ADVERTISEMENT

ನುಡಿ ಬೆಳಗು: ಅನ್ನದಾತನ ಜ್ಞಾನ ಸಂಗತಿಗಳು

ಕಲೀಮ್ ಉಲ್ಲಾ
Published 1 ಮೇ 2024, 0:47 IST
Last Updated 1 ಮೇ 2024, 0:47 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಅವರು ಪಟ್ಟಣದ ರಸ್ತೆ ಬದಿಯ ಟೀ ಅಂಗಡಿಯಲ್ಲಿ ಚಾ ಕುಡಿಯುತ್ತಿದ್ದರು. ಪಕ್ಕದಲ್ಲೇ ದೊಡ್ಡ ಚರಂಡಿ ಹರಿಯುತ್ತಿತ್ತು. ಅದರ ಬದಿಯಲ್ಲೇ ಕಾಂಕ್ರೀಟಿನ ಇಕ್ಕಟ್ಟಿನಲ್ಲಿ ಎತ್ತರಕ್ಕೆ ಬೆಳೆದ ನೂರು ವರ್ಷದ ತೆಂಗಿನ ಮರವಿತ್ತು. ಮರವನ್ನೊಮ್ಮೆ ಕತ್ತೆತ್ತಿ ನೋಡಿದರು, ಅದರ ತುಂಬಾ ತೆಂಗು ರಾಶಿ ರಾಶಿ ತೂಗುತ್ತಿದ್ದವು. ನಮ್ಮ ತೋಟದ ತೆಂಗಿನ ಮರಗಳಿಗೆ ಏನು ಬಂದಿದೆ ರೋಗ. ಅಷ್ಟೊಂದು ಫಲವತ್ತಾದ ಮಣ್ಣು ಗೊಬ್ಬರ, ನೀರು ಎಲ್ಲಾ ಕೊಟ್ಟರೂ ಇಷ್ಟೊಂದು ಫಲ ಬಿಡುವು ದಿಲ್ಲವಲ್ಲ. ಯಾವ ಆರೈಕೆಯೂ ಇಲ್ಲದ ಈ ಮರ ಅದು ಹೇಗೆ ಇಷ್ಟೊಂದು ಸಮೃದ್ಧವಾಗಿ ಬೆಳೆಯುತ್ತಿದೆ. ಜೊತೆಗೆ ಅಸಂಖ್ಯಾತ ಫಲಗಳ ಫಸಲು ಕೊಡುತ್ತಿದೆ ಎಂದು ಚಿಂತಿಸಿದರು. ಈ ಚರಂಡಿಯ ಕೊಳಚೆ ನೀರೇ ಇದಕ್ಕೆ ಮುಖ್ಯ ಪ್ರಾಣ ಧಾತು ಆಗಿರಬಹುದೇ ಎಂದೂ ಯೋಚಿಸಿದರು.

ತಮ್ಮ ತೋಟಕ್ಕೆ ಹೋಗಿ ಘನ ಗೊಬ್ಬರ ಕೊಡುವ ಪದ್ಧತಿ ನಿಲ್ಲಿಸಿದರು. ಬದಲಿಗೆ ಎಲ್ಲಾ ಪೋಷಕಾಂಶ ಗಳನ್ನೂ ದ್ರವದ ರೂಪದಲ್ಲಿ ತೆಂಗಿನ ಮರಗಳಿಗೆ ಉಣಿಸಿದರು. ಎರಡು ವರ್ಷಗಳಲ್ಲಿ ಈ ಪ್ರಯೋಗ ಯಶಸ್ಸು ಕಂಡಿತು. ತೆಂಗಿನ ಮರಗಳ ಫಸಲು ಮೊದಲಿಗಿಂತ ಅಧಿಕ ಇಳುವರಿ ನೀಡತೊಡಗಿದವು.

ADVERTISEMENT

ಮತ್ತೊಂದು ದಿನ ತೆಂಗಿಗೆ ಮಂಗಗಳ ಕಾಟ ಅತಿಯಾದಾಗ ಮನೆಯಲ್ಲಿದ್ದ ಬಂದೂಕು ತಂದು ಗಾಳಿಯಲ್ಲಿ ಗುಂಡು ಹಾರಿಸಿದರು. ಆಗ ಒಂದು ಮಂಗದ ಕಾಲಿಗೆ ಪೆಟ್ಟಾಯಿತು. ರಕ್ತ ಸೋರ ತೊಡಗಿತು. ಅದು ಕಿರುಚುತ್ತಾ ಮರದಿಂದ ಮರಕ್ಕೆ ನೆಗೆದು ಓಡ ತೊಡಗಿತು. ಅದು ಪೆಟ್ಟಾದ ತನ್ನ ಗಾಯಕ್ಕೆ ಏನು ಚಿಕಿತ್ಸೆ ಮಾಡಿಕೊಳ್ಳಬಹುದೆಂಬ ಕುತೂಹಲ ಇವರಲ್ಲಿ ಹುಟ್ಟಿತು. ಅದೇ ಸಮಯಕ್ಕೆ ತಮ್ಮ ಬಲಕಿವಿಯ ಭಾಗದಲ್ಲೂ ರಕ್ತ ಸೋರುವ ಸಂಗತಿ ಇವರ ಅರಿವಿಗೆ ಬಂತು. ಮಂಗನಿಗೆ ಗುಂಡು ಹಾರಿಸುವ ಸಂದರ್ಭದಲ್ಲಿ ಅದರ ಚರೆಗಳು ಹಾರಿ ಇವರ ಕಿವಿಗೂ ಗಾಯವಾಗಿತ್ತು. ಮಂಗ ಮುಂದೆ ಏನು ಮಾಡಬಹುದೆಂಬ ಕುತೂಹಲದಲ್ಲಿ ಅದನ್ನೇ ಹಿಂಬಾಲಿಸಿದರು.

ಮುಂದೆ ಸಾಗಿ ನೋಡಿದಾಗ ಮಂಗ ಒಂದು ಬಳ್ಳಿಯ ಸೊಪ್ಪನ್ನು ತರಿದು ತಿನ್ನುತ್ತಿತ್ತು. ಬಾಯ ತುಂಬಾ ಸೊಪ್ಪನ್ನು ಜಗಿದ ನಂತರ ಅದನ್ನು ಹೊರ ತೆಗೆದು ತನ್ನ ಅಂಗೈಯಲ್ಲಿ ಇಟ್ಟುಕೊಳ್ಳುವುದನ್ನು ಇವರು ನೋಡಿದರು. ಅಚ್ಚರಿ ಹೆಚ್ಚಾಗಿ ಮುಂದೆ ಗಮನಿಸಿದಾಗ ಆ ಮಂಗ ಆ ನುರಿದ ಸೊಪ್ಪನ್ನು ತನ್ನ ಗಾಯಕ್ಕೆ ಹಚ್ಚಿಕೊ ಳ್ಳುತ್ತಿತ್ತು. ನಂತರ ಅದೇ ಸೊಪ್ಪನ್ನು ಇವರೂ ಮನೆಗೆ ತಂದು ರಸ ಹಿಂಡಿ ತಮ್ಮ ಗಾಯಕ್ಕೆ ಸವರಿಕೊಂಡರು. ಕಿವಿಗಾದ ಗಾಯ ಮತ್ತು ನೋವು ಒಂದೇ ದಿನದಲ್ಲಿ ವಾಸಿಯಾಗಿತ್ತು.

ತಮ್ಮ ಈ ಅನುಭವಗಳನ್ನು ನನಗೆ ಹೇಳಿದ್ದು ಒಬ್ಬ ಪ್ರಗತಿಪರ ರೈತರು. ಅವರು ಹೆಚ್ಚು ಓದಿದವರಲ್ಲ. ಹೀಗೆ ಪ್ರಕೃತಿಯನ್ನು ನೋಡುತ್ತಾ, ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಾ ಅನೇಕ ಪ್ರಯೋಗಗಳನ್ನು ಮಾಡಿದವರು. ಆ ಮೂಲಕ ಒಂದಿಷ್ಟು ತಮ್ಮದೇ ಹೊಸ ಜ್ಞಾನಶೈಲಿ ಹುಡುಕಿಕೊಂಡವರು. ಈ ಬಗೆಯ ನೈಪುಣ್ಯ ಗಳಿಸಿದ ಸಾವಿರಾರು ಉಳುವ ಯೋಗಿಗಳು ನಮ್ಮ ನಡುವೆ ಇದ್ದಾರೆ. ಹೆಚ್ಚು ಕಲಿತು ಡಿಗ್ರಿಗಳ ಇಟ್ಟುಕೊಂಡ ನಾವು ಮಾತ್ರ ಜಾಣರೆಂಬ ಸುಳ್ಳು ಭ್ರಮೆ ನಮಗಿದೆ. ನಿಸರ್ಗದ ಸಂಗಡ ದಿನವೂ ಮಾತನಾಡುವ, ಮಳೆ, ಬೆಳೆಗಳ ಬಗ್ಗೆ ಅಪಾರ ಜ್ಞಾನ ಗಳಿಸಿರುವ ಹಳ್ಳಿ ಬದುಕಿನ ಅನುಭವ ಲೋಕವೆಂದರೆ ನಮಗೆ ಅಸಡ್ಡೆ. ವಿಜ್ಞಾನಿಗಳಂತೆ ಪ್ರಯೋಗ ಮಾಡುವ, ಸೋತು ಗೆದ್ದು ಹೊಸ ಮಾಹಿತಿ ಪಡೆಯುವ ರೈತರ ಕ್ರಿಯಾಶೀಲತೆ ಮತ್ತು ವಿವೇಕಗಳೇ ನಮ್ಮ ಅನ್ನದ ರೂಪಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.