ADVERTISEMENT

ನುಡಿ ಬೆಳಗು: ಮತ್ತೊಂದು ಅವಕಾಶ ಇಲ್ಲದ ಬದುಕು

ಕಲೀಮ್ ಉಲ್ಲಾ
Published 11 ಜೂನ್ 2024, 23:36 IST
Last Updated 11 ಜೂನ್ 2024, 23:36 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಮದೀನಾ ನಗರದಲ್ಲಿ ನಾನು ಇವನನ್ನು ಕಂಡೆ. ಎರಡೂ ಕಾಲಿಲ್ಲದ ಇವನ ಬಳಿ ಸ್ವಯಂಚಾಲಿತವಾಗಿ ತಿರುಗುವ ಗಾಲಿ ಕುರ್ಚಿಯಿತ್ತು. ಅದರ ಮೇಲೆ ಕೂತು ಇವನು ಭಿಕ್ಷೆ ಬೇಡುತ್ತಿದ್ದ. ಸಿಗರೇಟು ಸದಾ ಉರಿಯುತ್ತಿತ್ತು. ಕಣ್ಣು ನಿಗಿನಿಗಿ ಕೆಂಡ ಮಾಡಿಕೊಂಡು ಭಿಕ್ಷೆ ನೀಡುವ ಜನರನ್ನು ಕೆಕ್ಕರಿಸಿ ನೋಡುತ್ತಿದ್ದ. ಅವನ ಸಿಟ್ಟಿನ ಮುಖ ನನಗೆ ಅರ್ಥವೇ ಆಗಲಿಲ್ಲ. ನಾವು ನಿರ್ಗತಿಕನಿಂದ ಬಯಸುವ ಬೇಡುವ ಕಣ್ಣು, ಕುಗ್ಗಿಸಿಕೊಂಡ ದೇಹ, ದಯಾಮಯ ಮುಖದ ಚಹರೆ ಅವನಲ್ಲಿ ಕಾಣಲಿಲ್ಲ. ಹೀಗೆ ಎರಡು ಮೂರು ದಿನ ನೋಡುತ್ತಾ ಓಡಾಡಿದೆ.

ಒಂದು ದಿನ ಕುತೂಹಲಗೊಂಡು ಅವನನ್ನೇ ಕೆಲ ಹೊತ್ತು ನಿಂತು ನೋಡಿದ್ದಕ್ಕೆ ಗದರಿದ. ಕಫವ ಕ್ಯಾಕರಿಸಿ ನೆಲಕ್ಕೆ ತುಪ್ಪಿದ. ಅವನ ಆಕ್ರೋಶದ ವ್ಯಕ್ತಿತ್ವ ಕೊಂಚವೂ ಕಡಿಮೆಯಾಗಿರಲಿಲ್ಲ. ಎರಡು ರಿಯಾಲ್‌ ಅವನ ಜೋಳಿಗೆಗೆ ಹಾಕಿದೆ. ಬೇಗ ಮುಂದೆ ಹೋಗು ಎಂದು ಒರಟಾಗಿ, ತಾತ್ಸಾರದಿಂದ ಕೈ ತೋರಿದ. ಅವನ ಜೊತೆ ಮಾತಾಡುವುದು ಕೂಡ ಸಾಧ್ಯವಿರಲಿಲ್ಲ. ಆಗಾಗ ಆಗಸಕ್ಕೆ ಕೈ ಎತ್ತಿ, ಮೈ ಕೊಡವಿ, ನೋವಿನ ದನಿಯಲ್ಲಿ ಬೇಡಿಕೊಳ್ಳುತ್ತಿದ್ದ. ಎದುರಿನ ಭಿಕ್ಷಾ ಹರಿವಾಣದಲ್ಲಿ ನಾನಾ ದೇಶದ ನೋಟುಗಳು ಬಿದ್ದಿದ್ದವು.
ಜುಬ್ಬದ ಕಿಸೆ ಕೂಡ ದುಡ್ಡಿನಿಂದ ತುಳುಕುತ್ತಿತ್ತು. ಅಕ್ಕಪಕ್ಕದ ಅಂಗಡಿಯವರು ಅವನ ಬಳಿ ಬಂದು ಚಿಲ್ಲರೆ ಸಂಗ್ರಹಿಸಿಕೊಂಡು ಹೋಗುತ್ತಿದ್ದರು.

ADVERTISEMENT

ಭಿಕ್ಷೆ ಹಾಕುವ ಯಾವ ಜನರ ಬಗ್ಗೆಯೂ ಅವನಿಗೆ ಕನಿಷ್ಟ ಮಟ್ಟದ ಕೃತಜ್ಞತೆಯೂ ಇರಲಿಲ್ಲ. ಆತ ಸರ್ಕಾರದಿಂದ ಪರವಾನಗಿ ಪಡೆದ ಅಧಿಕೃತ ಭಿಕ್ಷುಕ ಎಂದು ಅಲ್ಲಿನ ಜನ ಹೇಳುತ್ತಿದ್ದರು. ಕೊರಳಲ್ಲಿ ಒಂದು ಗುರುತಿನ ಪತ್ರವೂ ನೇತಾಡುತ್ತಿತ್ತು. ಬಿಡಿಸದ ಒಗಟಾಗಿ, ಅಷ್ಟೇ ಅಚ್ಚರಿಯಾಗಿ ಕಾಡಿದ ಇವನ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಾಗುತ್ತಲೇ ಹೋಯಿತು. ನಾನು ಮಾತಾಡಲು ನಿಂತ ಐದು
ಸಲವೂ ಅವನು ಸಿಟ್ಟಿನ ಕಣ್ಣಿಂದ ತೊಲಗಾಚೆ ಎಂದು ಗದರಿಸುತ್ತಲೇ ಹೋದ.

ಪಕ್ಕದಲ್ಲೇ ಖರ್ಜೂರ ಮಾರುವ ಅಂಗಡಿ ಇತ್ತು. ಅವನ ಪರಿಚಯ ಗಿಟ್ಟಿಸಿಕೊಂಡೆ. ಆತ ಮ್ಯಾನ್ಮಾರ್‌ ದೇಶದವನು. ಅವನಲ್ಲಿ ಈತನ ಕಥೆ ಏನು ಎಂದು ಕೇಳಿದೆ. ಒಂದು ದಿನ ಇವನು ಕಳ್ಳತನ ಮಾಡಿ ಓಡುತ್ತಿದ್ದ. ಪೋಲೀಸರು ಬೆನ್ನುಹತ್ತಿ ಮಾಲು ಸಮೇತ ಇವನ ಹಿಡಿದರು. ಇಲ್ಲಿ ಕಳ್ಳತನ ಮಾಡುವುದು ಅಕ್ಷಮ್ಯ ಅಪರಾಧ ಎಂಬುದು ನಿಮಗೆ ಗೊತ್ತಲ್ಲ. ಶಿಕ್ಷೆಯ ರೂಪದಲ್ಲಿ ಇವನ ಎರಡೂ ಕಾಲು
ಕತ್ತರಿಸಿದರು. ಭಿಕ್ಷೆ ಬೇಡುವುದು ಕೂಡ ಇಲ್ಲಿ ಅಪರಾಧ. ಆದರೆ ಇಂತಹ ಕೆಲವರಿಗೆ ಪಶ್ಚಾತ್ತಾಪ ಅನುಭವಿಸಲು, ಬೇರೆಯವರನ್ನು  ನೋಡಿ ಪಾಠ ಕಲಿಯಲು ಮಾದರಿಯಾಗಿ ಸರ್ಕಾರ ಹೀಗೆ ನಿಲ್ಲಿಸುತ್ತದೆ ಎಂದ.

ಸ್ವಂತ ಕಾಲು ಬಳಸಿ ಓಡಾಡುವ ಜನರನ್ನು ಕಂಡರೆ ಅವನಿಗೆ ಉರಿ. ಜನರ ಕನಿಕರದ ದುಡ್ಡು ಬಂದು ಬೀಳುತ್ತಿದ್ದರೆ ಸಂಕಟ. ಹೆಚ್ಚು ಹಣ ಗಳಿಸಿ ಈಗ ಏನು ಉಪಯೋಗ. ಪರರ ಸೊತ್ತಿನ ಮೇಲಿನ ವ್ಯಾಮೋಹವೇ ಬತ್ತಿ ಹೋಗಿದೆ. ಮಾಡಿದ ತಪ್ಪಿಗೆ ಅಧಿಕ ಶಿಕ್ಷೆ ಸಿಕ್ಕಿದೆ. ಪಶ್ಚಾತ್ತಾಪ ದಿನವೂ ನಡೆಯುತ್ತಿದೆ. ಕಳೆದುಕೊಂಡ ಬದುಕು ಮತ್ತೆ ಮೊದಲಿನಂತಾಗದು. ತನ್ನ ದೇಶ, ತನ್ನೂರು, ತನ್ನ ಕುಟುಂಬದವರ ನೆನಪು ಕ್ಷಣಕ್ಷಣವೂ ಭಾದಿಸುತ್ತಿದೆ. ಒಂದು ಕ್ಷಣದ ದುರಾಸೆಯ ಆ ಒಂದು ತಪ್ಪು ಮಾಡಿರದಿದ್ದರೆ ಎಂಬ ವಾಕ್ಯ ಎಷ್ಟು ಸಲ ಅವನೊಳಗೆ ಸುರುಳಿಯಾಗಿ ಸುತ್ತುತ್ತಿರಬಹುದು. ಬದುಕು ಕೆಲವೊಮ್ಮೆ ತಿದ್ದಿಕೊಳ್ಳುವ ಅವಕಾಶವನ್ನೂ ಕೊಡುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.