ADVERTISEMENT

ನುಡಿ ಬೆಳಗು - 50 | ಹುಟ್ಟು ಸಾವುಗಳ ಬೆಸುಗೆ ಜೀವನ!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 23 ಅಕ್ಟೋಬರ್ 2024, 0:23 IST
Last Updated 23 ಅಕ್ಟೋಬರ್ 2024, 0:23 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ನಮ್ಮೆಲ್ಲರ ಜೀವನದಲ್ಲಿ ನಮಗೆ ಅತ್ಯಂತ ಸಮೀಪವಾಗಿದ್ದು ಎಂದರೆ ಸಾವು. ಸಾವು ನಮ್ಮ ನೆರಳಿನಷ್ಟೇ ಸಮೀಪವಾಗಿರುತ್ತದೆ. ತಾಯಿಯ ಗರ್ಭದಿಂದ ಬಂದು ಭೂಗರ್ಭ ಸೇರುವವರೆಗೂ ಸಾವು ನಮ್ಮ ಜೊತೆಜೊತೆಯಾಗಿಯೇ ಇರುತ್ತದೆ. ಹುಟ್ಟಿನ ದಿನದಿಂದಲೇ ಜೀವನದ ಜೊತೆಗೆ ಸಾವೂ ಆರಂಭವಾಗಿದೆ. ಹುಟ್ಟು ಆಕಸ್ಮಿಕ ಘಟನೆಯಾಗಿರಬಹುದು, ಆದರೆ ಸಾವು ಕ್ಷಣಕ್ಷಣಕ್ಕೂ ನಮ್ಮ ಜೊತೆಯಲ್ಲೇ ಇರ್ತದೆ. ಹುಟ್ಟು ಸಾವು ಎರಡೂ ಬೇರ್ಪಡಿಸಲಾಗದಷ್ಟು ಬೆರೆತುಕೊಂಡಿವೆ. ಬಂಡಿಗೆ ಹೇಗೆ ಎರಡು ಚಕ್ರಗಳೋ
ಹಾಗೆ, ಹುಟ್ಟು ಸಾವು ಎಂಬ ಎರಡು ಚಕ್ರಗಳಿಂದ ನಡೆಯುವ ಬಂಡಿಗೆ ಜೀವನ ಅನ್ನುತ್ತಾರೆ. ನಮಗೆ ಅರಿವಿರಬಹುದು ಅಥವಾ ಇಲ್ಲದೇ ಇರಬಹುದು. ಆದರೆ ಸಾವು ನಮ್ಮ ಜೊತೆಗೇ ಇರುತ್ತದೆ.

ಒಂದು ಮಗುವಿಗೆ ಒಂದು ವರ್ಷ ತುಂಬಿದಾಗ ಹ್ಯಾಪಿ ಬರ್ತ್ ಡೇ ಆಚರಿಸುತ್ತೇವೆ. ಕೇಕ್ ತಂದು ದೀಪ ಹಚ್ಚಿಟ್ಟು ಹ್ಯಾಪಿ ಬರ್ತ್ ಡೇ ಅಂತ ಹಾಡಿ ಸಂತೋಷಪಡುತ್ತೇವೆ. ಎಲ್ಲ ಸಂಬಂಧಿಕರು, ಬೀಗರು, ಸ್ನೇಹಿತರು ಎಲ್ಲರನ್ನೂ ಕರೆದು ಬೀಗುತ್ತೇವೆ. ‘ನನ್ನ ಮಗ ಒಂದು ವರ್ಷ ದೊಡ್ಡವನಾದ’ ಅಂತ ಹೆಮ್ಮೆ ಪಡ್ತೀವಿ. ಆದರೆ, ಒಂದು ವರ್ಷ ದೊಡ್ಡವ ಆದ ಅನ್ನೋದು ವ್ಯಾವಹಾರಿಕ ಸತ್ಯ ಅಷ್ಟೆ. ಒಂದು ವರ್ಷ ಸಾವಿಗೆ ಹತ್ತಿರವಾದ ಅನ್ನೋದು ವಾಸ್ತವಿಕ ಸತ್ಯ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಸಾವನ್ನು ಬಿಟ್ಟು ಜೀವನ ಇಲ್ಲ, ಜೀವನ ಬಿಟ್ಟು ಸಾವಿಲ್ಲ. ಹುಟ್ಟು ಸಾವುಗಳ ಬೆಸುಗೆಯೇ ಜೀವನ.

ADVERTISEMENT

‘ಸಾವು ನನ್ನ ಪಾಕೇಟಿನಲ್ಲಿಯೇ ಇದೆ’ ಎನ್ನುವುದು ಮನುಷ್ಯನಿಗೆ ಗೊತ್ತಿದೆ. ಆದರೂ ಭಯ ಕಾಡುತ್ತದೆ. ಭಯ ಯಾಕೆ? ಮಗು ಹುಟ್ಟಿತು ಎಂದರೆ ಬಾಯಲ್ಲಿ ಸಕ್ಕರೆ ಹಾಕ್ತೀವಿ. ಸತ್ತ ಅಂದರೆ ಭಯ ಪಡ್ತೀವಿ ಯಾಕೆ? ಮನುಷ್ಯ ಸಾವಿಗೆ ಯಾಕೆ ಭಯ ಪಡ್ತಾನೆ ಎಂದರೆ ತನ್ನ ದೇಹವೂ ಸೇರಿದಂತೆ ಗಳಿಸಿದ ಆಸ್ತಿ, ಅಧಿಕಾರ, ಕೀರ್ತಿ ಎಲ್ಲವೂ ನಂದು ಎಂದು ಭ್ರಮಿಸಿದ್ದಾನೆ. ಅವೆಲ್ಲ ಕೈಬಿಟ್ಟು ಹೋಗತೈತಿ ಅಂತ ಅವನಿಗೆ ಸಾವೆಂದರೆ ಭಯ ಶುರುವಾಗತೈತಿ. ನನ್ನದು ಅಂತ ಯಾವುದೆಲ್ಲಾ ಐತಿ ಅದನ್ನೆಲ್ಲಾ ಸಾವು ಕಸಿದುಕೊಂಡು ಹೋಗತೈತಿ. ಅದಕ್ಕೇ ಭಯ. ಬಹಳ ಶ್ರೀಮಂತರಿದ್ದವರು ತಾವು ಗಳಿಸಿದ್ದನ್ನು ಸಮಾಧಿ ಒಳಗ
ಇಟ್ಟುಕೊಂಡಿದ್ದಾರೇನು? ಏನೂ ಇಲ್ಲ. ಅಲ್ಲಿ ಹೋದಾಗ ಅದೇ ಒಂದು ಎರೆಮಣ್ಣಿನ ಕರಿಹೆಂಟಿ, ಅದರ ಮ್ಯಾಲೆ ಕಾರಿಕಂಟಿ ಕುಣ್ಯಾಗ ನೀನು ಒಬ್ಬಂಟಿ. ಶವದ ಮೇಲೆ ಹೊದಿಸಿದ ಬಟ್ಟೆಗೆ ಜೇಬೂ ಇಲ್ಲ. ಒಳಗೆ ಏನಾದರೂ ಇಟ್ಟುಕೊಳ್ಳೋಣ ಅಂದರೆ, ತಿಜೋರಿ ಇಡೋಣ ಅಂದರೆ ಅಲ್ಲಿ ಜಾಗವೂ ಇಲ್ಲ. ನಿನ್ನ ಕಾಲು ಮಡಚಿ, ಗೋಣು ಮಡಚಿ ಒಳಗೆ ಇಟ್ಟಾರ. ಯಾವುದು ನನ್ನದು ಎಂದು ನೀನು ನಂಬಿದ್ದೆ ಅದೆಲ್ಲವನ್ನೂ ಸಾವು ಅಳಿಸಿ ಹಾಕಿಬಿಟ್ಟಿದೆ.

ಸಮುದ್ರದ ದಂಡೆಯ ಮೇಲೆ ಮಕ್ಕಳು ಮರಳಿನ ಮನೆ ಕಟ್ಟಿ ಸಂತೋಷ ಪಡುತ್ತಾರೆ. ಆಗಲೇ ದೊಡ್ಡ ತೆರೆ ಬಂದು ಅದನ್ನು ಅಳಿಸಿ ಹೋಗುತ್ತದೆ. ಹಾಗೆಯೇ ನಂದು ಹೊಲ, ಮನೆ, ಅಧಿಕಾರ, ಕೀರ್ತಿ ಎಂದು ಸಂತೋಷಪಡೋದರೊಳಗೆ ಸಾವು ಎಂಬ ತೆರೆ ಬಂದು ಎಲ್ಲವನ್ನೂ ಅಳಿಸಿ ಹಾಕಿಬಿಡುತ್ತದೆ. ಇದು ಜೀವನದ ಸತ್ಯ. ಇದನ್ನು ಅರ್ಥ ಮಾಡಿಕೊಳ್ಳಬೇಕು ಮನುಷ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.