ಐನ್‌ಸ್ಟೀನ್ ಮಹಾನ್ ವಿಜ್ಞಾನಿಯಾಗಿ ಪ್ರಸಿದ್ಧಿ ಹೊಂದಿದ ದಿವಸಗಳಲ್ಲಿ ಅವರಿಗೆ ಅಪಾರವಾದ ಅಭಿಮಾನಿವರ್ಗ ಹುಟ್ಟಿಕೊಂಡಿತ್ತು. ಅವರೆಲ್ಲರೂ ಐನ್‌ಸ್ಟೀನ್‌ನ ಬಗ್ಗೆ ವಿಶೇಷವಾದ ರೀತಿಯಲ್ಲಿ ಯೋಚಿಸುತ್ತಿದ್ದರು. ಅದು ಎಷ್ಟೋ ವೇಳೆ ಐನ್‌ಸ್ಟೀನ್‌ರನ್ನು ಕಿರಿಕಿರಿಗೆ ಒಳಗು ಮಾಡುತ್ತಿದ್ದುದ್ದೂ ಹೌದು. ಅವರಿಗೆ ಖ್ಯಾತಿಯೊಂದಿಗೆ ತಾನು ಮುಟ್ಠಾಳನಾಗುತ್ತಿದ್ದೇನೆ ಎನ್ನಿಸಿದ್ದನ್ನು ‘ಒಬ್ಬ ಏನಾಗಿದ್ದಾನೆ ಮತ್ತು ಅವನ ಬಗ್ಗೆ ಇನ್ನೊಬ್ಬ ಏನನ್ನು ಯೋಚನೆ ಮಾಡುತ್ತಿದ್ದಾನೆ ಎನ್ನುವುದರ ನಡುವೆ ಅಂತರ ಅಪಾರವಾಗಿರುತ್ತದೆ’ ಎಂದು ಬರೆದುಕೊಂಡಿದ್ದಾರೆ ಕೂಡ.
ಐನ್‌ಸ್ಟೀನ್‌ರಿಗೆ ತಮ್ಮ ಬಗ್ಗೆ ಅಪಾರವಾದ ವಿಶ್ವಾಸವಿತ್ತು. ಮನುಷ್ಯನ ಪ್ರಯತ್ನಗಳಲ್ಲಿ ಅಪಾರವಾದ ಶ್ರದ್ಧೆ ಇತ್ತು, ಯಾವುದೂ ಮೇಲಿನಿಂದ ಸುಮ್ಮನೆ ಹಾಗೆ ದಕ್ಕುವುದಿಲ್ಲ ಮಳೆ ಬರಬೇಕಾದರೂ ಪ್ರಕೃತಿ ಜತನದಿಂದ ಒಂದಷ್ಟು ಪ್ರಕ್ರಿಯೆಯನ್ನು ನಡೆಸಿರುತ್ತದೆ ಎನ್ನುವ ನಂಬಿಕೆ ಅವರದ್ದಾಗಿತ್ತು.
ಇಂಥ ಐನ್‌ಸ್ಟೀನ್‌ನನ್ನು ಒಬ್ಬ, ‘ನಿಮ್ಮದು ದೈತ್ಯ ಪ್ರತಿಭೆ, ಇದು ನಿಮಗೆ ದಕ್ಕಿದ್ದು ದೈವ ಕೃಪೆ. ಜೊತೆಗೆ ನಿಮ್ಮ ತಂದೆಯ ವಿಜ್ಞಾನ ಪ್ರತಿಭೆ ಮತ್ತು ನಿಮ್ಮ ತಾಯಿಯ ಕಡೆಯಿಂದ ಸಂಗೀತ ಪ್ರತಿಭೆಯಿಂದಲೂ ಬಂದಿರಬಹುದಲ್ಲವೇ. ಇವೆಲ್ಲ ಆನುವಂಶಿಕವಾಗಿ ದೈವದತ್ತವಾಗಿ ಬಾರದೇ ಹೋದರೆ ಹೀಗೆ ನೀವು ಆಗುವುದು ಸಾಧ್ಯವೇ ಇರಲಿಲ್ಲ ಅಲ್ಲವೇ’ ಎಂದು ಪ್ರಶ್ನಿಸಿದ.
ಐನ್‌ಸ್ಟೀನ್ ದೀರ್ಘವಾದ ನಿಟ್ಟುಸಿರುಬಿಟ್ಟರು. ಶುದ್ಧ ಆಸ್ತಿಕರಾಗಿದ್ದ ಅವರು ಮಾಗಿದ ಮನಃಸ್ಥಿತಿಯಲ್ಲಿ, ‘ವೈಯಕ್ತಿಕವಾಗಿ ದೇವರ ಬಗೆಗಿನ ಭಾವನೆ ಮನಶಾಸ್ತ್ರೀಯ ಕಲ್ಪನೆ ಅನ್ನಿಸುತ್ತದೆ. ನಾನೇನೂ ಇದನ್ನು ಗಂಭೀರವಾಗಿ ಸ್ವೀಕರಿಸಲಾರೆ. ಮನುಷ್ಯನ ಪ್ರಜ್ಞೆಯ ಆಚೆಗೆ ಯಾವುದೋ ಶಕ್ತಿ ಮತ್ತು ಗುರಿ ಇದೆ ಎಂದು ನಾನು ಭಾವಿಸಲಾರೆ. ವಾಸ್ತವತೆ ಅಥವಾ ಅಸ್ತಿತ್ವದ ಕ್ರಮಬದ್ಧ ಸಾಂಗತ್ಯದಲ್ಲಿ ಪ್ರಕಾಶಿಸುವ ದೇವರನ್ನು ನಾನು ನಂಬುತ್ತೇನೆ. ಜನರ ಅದೃಷ್ಟದ ಬಗ್ಗೆ ಚಿಂತಿಸುವ ದೇವರನ್ನಲ್ಲ. ನನ್ನ ಪಾಲಿಗೆ ದೇವರೆಂದರೆ ಆತ್ಮಬಲ. ನನಗೆ ದಕ್ಕಿರುವ ಈ ಜ್ಞಾನ ನನ್ನ ಪ್ರಯತ್ನದಿಂದ ದಕ್ಕಿದ್ದು. ನೀವೆಲ್ಲ ಅಂದುಕೊಳ್ಳುವ ಹಾಗೆ ನನಗೆ ಯಾವ ವಿಶೇಷ ಪ್ರತಿಭೆಯೂ ಇಲ್ಲ. ನಾನು ಕಲಿಯಬಹುದಾದ ಎಲ್ಲ ಸಂಗತಿಗಳಲ್ಲೂ ಅತ್ಯಂತ ಕುತೂಹಲಿಯಾಗಿದ್ದೇನೆ. ಕಂಡಿದ್ದನ್ನು ಅತ್ಯಂತ ಜತನದಿಂದ ಚಿಂತನೆಗೆ ಹಚ್ಚುತ್ತೇನೆ. ಅಲ್ಲಿರುವ ಅವಕಾಶಗಳಲ್ಲಿ ನನಗೆ ಯಾವ ಸಂಗತಿಯನ್ನು ಬಿಟ್ಟುಕೊಡುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋಗುತ್ತೇನೆ. ಮೊದಲನೆಯದಾಗಿ ನಾನು ಕಾಣುತ್ತಿರುವ ಈ ಸಂಗತಿ ಆದ್ಭುತ ಎನ್ನುವುದನ್ನು ನಂಬುತ್ತೇನೆ. ಇದರಲ್ಲಿ ದೈವದತ್ತವಾದದ್ದು ಹಾಗೂ ಆನುವಂಶೀಯವಾದದ್ದು ಏನಿದೆ’ ಎಂದು ಕೇಳುತ್ತಾರೆ.
ಜಗತ್ತಿನ ಜೊತೆಗೆ ಕುತೂಹಲ, ಸ್ವಯಂ ಅನುಭವ ಹಾಗೂ ಸಮೀಪ ದರ್ಶನ ಐನ್‌ಸ್ಟೀನ್‌ರನ್ನು ದೊಡ್ಡವರನ್ನಾಗಿಸಿದ್ದು. ವಿಶ್ವದ ನಿಗೂಢತೆಯ ಎದುರು ಯಾರು ಕಣ್ಣರಳಿಸಿ ನಿಂತು ನೋಡುತ್ತಾರೋ, ಅಲ್ಲಿರುವ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಪ್ರಯತ್ನಿಸುತ್ತಾರೋ, ಆ ಸೌಂದರ್ಯಾನುಭೂತಿಯನ್ನು ಅನುಭವಿಸಲು ತೆರೆದ ಕಣ್ಣುಗಳಿಂದ ಕಾದಿರುತ್ತಾರೋ, ಅವರು ನಿಸ್ಸಂಶಯವಾಗಿ ಮಹತ್ತನ್ನು ನೀಡುತ್ತಾರೆ ಎನ್ನುವುದಕ್ಕೆ ಐನ್‌ಸ್ಟೀನ್‌ರಿಗಿಂತ ಸಾಕ್ಷಿ ಬೇಕೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.