ADVERTISEMENT

ನುಡಿ ಬೆಳಗು | ಸೋಲು ಕಲಿಸುವ ಜೀವನ ಪಾಠ

ಪ್ರಜಾವಾಣಿ ವಿಶೇಷ
Published 7 ಜುಲೈ 2024, 23:45 IST
Last Updated 7 ಜುಲೈ 2024, 23:45 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

20 ಮಾರ್ಚ್ 2007: ಭಾರತೀಯ ಕ್ರಿಕೆಟ್‌ನ ಕರಾಳ ದಿನವಾಗಿತ್ತು. ತೆಂಡೂಲ್ಕರ್, ಗಂಗೂಲಿ, ಯುವರಾಜ್, ಸೆಹ್ವಾಗ್ ಮುಂತಾದ ದಿಗ್ಗಜ ಆಟಗಾರರಿದ್ದ ತಂಡದ ನಾಯಕರಾಗಿದ್ದ ರಾಹುಲ್ ದ್ರಾವಿಡ್ ಸೋತು ತಲೆತಗ್ಗಿಸಿದ್ದರು. ಕೆರೀಬಿಯನ್ ದ್ವೀಪಗಳಲ್ಲಿ ಆಯೋಜಿತವಾಗಿದ್ದ ಒಂದು ದಿನದ ಅಂತರಾಷ್ಟ್ರೀಯ ಕ್ರಿಕೆಟ್ ವಿಶ್ವಕಪ್ ಸ್ಪರ್ಧೆಯಲ್ಲಿ ಭಾರತ ಗುಂಪು ಹಂತದಿಂದಲೇ ಹೊರಬಿದ್ದಿತ್ತು. ತಾನು ಸದಾ ಸೋಲಿಸುತ್ತಿದ್ದ ಬಾಂಗ್ಲಾ, ಶ್ರೀಲಂಕಾ ತಂಡಗಳೆದುರು ಹೀನಾಯವಾಗಿ ಸೋತು ಸೂಪರ್ ಎಂಟರ ಹಂತವನ್ನೂ ತಲುಪಲಾಗದ ಭಾರತ ತಂಡ ಹಾಗೂ ಅದರ ನಾಯಕ ರಾಹುಲ್ ದ್ರಾವಿಡ್ ಸಹಜವಾಗಿಯೇ ಅತ್ಯಂತ ಕಠೋರ ಟೀಕೆಯನ್ನು ಎದುರಿಸಬೇಕಾಯಿತು. ಕ್ರಿಕೆಟನ್ನು ಒಂದು ಧರ್ಮದಂತೆ ಆರಾಧಿಸುವ ನಮ್ಮ ದೇಶದ ಜನ ಗೆದ್ದಾಗ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಹಾಗೆಯೇ ಸೋತಾಗ ಅತ್ಯಂತ ಕೀಳು ಮಟ್ಟದ ವೈಯಕ್ತಿಕ ಟೀಕೆಗೂ ಇಳಿಯುತ್ತಾರೆ. ಈ ಸೋಲಿನ ನಂತರ ದ್ರಾವಿಡ್, ನಿಯಮಿತ ಓವರ್ ಕ್ರಿಕೆಟ್‌ನಿಂದಲೇ ನಿವೃತ್ತರಾದರು. 

29 ಜುಲೈ 2024: ಅದೇ ಕೆರೀಬಿಯನ್ ದ್ವೀಪ ಸಮೂಹ ವೆಸ್ಟ್ ಇಂಡೀಸ್‌ನ ಬಾರ್ಬೆಡೋಸ್‌ನಲ್ಲಿ ಟಿ20 ವಿಶ್ವಕಪ್ ಫೈನಲ್  ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾಕ್ಕೆ ಮುಖಾಮುಖಿಯಾಗಿ ನಿಂತಿತ್ತು. ಅಂದು ನಾಯಕರಾಗಿ ಸಾಧಿಸಲಾಗದನ್ನು ಇಂದು ತಾನು ತರಬೇತುದಾರನಾಗಿರುವ ತಂಡ ಸಾಧಿಸುತ್ತದೆ ಎನ್ನುವ ಆಶಾಭಾವನೆಯ ನೋಟದೊಂದಿಗೆ ಕುಳಿತಿದ್ದರು, ದ್ರಾವಿಡ್. ಇದಕ್ಕೂ ಮುಂಚೆ ಹಲವಾರು ಬಾರಿ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಫೈನಲ್‌ವರೆಗೂ ತಲುಪಿದ್ದ ಭಾರತ ಅಂತಿಮ ಗೆರೆ ದಾಟಲಾರದ ಅಳುಕು ಸಹಜವಾಗಿಯೇ ದ್ರಾವಿಡ್‌ರಲ್ಲಿತ್ತು. ಅತ್ಯಂತ ರೋಚಕವಾಗಿ ಸಾಗಿದ ಪಂದ್ಯ ಕೊನೆಯ ಓವರ್‌ನಲ್ಲಿ ಫಲಿತಾಂಶ ಕಂಡಿತು. ತಮ್ಮ ಕೊನೆಯ ಟಿ20 ಪಂದ್ಯ ಆಡುತ್ತಿರುವ ರೋಹಿತ್‌ರವರ ವಿಶೇಷ ನಾಯಕತ್ವದಿಂದ, ಕೊಹ್ಲಿಯ ತಾಳ್ಮೆಯ ಬ್ಯಾಟಿಂಗ್‌ನಿಂದ, ಡೆತ್ ಓವರ್‌ಗಳಲ್ಲಿ ಭುಮ್ರಾ, ಅರ್ಷದೀಪ್, ಪಾಂಡ್ಯ ಮುಂತಾದ ಹೊಸ ಹುಡುಗರ ಚೇತೋಹಾರಿ ಬೌಲಿಂಗ್‌ನಿಂದ, ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್‌ನಲ್ಲಿ  ಆಕಾಶ ಮುಟ್ಟುವಂತೆ  ಹಾರಿ ಹಿಡಿದ ಅದ್ಭುತ ಕ್ಯಾಚ್‌ನಿಂದ, ಭಾರತ ಅತ್ಯಂತ ರೋಮಾಂಚನಕಾರಿಯಾಗಿ ಗೆಲುವು ಸಾಧಿಸಿತು ಹಾಗೂ  13 ವರ್ಷಗಳ ನಂತರ ವಿಶ್ವಕಪ್ ಅನ್ನು ಕೈಯಲ್ಲಿ ಹಿಡಿದು ಬೀಗಿತು. 

ADVERTISEMENT

ಕೋಚ್ ಆಗಿ ತನ್ನ ಕಟ್ಟಕಡೆಯ ಪಂದ್ಯದಲ್ಲಿ  ತಂಡವನ್ನು ಗೆಲ್ಲಿಸಿಕೊಟ್ಟ ಅದಮ್ಯ ತೃಪ್ತಿ ದ್ರಾವಿಡ್ ಮುಖದಲ್ಲಿತ್ತು. ಟ್ರೋಫಿ ಹಿಡಿದು ಅವರು ಮಕ್ಕಳಂತೆ ಸಂಭ್ರಮಿಸಿದ ರೀತಿಯಂತೂ ಅತ್ಯಂತ ವಿಶಿಷ್ಟವಾಗಿತ್ತು. 

ಇಲ್ಲಿ ಕಲಿಯಬೇಕಾದ ಜೀವನದ ಅತಿ ದೊಡ್ಡ ಪಾಠವಿದೆ. ಸೋಲು ಕಲಿಸಿದಷ್ಟು ಪಾಠವನ್ನು ಗೆಲುವು ಕಲಿಸುವುದಿಲ್ಲ. ಒಂದು ಹಂತದಲ್ಲಿ ನಾವು ಸೋತಿರಬಹುದು ಆದರೆ ಬೇರೆ ಸ್ವರೂಪದಲ್ಲಿ ಗೆಲುವನ್ನು ಮತ್ತೆ ಕಾಣಬಹುದು. ಸೋಲು ನಮ್ಮನ್ನು ವಿನಯಶೀಲರನ್ನಾಗಿಸುತ್ತದೆ, ಎಲ್ಲಿ ಎಡವಿದ್ದೇವೆ ಎನ್ನುವುದರ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಡುತ್ತದೆ. ಹೆಚ್ಚಿನ ಪರಿಶ್ರಮಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳುವಂತೆ ಮಾಡುತ್ತದೆ. ಅದೇ ಗೆಲುವು ಸೃಷ್ಟಿಸುವ ಅಹಂಕಾರ ಮತ್ತೆ ನಮ್ಮನ್ನು ಸೋಲಿನೆಡೆಗೆ ತಳ್ಳುವ ಎಲ್ಲ ಅಪಾಯ ಇರುತ್ತದೆ. ನಾಯಕನಾಗಿ ತಾನು ಸಾಧಿಸಲಾಗದನ್ನು 17 ವರ್ಷಗಳ ನಂತರ ತರಬೇತುದಾರನಾಗಿ ಸಾಧಿಸಿದ ರಾಹುಲ್ ದ್ರಾವಿಡ್ ನಮ್ಮೆಲ್ಲರಿಗೂ ವಿಶೇಷ ಸ್ಫೂರ್ತಿಯ ಮಾದರಿಯಾಗುತ್ತಾರೆ, ನಿರಂತರವಾದ ಪರಿಶ್ರಮವಿದ್ದರೆ ಸಾಧನೆಗೆ ವಯಸ್ಸು ಮಿತಿಯಲ್ಲ ಎಂಬುದನ್ನು ಸಾರಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.