇ.. ಸಾವಿರ ಸಾವಿರ ಪಾಪ ಕರ್ಮಗಳು ಈ ದೇಹದಿಂದ ಘಟಿಸಿವೆ. ಹಾಗಾದರೆ, ಮನುಷ್ಯ ಈ ಪಾಪ ಫಲಗಳನ್ನು ಯಾವ ಬಲ ಇಟ್ಟುಕೊಂಡು ಮಾಡ್ತಾನೆ? ಅವನೇನು ತನಗೆ ಸಾವೇ ಇಲ್ಲ ಅಂತ ತಿಳಕೊಂಡಾನೇನು? ಊರಾಗೆ ಇರುವ ಸ್ಮಶಾನಗಳೆಲ್ಲಾ ಬಡಾವಣೆಗಳಾಗಿದಾವೆ, ಸತ್ತರೆ ಹೂಳಲು ಜಾಗವೇ ಇಲ್ಲ, ಅದಕ್ಕೆ ನಾವು ಅರಾಂ ಇರಬಹುದು ಅಂದುಕೊಂಡಾನೇನು? ಯಮಧರ್ಮ ಬುದ್ಧನ ಹತ್ತಿರ ಹೋಗಿ ಮತಾಂತರಗೊಂಡು ಸನ್ಯಾಸಿಯಾಗಿ ಕರುಣೆ ಬಂದೈತಿ ಅಂದಾನೇನು? ಲಂಚ ಕೊಟ್ಟರೆ ಯಮದೂತರು ಬಿಟ್ಟು ಬಿಡ್ತಾರೆ ಎಂದುಕೊಂಡಿದ್ದಾರೇನು? ಸೂರ್ಯ ಚಂದ್ರ ಇರುವವರೆಗೆ ನಿನ್ನ ಕರಕೊಂಡು ಹೋಗಲ್ಲ ಅಂತ ಕಾಲ ಪ್ರಾಮಿಸ್ ಮಾಡೈತೇನು? ಚಿತ್ರ ಗುಪ್ತರಿಗೆ ಮರೆವು ಬಂದೈತೇನು? ಚಿತ್ರ ಅಂದರೆ ಕಣ್ಣಿಗೆ ಕಂಡ ಪಾಪಗಳನ್ನು ದಾಖಲಿಸುವವ. ಗುಪ್ತ ಎಂದರೆ ಯಾರಿಗೂ ಗೊತ್ತಾಗದಂತೆ ಮಾಡಿದ ಪಾಪಗಳನ್ನು ದಾಖಲಿಸುವವ. ಸಾವು ಬಂದಾಗ ಯಾವ ಅಲೋಪತಿ, ಹೋಮಿಯೋಪತಿ, ನ್ಯಾಚುರೋಪತಿ, ಟೆಲಿಪತಿ ಕೊನೆಗೆ ತಿರುಪತಿ ಕೂಡಾ ನಡೆಯೋದಿಲ್ಲ. ಪಶುಪತಿ ಅಂತಾನ ನೀನು ಬಹಳ ಕಿತಾಪತಿ, ನಿನ್ನ ಬಿಡೋದಿಲ್ಲ ಅಂತಾನ. ಸಾವು ಯಾರನ್ನೂ ಬಿಡೋದಿಲ್ಲ. ಅದಕ್ಕೆ ನಾವು ಒಳ್ಳೆಯ ಕೆಲಸಗಳನ್ನು ಮಾಡಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.