ADVERTISEMENT

ನುಡಿ ಬೆಳಗು - 48 | ಬಂಡಿ ಜೊತೆ ಬಂದ ನಾಯಿ!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 21 ಅಕ್ಟೋಬರ್ 2024, 0:09 IST
Last Updated 21 ಅಕ್ಟೋಬರ್ 2024, 0:09 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಒಂದು ಗಡಿಗೆ ಇತ್ತು. ಅದನ್ನು ಒಬ್ಬ ಖರೀದಿ ಮಾಡಿದ. ಖರೀದಿ ಮಾಡೋದಕ್ಕಿಂತ ಮೊದಲು ಕುಂಬಾರ ಅದರ ಮಾಲೀಕ ಆಗಿದ್ದ. ಖರೀದಿ ಮಾಡಿದ ನಂತರ ಇವ ಮಾಲೀಕ ಆದ. ಗಡಿಗೆಗೆ ಗೊಂದಲ ಆತು. ಆಗ ಅವ ಮಾಲೀಕ, ಈಗ ಇವ ಮಾಲೀಕ ಅಂತಾನ. ನಿಜವಾದ ಮಾಲೀಕ ಯಾರು ಅಂತ. ಅವಾಗ ಭೂಮಿ ತಾಯಿ ಹೇಳಿತಂತೆ, ‘ನಾನು ನಿಜವಾಗಿ ನಿನ್ನ ಮಾಲೀಕ. ನಾನೇ ಇಲ್ಲ ಅಂದರ ನಿನ್ನ ನಿರ್ಮಾಣ ಹ್ಯಾಗ್ ಆಗುತ್ತಿತ್ತು’ ಎಂದು.  ಸಾರ್ವತ್ರಿಕ ಸತ್ಯ ಯಾವುದು ಅಂದರ, ಯಾವುದೇ ಕಾರ್ಯ ಘಟಿಸಬೇಕಾದರೆ ಆ ಕಾರ್ಯದ ಹಿಂದ ಒಂದು ಕಾರಣ ಇರ್ಬೇಕು. ಕಾರಣ ಇಲ್ಲದೆ ಏನೂ ಆಗುವಲ್ದು. ಮಣ್ಣಿಲ್ಲದೆ ಗಡಿಗೆ ಇಲ್ಲ. ಇದು ಕಾರ್ಯಕಾರಣ ಮೀಮಾಂಸೆ. ಅದಕ್ಕೆ ನಾವಿದ್ದೀವಿ, ಜಗತ್ತು ಇದೆ ಅಂದರ ಅದೆಲ್ಲಾ ಅವನ ಕೃಪೆ. ಇದು ನಿನ್ನ ಕೃಪೆ ಅಂತ ಬಾಗೋದು. ಎಲ್ಲ
ನನ್ನಿಂದ ಅಂದುಕೊಂಡಿದ್ದರಿಂದ ನಮಗ ತಾಪ ಬಹಳ ಆಗೈತಿ.

ಹಳ್ಳಿಯಾಗ ರೈತರು ಬಂಡಿ ಹೊಡಕಂಡು ಬರ್ತಿರ್ತಾರ. ಎತ್ತುಗಳ ಜೊತೆಗೆ ನಾಯಿನೂ ಬರ್ತಾ ಇರ್ತೈತಿ. ಎತ್ತಿನ ಜೋಡಿನೇ ಓಡಿ ಓಡಿ ಮನೆಗೆ ಬರುತೈತಿ. ಆಗ ಮನೆಯಲ್ಲಿದ್ದ ಆಕಳು ನಾಯಿಗೆ, ‘ಅಲ್ಲೋ ದೋಸ್ತ, ಯಾಕಷ್ಟು ತೇಕಾಕತ್ತೀಯಲ್ಲ’ ಅಂತ ಕೇಳ್ತು. ‘ಇದೇನು ಯಾಕಷ್ಟು ತೇಕಾಕತ್ತೀಯಲ್ಲ ಅಂತಾ ಕೇಳ್ತೀಯಲ್ಲ. ಹೊಲದಿಂದ ಬಂಡಿ ಹೊತ್ಕೊಂಡು ಬಂದೀನಿ ನಾನು’ ಅಂತು ನಾಯಿ. 

ADVERTISEMENT

ಬಂಡಿ ಹೊತ್ಕಂಡು ಬಂದಿದ್ದು ಎತ್ತುಗಳು. ನಾಯಿ ಬಂಡಿ ಜೊತೆ ಓಡಿ ಬಂದಿತ್ತು ಅಷ್ಟೆ. ಆದರೆ ಓಡಿ ಬಂದಿದ್ದಕ್ಕೇ ಅದು ತಾನೇ ಬಂಡಿ ಹೊತ್ಕಂಡು ಬಂದೀನಿ ಅಂತ ತಿಳಕಂಡಿತ್ತು. ಹಾಂಗೇನೆ, ನಿಮಗೂ ಮನೆ ನಾನೇ ಹೊತ್ತೀನಿ ಅಂತ ಅನಸ್ತಿರತೈತಿ. ಮಠನ ನಾನೇ ಹೊತ್ತುಕೊಂಡೇನಿ ಅಂತ ನಾ ಅಂದುಕೊಂಡೇನಿ. ಆದರೆ ನಾವೆಲ್ಲ ಬಂಡಿ ಬುಡಕಿನ ನಾಯಿಗಳು ಅಷ್ಟೆ. ಹೊತ್ತವನೆ ಬ್ಯಾರೆ ಅದಾನೆ. ಮನುಷ್ಯ ಯಾತ್ರಿಕನಂತೆ ಬದುಕಬೇಕು. ಇಲ್ಲಿಗೆ ಬರುವಾಗ ಏನನ್ನೂ ತರಲಿಲ್ಲ. ಹೋಗುವಾಗ ಏನೂ ಒಯ್ಯುವುದಿಲ್ಲ. ಇರುವಾಗ ಚಂದ ಇರೋದು ಅಷ್ಟೆ.

ರವೀಂದ್ರನಾಥ ಟಾಗೋರರು ‘ಭಗವಂತ, ನೀನು ಎಷ್ಟು ಕೃಪೆ ಮಾಡಿಯಪ್ಪ ನನ್ನ ಮ್ಯಾಲ, ಈ ಜಗತ್ತು ಇದೆಯಲ್ಲ ಇದು ನಿನ್ನ ದಿವ್ಯೋತ್ಸವ. ಈ ಜಾತ್ರೆ ನೋಡಲು ನನಗೆ ಆಹ್ವಾನ ಕೊಟ್ಟಿದ್ದೀಯ’ ಎಂದು ಬರೀತಾರ. ನಮ್ಮ ಜಾತ್ರೆಯಲ್ಲಿ ಹಚ್ಚಿದ ದೀಪ ಆರತಾವ, ಆದರೆ ದೇವರ ಜಾತ್ರೆಯಲ್ಲಿ ಹಚ್ಚಿದ ದೀಪ ಆರೋದಿಲ್ಲ. ನಮ್ಮ ಜಾತ್ರೆಯಲ್ಲಿ ದಿನಕ್ಕೆ ಒಂದು ಲಕ್ಷ ಮಂದಿ ಊಟ ಮಾಡಿದರೆ ಅಷ್ಟಕ್ಕೆ ನಾವು ನಿತ್ಯ ದಾಸೋಹಿ ಅನ್ಕೋತೀವಿ. ಆದರೆ ದೇವರ ಜಾತ್ರೆಯಲ್ಲಿ ಕೋಟಿ ಕೋಟಿ ಜೀವರಾಶಿಗಳಿಗೆ ಹೊಟ್ಟೆ ತುಂಬಾ ಊಟ ಹಾಕ್ತಾನ. ನಾವು ಅವನ ಜಾತ್ರೆ ನೋಡಲು ಬಂದವರು. ಹೀಗೆ ಬಂದವರು ಅತಿಥಿಗಳಾಗಿರಬೇಕು ಅಷ್ಟೆ. ನಾವು ಇಲ್ಲಿ ಕಾಯಂ ಇರೋಕೆ ಬಂದಿಲ್ಲ ಮತ್ತು ಏನನ್ನೂ ಒಯ್ಯಂಗಿಲ್ಲ.

ನೀವು ಹಂಪಿ ನೋಡಾಕ ಹೋಗಿರ್ತೀರಿ. ಹಂಪಿ ಚೊಲೋ ಐತಿ ಅಂತ ಅದನ್ನು ನನ್ನ ಹೆಸರಿಗೆ ಮಾಡು ಅಂದರೆ ಆಗತೈತೇನು. ಸುಮ್ಮನೆ ನೋಡಬೇಕು ಬರಬೇಕು ಅಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.