ADVERTISEMENT

ನುಡಿ ಬೆಳಗು: ಅತಿಯಾದ ನಂಬಿಕೆಯಿಡುವ ಮುನ್ನ

ದೀಪಾ ಹಿರೇಗುತ್ತಿ
Published 17 ಜನವರಿ 2024, 22:08 IST
Last Updated 17 ಜನವರಿ 2024, 22:08 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಒಬ್ಬಳು ಯುವತಿಗೆ ಹಾವುಗಳೆಂದರೆ ಬಹಳ ಇಷ್ಟ. ಆಕೆ ಸಾಕಿದ್ದ ಪ್ರಾಣಿ ಯಾವುದೆಂದರೆ ಒಂದು ಹೆಬ್ಬಾವು. ಆ ಹೆಬ್ಬಾವೆಂದರೆ ಆಕೆಗೆ ಬಹು ಪ್ರೀತಿ. ಏಳು ಅಡಿ ಉದ್ದದ ಆ ಹಾವು ಒಂದು ದಿನ ಇದ್ದಕ್ಕಿದ್ದಂತೆಯೇ ತಿನ್ನುವುದನ್ನು ನಿಲ್ಲಿಸಿಬಿಟ್ಟಿತು. ಯುವತಿ ಎಷ್ಟೇ ಪ್ರಯತ್ನ ಪಟ್ಟರೂ ಏನನ್ನೂ ಅದು ತಿನ್ನಲಿಲ್ಲ. ಹಲವು ದಿನಗಳೇ ಕಳೆದವು. ಆದರೂ ಅದು ಏನನ್ನೂ ಮುಟ್ಟದೇ ಇದ್ದಾಗ ಗಾಬರಿಯಾದ ಯುವತಿ ಪಶುವೈದ್ಯರ ಹತ್ತಿರ ಅದನ್ನು ತೆಗೆದುಕೊಂಡು ಹೋದಳು.

ಕೆಲವು ದಿನಗಳಿಂದ ಏನೂ ತಿನ್ನುತ್ತಿಲ್ಲ ಎಂದಾಗ ವೈದ್ಯರು, ‘ದಿನವೂ ರಾತ್ರಿ ಹಾವು ನಿಮ್ಮ ಜತೆಯೇ ಮಲಗುತ್ತದೆಯೇ?’ ಎಂದು ಕೇಳಿದರು. ಈಕೆ ಹೌದೆಂದಳು. ‘ಮಲಗಿದಾಗ ನಿಮ್ಮ ಹತ್ತಿರ ಬಂದು ತನ್ನನ್ನು ತಾನು ಎಳೆದುಕೊಂಡಂತೆ ಮಾಡುತ್ತದೆಯೇ’ ಎಂದರು. ಈಕೆ ‘ಹೌದು, ಹಸಿವಾಗಿ ನಿದ್ದೆ ಬಾರದೇ ಹಾಗೆ ಒದ್ದಾಡುತ್ತದೆ, ಪಾಪ ಅದರ ಪರಿಸ್ಥಿತಿ ನೋಡಿ ಬೇಸರವಾಗುತ್ತದೆ’ ಎಂದಳು.

ADVERTISEMENT

ಆಗ ವೈದ್ಯರು ಮುಗುಳ್ನಕ್ಕು ಹೇಳಿದರು, ‘ಮೇಡಂ, ನಿಮ್ಮ ಹಾವು ಕಾಯಿಲೆ ಬಿದ್ದಿಲ್ಲ. ಅದು ನಿಮ್ಮನ್ನು ನುಂಗಲು ತಯಾರಿ ನಡೆಸುತ್ತಿದೆ. ಪ್ರತೀ ದಿನವೂ ನಿಮ್ಮ ಗಾತ್ರವನ್ನು ಅಳೆಯುತ್ತಿದೆ. ನಿಮ್ಮನ್ನು ನುಂಗಿದಾಗ ಜೀರ್ಣಿಸಿಕೊಳ್ಳಲು ಜಾಗ ಬೇಕಲ್ಲ, ಹಾಗಾಗಿ ಅದು ಏನನ್ನೂ ತಿನ್ನುತ್ತಿಲ್ಲ. ಹುಶಾರಾಗಿರಿ. ಮೊದಲು ಹೋಗಿ ಯಾವುದಾದರೂ ಪ್ರಾಣಿಸಂಗ್ರಹಾಲಯಕ್ಕೆ ಅದನ್ನು ಕೊಟ್ಟು ಬನ್ನಿ’ ಎಂದರು.

ಈ ಹಾವಿನಂಥ ವ್ಯಕ್ತಿತ್ವದವರು ಬಹು ಅಪಾಯಕಾರಿ. ಹತ್ತಿರದವರೆಂದು ನಟಿಸುತ್ತ ಸೂಕ್ತ ಸಮಯ ಬಂದಾಗ ನುಂಗಲು ಕಾದಿರುವ ಇಂಥವರ ಬಗ್ಗೆ ಬಹು ಎಚ್ಚರಿಕೆಯಿಂದ ಇರಬೇಕು. ಜತೆಯಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದವರಿಂದ ಎಂಥೆಂಥ ಮಹಾನ್‌ ವ್ಯಕ್ತಿಗಳು ನೆಲ ಕಚ್ಚಿದ್ದಾರೆ ಎನ್ನುವುದು ಇತಿಹಾಸ ನಮಗೆ ಕಲಿಸಿದ ಪಾಠಗಳಲ್ಲೊಂದು. ಇತಿಹಾಸದ ದಿಕ್ಕನ್ನೇ ಇಂತಹ ವ್ಯಕ್ತಿಗಳು
ಬದಲಾಯಿಸಿದ್ದಾರೆ ಎಂದರೆ ಸಾಮಾನ್ಯರು ಯಾವ ಲೆಕ್ಕ? ಹಾಗೆಂದು ಮನುಷ್ಯ ಮನುಷ್ಯರ ನಡುವೆ ನಂಬಿಕೆಯೇ ಇರಬಾರದೇ?ಒಬ್ಬರನ್ನೊಬ್ಬರು ನಂಬದಿದ್ದರೆ ಬದುಕಲಾದೀತೇ ಎಂಬೆಲ್ಲ ಪ್ರಶ್ನೆಗಳು ಹುಟ್ಟುತ್ತವೆ. ಅದೂ ನಿಜವೇ. ಜಗತ್ತು ನಿಂತಿರುವುದೇ ನಂಬಿಕೆಯ ಮೇಲೆ. ಹೇಗೆ ಒಬ್ಬರು ತಪ್ಪಿತಸ್ಥರು ಎಂಬುದನ್ನು ತತ್‌ಕ್ಷಣ ತೀರ್ಮಾನಿಸಲಾಗದೋ ಅದೇ ರೀತಿ ನಂಬಿಕಸ್ಥರೆಂದು ಒಪ್ಪಿಕೊಳ್ಳಲೂ ಸಮಯ ಬೇಕಾಗುತ್ತದೆ. ಸ್ನೇಹ ಸಂಬಂಧಗಳಲ್ಲಿ ಸಲಿಗೆ ಒಂದು ಹಂತ ಮೀರದಂತೆ ಪುಟ್ಟ ಚೌಕಟ್ಟು, ಒಂದಿಷ್ಟುಸ್ಪಷ್ಟತೆ ಇಟ್ಟುಕೊಂಡು ಎಚ್ಚರಿಕೆಯಿಂದಿರುವುದು ಬಹುಮುಖ್ಯ. ಅತಿಯಾದ ನಂಬಿಕೆ, ಅತಿಯಾದ ಅನುಮಾನ ಎರಡೂ ಅತಿಗಳಿಂದ ದೂರವಿರುವುದೇ ಜಾಣತನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.