ADVERTISEMENT

ನುಡಿ ಬೆಳಗು - 49 | ಅರಿವಿನ ಪಾತ್ರೆ, ಭಿಕ್ಷಾ ಪಾತ್ರೆ!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 22 ಅಕ್ಟೋಬರ್ 2024, 0:08 IST
Last Updated 22 ಅಕ್ಟೋಬರ್ 2024, 0:08 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಒಮ್ಮೆ ದೇಶದಲ್ಲಿ ಭೀಕರ ಬರಗಾಲ ಇತ್ತು. ಅದರ ನಡುವೆಯೇ ಬುದ್ಧ ಪ್ರವಚನ ಮಾಡುತ್ತಿದ್ದರು. ರಾಜರು, ಮಹಾರಾಜರು, ಶ್ರೀಮಂತರು ಎಲ್ಲಾ ಪ್ರವಚನ ಕೇಳಲು ಕುಳಿತಿದ್ದರು. ಆಗ ಬುದ್ಧ ‘ನಾಡಿಗೆಲ್ಲಾ ಬರಗಾಲ ಬಂದೈತಿ, ನಿಮ್ಮಲ್ಲಿ ಯಾರಾದರೂ ಮುಂದೆ ಬಂದು ಬರಗಾಲ ಕಳೆಯಲಿಕ್ಕೆ ಸಹಾಯ ಮಾಡ್ತೀರೇನು?’ ಎಂದು ಕೇಳಿದ. ಪ್ರವಚನ ಕೇಳುತ್ತಾ ಮುಂದೆ ಕುಳಿತಿದ್ದ ರಾಜರು, ಮಹಾರಾಜರು, ಶ್ರೀಮಂತರು ಯಾರೂ ಮುಂದೆ ಬರಲಿಲ್ಲ. ಹತ್ತು ವರ್ಷದ ಹೆಣ್ಣು ಮಗುವೊಂದು ಮುಂದೆ ಬಂತು. ಮೈಮೇಲೆ ಹರಿದ ಬಟ್ಟೆ, ಕೈಯೊಳಗೆ ಭಿಕ್ಷಾ ಪಾತ್ರೆ ಹಿಡಕೊಂಡಿತ್ತು. ಆ ಮಗುವಿಗೆ ತಂದೆಯೂ ಇರಲಿಲ್ಲ. ತಾಯಿಯೂ ಇರಲಿಲ್ಲ.

ಆ ಮಗು ಬುದ್ಧನ ಬಳಿಗೆ ಬಂದು, ‘ನಾನು ಈ ನಾಡಿನ ಬರಗಾಲವನ್ನು ಕಳೆಯಲು ಸಹಾಯ ಮಾಡ್ತೇನೆ’ ಎಂದಿತು. ಬುದ್ಧನಿಗೆ ಆಶ್ಚರ್ಯ ಆಯ್ತು. ‘ರಾಜ ಮಹಾರಾಜರೇ ಸುಮ್ಮನೆ ಕುಳಿತಾರ. ನಿನಗೆ ಅಪ್ಪ ಇಲ್ಲ, ಅಮ್ಮ ಇಲ್ಲ, 10 ವರ್ಷದ ಬಾಲಕಿ ನೀನು. ನಿನ್ನ ಕೈಯಲ್ಲಿ  ಭಿಕ್ಷಾ ಪಾತ್ರೆ ಇದೆ. ನೀನೇ ಭಿಕ್ಷಾ ಬೇಡ್ತಿ. ಅದನ್ನು ಹಿಡಕೊಂಡು ನೀನು ಈ ನಾಡಿನ ಬರವನ್ನು ಹ್ಯಾಗೆ ಕಳೀತಿ’ ಅಂತ ಕೇಳಿದ. ಅದಕ್ಕ ಆ ಮಗು, ‘ನಾನು ಭಿಕ್ಷುಕಿ ಇರಬಹುದು. ನನ್ನ ಕೈಯೊಳಗೆ ಇರುವ ಭಿಕ್ಷಾ ಪಾತ್ರೆ ಸಣ್ಣದು ಇರಬಹುದು. ಆದರೆ ಬರಬಿದ್ದ ಜನರಿಗೆ ಉಣಿಸಬೇಕು ಅನ್ನೋ ನನ್ನ ಹೃದಯದ ಪಾತ್ರೆ ಬಹಳ ದೊಡ್ಡದೈತಿ. ಅದಕ್ಕ ಬಂದೀನಿ ನಾನು’ ಅಂತ ಹೇಳಿತು.

ADVERTISEMENT

ನಮ್ಮ ಕೈಯೊಳಗೆ ಹಿಡಿದ ಭಿಕ್ಷಾ ಪಾತ್ರೆ ಸಣ್ಣದಿದ್ದರೂ ಪರವಾಗಿಲ್ಲ. ಹೃದಯದೊಳಗಿನ ಭಿಕ್ಷಾಪಾತ್ರೆ ಸಣ್ಣದಿರಬಾರದು. ಆ ಬಾಲಕಿ ಬುದ್ಧನ ಬಳಿ ಬಂದು ತನ್ನ ಕೈಯೊಳಗಿನ ಭಿಕ್ಷಾ ಪಾತ್ರೆ ಬುದ್ಧನ ಮುಂದಿಟ್ಟು ಬುದ್ಧನ ಕೈಯೊಳಗಿನ ಭಿಕ್ಷಾ ಪಾತ್ರೆ ತೆಗೆದುಕೊಂಡಳು. ‘ಯಾಕೆ ಹೀಗೆ ಮಾಡ್ತಿ’ ಎಂದು ಬುದ್ಧ ಕೇಳಿದ. ಅದಕ್ಕೆ ಬಾಲಕಿ, ‘ನನ್ನದು ಅನ್ನ ಬೇಡೋ ಭಿಕ್ಷಾ ಪಾತ್ರೆ. ನಿನ್ನ ಕೈಯೊಳಗಿನ ಭಿಕ್ಷಾ ಪಾತ್ರೆ ಐತಲ್ಲಾ, ಅದರೊಳಗೆ ಬೀಳಲು ಅನ್ನವೇ ಓಡಿಬರತೈತಿ. ಒಬ್ಬ ಭಿಕ್ಷುಕನ ಪಾತ್ರೆಗೂ ಒಬ್ಬ ಭಿಕ್ಕುವಿನ ಭಿಕ್ಷಾ ಪಾತ್ರೆಗೂ ವ್ಯತ್ಯಾಸ ಐತಿ. ನಿನ್ನ ಕೈಯೊಳಗಿನ ಭಿಕ್ಷಾ ಪಾತ್ರೆಯೊಳಗೆ ಎಷ್ಟು ಅನ್ನ ಐತಿ ಅಂದರ ಉಣ್ಣೋರೆ ಕಡಿಮೆ ಬಿದ್ದಾರ ಅಷ್ಟು ಐತಿ’ ಹೀಗೆ ಹೇಳಿದ ಬಾಲಕಿ ತನ್ನ ಭಿಕ್ಷಾ ಪಾತ್ರೆಯನ್ನು ತೆಗೆದುಕೊಂಡು ಬುದ್ಧನ ಭಿಕ್ಷಾಪಾತ್ರೆಯನ್ನು ಅವನಿಗೆ ಕೊಟ್ಟಳು. ‘ಬುದ್ಧನೇ ನಿನ್ನ ಭಿಕ್ಷಾಪಾತ್ರೆ ಅರಿವಿನ ಪಾತ್ರೆ, ಅದು ತಲೆಯನ್ನೂ ತುಂಬತೈತಿ, ಹೊಟ್ಟೆಯನ್ನೂ ತುಂಬತೈತಿ’ ಎಂದಳು.

ನಮ್ಮ ಹೃದಯದೊಳಗೆ ಇರುವ ಭಿಕ್ಷಾ ಪಾತ್ರೆ ದೊಡ್ಡದಿರಬೇಕು. ನಾವು ದೇವರ ಆಹ್ವಾನದ ಮೇರೆಗೆ ಇಲ್ಲಿಗೆ ಬಂದವರು. ಇಲ್ಲಿ ಎಲ್ಲರೂ ಕಲಾವಿದರು. ನಾನು ಸನ್ಯಾಸಿಯಾದರೂ ನಾನೊಬ್ಬ ಕಲಾವಿದ. ರಾಜಕಾರಣಿ, ಸರ್ಕಾರಿ ನೌಕರ, ಗೃಹಿಣಿ ಎಲ್ಲರೂ ಇಲ್ಲಿ ಕಲಾವಿದರೇ. ನಮ್ಮ ನಮ್ಮ ಹಾಡನ್ನು ಸರಿಯಾಗಿ ಹಾಡಬೇಕು. ಚಲೋ ಹಾಡಿದರೆ ಮುಂದಿನ ಬಾರಿಯೂ ನಮಗೆ ಆಮಂತ್ರಣ ಇರತೈತಿ. ಕೆಡಿಸಿದರೆ ಇದೇ ಕೊನೆ ಹಾಡು. ಇದು ನಂದಲ್ಲ, ನೀನು ಕೊಟ್ಟ ಪ್ರಸಾದ ಎಂದು ಬದುಕುವುದೇ ಜೀವನ್ಮುಕ್ತ ವ್ಯವಸ್ಥೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.