ADVERTISEMENT

ನುಡಿ ಬೆಳಗು: ಅಹಂ ಇಳಿಸಿದ ತಾಯಿ

ಪಿ. ಚಂದ್ರಿಕಾ
Published 25 ಡಿಸೆಂಬರ್ 2023, 19:35 IST
Last Updated 25 ಡಿಸೆಂಬರ್ 2023, 19:35 IST
ನುಡಿ ಬೆಳಗು
ನುಡಿ ಬೆಳಗು   

ಯುವಕನೊಬ್ಬನಿಗೆ ತುಂಬಾ ಒಳ್ಳೆಯ ಕೆಲಸ ಸಿಕ್ಕಿತು. ಅವನಿಗೆ ತಾನು ತುಂಬಾ ಸಾಧಿಸಿದ್ದೇನೆ ತನಗಿಂತ ಇನ್ನು ಸಾಧನೆ ಮಾಡುವವರು ಯಾರೂ ಇಲ್ಲ ಎನ್ನಿಸಿ ಅಹಂ ತಲೆ ಎತ್ತಿತು. ಎಲ್ಲಿ ಹೋದರೂ, ‘ನಾನು, ನಾನು’ ಎನ್ನಲಿಕ್ಕೆ ಆರಂಭಿಸಿದ. ಅದನ್ನು ಗಮನಿಸುತ್ತಿದ್ದ ತಾಯಿ ಇವನಿಗೆ ಹೇಗಾದರೂ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದಳು.

ಒಮ್ಮೆ ತಾಯಿ ಯುವಕನನ್ನು ಕರೆದು, ‘ಮಗೂ ನಾನು ನಿನ್ನ ಪ್ರೀತಿಯ ಮೀನಿನ ಸಾರು ಮಾಡಬೇಕು ಅಂತಿದ್ದೇನೆ. ವಯಸ್ಸಾದ ಕಾರಣ ಒಬ್ಬಳೇ ಹೋಗಲಾರೆ, ನನ್ನ ಜೊತೆ ಕೆರೆಯ ಬಳಿಗೆ ಬಾ, ಇಬ್ಬರೂ  ಮೀನುಗಳನ್ನು ಹಿಡಿದು ತರೋಣ’ ಎಂದಳು.

ಆ ಯುವಕ ತಾಜಾ ಮೀನಿನ ಸಾರಿನ ಆಸೆಗೆ ಹೊರಟ. ಕೆರೆಯ ದಡದಲ್ಲಿ ಕುಳಿತು ಗಾಳ ಹಾಕಿದ ತಾಯಿ ಸಿಕ್ಕ ಚಿಕ್ಕ ಚಿಕ್ಕ ಮೀನುಗಳನ್ನೆಲ್ಲ ತೆಗೆದು ಮತ್ತೆ ಕೆರೆಗೆ ಎಸೆಯ ತೊಡಗಿದಳು. ನೋಡುತ್ತಿದ್ದ ಯುವಕನಿಗೆ ಬೇಸರ ಆಗತೊಡಗಿತು. ‘ಅಮ್ಮ ನೀನು ಹೀಗೆ ಸಿಕ್ಕ ಮೀನುಗಳನ್ನೆಲ್ಲಾ ಎಸೆಯುತ್ತಿದ್ದರೆ ಹೇಗೆ’ ಎಂದು ಪ್ರಶ್ನಿಸಿದ.

ADVERTISEMENT

ಅದಕ್ಕೆ ತಾಯಿ, ‘ದೊಡ್ಡ ಮೀನು ಸಿಗಲಿ ಇರು ಮಗನೆ’ ಎಂದಳು. ಅದಕ್ಕೆ ಯುವಕ, ‘ಚಿಕ್ಕ ಮೀನು ತಿನ್ನಲಿಕ್ಕೆ ರುಚಿ ಮತ್ತು ನನಗೆ ಅದು ಪ್ರಿಯವೆಂದು ನಿನಗೂ ಗೊತ್ತಿದೆ. ಹಾಗಿದ್ದ ಮೇಲೂ ವಾಪಸ್‌ ಬಿಡುವುದು ಮೂರ್ಖತನವಲ್ಲವೇ?’ ಎಂದನು.

ಅದಕ್ಕೆ ತಾಯಿ, ‘ಮಗನೆ ಇಷ್ಟು ದಿನ ಸಮಾಜದಲ್ಲಿ ನನ್ನ ಮಗ ಅಂತ ಇತ್ತು. ಆಗ ಚಿಕ್ಕ ಮೀನುಗಳನ್ನು ತಂದು ಬೇಯಿಸುತ್ತಿದ್ದೆ. ನೀನು ಇಷ್ಟಪಟ್ಟು ತಿನ್ನುತ್ತಿದ್ದೆ. ಈಗ ಹಾಗಲ್ಲ ನಿನ್ನ ಯೋಗ್ಯತೆ ದೊಡ್ಡದಾಗಿದೆ. ದೊಡ್ಡ ಕೆಲಸದಿಂದ ನಿನ್ನ ಘನತೆ ದೊಡ್ಡದಾಗಿದೆ. ಅದಕ್ಕೆ ತಕ್ಕುದಾದ ಮೀನು ಸಿಗುವ ವರೆಗೂ ನಾನು ಕಾಯುತ್ತೇನೆ’ ಎನ್ನುತ್ತಾ ಮತ್ತೆ ಗಾಳ ಎಸೆದಳು. 

ಯುವಕನಿಗೆ ತನ್ನ ತಪ್ಪು ಅರ್ಥವಾಯಿತು. ತಾಯಿಯ ಎದುರು ಕಣ್ಣೀರಾಗುತ್ತಾ ಅಮ್ಮ ನಾನು ಇನ್ನೆಂದೂ ಅಹಂನ ಮಾತಾಡುವುದಿಲ್ಲ ಎಂದನು. ಆಗ ತಾಯಿ, ‘ಜೀವನದಲ್ಲಿ ಸಾಧಿಸಲಿಕ್ಕೆ ನಿನಗೆ ಇನ್ನೂ ಇದೆ. ಕೆಲಸ ಸಿಕ್ಕಿದ್ದು ಬರಿಯ ಒಂದು ಹಂತ ಮಾತ್ರ. ಅಹಂಕಾರ ನಿನ್ನನ್ನು ಬೆಳೆಯಗೊಡುವುದಿಲ್ಲ. ಅದೊಂದನ್ನು ಮಾತ್ರ ಬೆಳೆಸಿಕೊಳ್ಳಬೇಡ’ ಎಂದಳು. ತಾಯಿಯ ಮಾತನ್ನು ಅವನು ಯಾವತ್ತೂ ಮರೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.