ADVERTISEMENT

ನುಡಿ ಬೆಳಗು | ಗೌರವವನ್ನು ಗಳಿಸಿಕೊಳ್ಳಬೇಕು

ದೀಪಾ ಹಿರೇಗುತ್ತಿ
Published 6 ಮಾರ್ಚ್ 2024, 20:46 IST
Last Updated 6 ಮಾರ್ಚ್ 2024, 20:46 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಒಂದೂರಿನಲ್ಲಿ ಕ್ರೂರಿಯಾದ ರಾಜನೊಬ್ಬನಿದ್ದ. ತನ್ನನ್ನು ವಿರೋಧಿಸಿದವರಿಗೆ ಹಣ ಮತ್ತು ಅಧಿಕಾರದ ಬಲದಿಂದ ತೊಂದರೆ ಕೊಡುತ್ತಿದ್ದ. ಈ ಮೂರ್ಖನ ಸಹವಾಸ ಯಾರಿಗೆ ಬೇಕೆಂದು ಜನರು ಅವನನ್ನು ಎದುರು ಹಾಕಿಕೊಳ್ಳಲು ಹೋಗುತ್ತಿರಲಿಲ್ಲ. ಅದನ್ನೇ ಆತ ತಪ್ಪಾಗಿ ತಿಳಿದುಕೊಂಡು ಎಲ್ಲರೂ ತನ್ನನ್ನು ಬಹಳ ಗೌರವಿಸುತ್ತಾರೆಂದು ಗರ್ವ ಪಡುತ್ತಿದ್ದ.

ಆ ರಾಜನ ಹತ್ತಿರ ಒಂದು ನಾಯಿಯಿತ್ತು. ಅದನ್ನು ಕಂಡರೆ ಆತನಿಗೆ ಬಹಳ ಪ್ರೀತಿ. ವಿಹಾರಕ್ಕೆ ಹೋಗುವಾಗ ಆ ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದ. ಊಟ ಮಾಡುವಾಗಲೂ ಪಕ್ಕದಲ್ಲೇ, ದರ್ಬಾರು ನಡೆಸಬೇಕಾದರೂ ಜತೆಯಲ್ಲೇ... ಜನರಿಗೂ ಸಿಕ್ಕದ ವೈಭವ ಆ ನಾಯಿಯದಾಗಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಖಾಯಿಲೆ ಬಿದ್ದು ಆ ನಾಯಿ ಸತ್ತುಹೋಯಿತು. ದುಃಖಿತನಾದ
ರಾಜ ನಾಯಿಯ ಶವಸಂಸ್ಕಾರಕ್ಕೆ ಭರ್ಜರಿ ಏರ್ಪಾಡು ಮಾಡಿದ. ಕಾರ್ಯಕ್ರಮದಲ್ಲಿ ರಾಜಧಾನಿಯ ಎಲ್ಲ ಜನರೂ ಹಾಜರಿದ್ದರು. ಅದನ್ನು ನೋಡಿ ರಾಜ, ‘ಅಬ್ಬಾ, ಜನರೆಲ್ಲ ನನ್ನನ್ನು ಎಷ್ಟು ಗೌರವಿಸುತ್ತಾರೆ, ನಾನೆಷ್ಟು ಜನಪ್ರಿಯ ಅರಸ’ ಎಂದು ಹೆಮ್ಮೆಪಟ್ಟ.

ADVERTISEMENT

ಕೆಲವು ದಿನಗಳ ನಂತರ ಆ ರಾಜ ಕುದುರೆ ಸವಾರಿ ಮಾಡುವಾಗ ಬಿದ್ದು ಸಾವನ್ನಪ್ಪಿದ. ಆದರೆ ಅವನ ಅಂತಿಮಸಂಸ್ಕಾರದಲ್ಲಿ ಅರಮನೆಯ ಕೆಲವು ಜನರು ಮತ್ತು ಸೇವಕರನ್ನು ಬಿಟ್ಟರೆ ಬೇರೆ ಯಾರೊಬ್ಬರೂ ಭಾಗವಹಿಸಲಿಲ್ಲ.

ಈ ಪುಟ್ಟ ಕಥೆ ನೀಡುವ ಸಂದೇಶ ಅಮೂಲ್ಯವಾದದ್ದು. ಗೌರವವೆನ್ನುವುದು ಯೋಗ್ಯತೆಯಿಂದ ಗಳಿಸಬೇಕಾದುದು. ಅದನ್ನು ಸಂಪತ್ತಿನಿಂದಲೋ, ಅಧಿಕಾರದಿಂದಲೋ, ಒತ್ತಾಯದಿಂದಲೋ ಅಥವಾ ಹಿಂಸೆಯಿಂದಲೋ ಪಡೆಯಲಾಗದು. ಹೆದರಿಕೆಯಿಂದ ಜನರು ತೋರುವ ಸುಳ್ಳು ಗೌರವವನ್ನೇ ತಪ್ಪಾಗಿ ಅರ್ಥ ಮಾಡಿಕೊಂಡು ತಮ್ಮನ್ನು ತಾವು ಮಹಾನ್ ಎಂದುಕೊಳ್ಳುವ ಈ ಮೂರ್ಖ ರಾಜನಂತಹ ವ್ಯಕ್ತಿಗಳಿಗೇನು ಕಮ್ಮಿಯಿಲ್ಲ. ಏಕೆಂದರೆ ಗೌರವವೆನ್ನುವುದು ಖರೀದಿಸಬಹುದಾದ ವಸ್ತುವಲ್ಲ. ಸಂಪತ್ತು, ಅಧಿಕಾರದಿಂದ ಹೊಗಳಿಕೆಯನ್ನು ಪಡೆಯಬಹುದು, ತೋರಿಕೆಯ ಗೌರವವನ್ನೂ ಪಡೆಯಬಹುದು. ಆದರೆ ನಿಜವಾದ ಗೌರವ ಸಿಗುತ್ತದೆ ಎಂದು ಹೇಳಲಾಗದು.

ಹಣ, ಅಧಿಕಾರ ಇರಲಿ ಇಲ್ಲದಿರಲಿ ಸದಾ ತಾವು ಎತ್ತಿ ಹಿಡಿಯುವ ಮಾನವೀಯ ಮೌಲ್ಯಗಳಿಂದ, ಎದೆಯಲ್ಲಿ ಜಿನುಗುವ ಕರುಣೆಯಿಂದ, ಇತರರನ್ನೂ ತಮ್ಮಂತೆ ಕಾಣುವ ಮನೋಭಾವದಿಂದ, ನುಡಿದಂತೆ ನಡೆವ ಸ್ವಭಾವದಿಂದ, ತನ್ನನ್ನು ತಾನು ಹೊಗಳಿಕೊಳ್ಳದ ವ್ಯಕ್ತಿತ್ವದಿಂದ, ಸಮಾಜಮುಖಿ ಕೆಲಸಗಳಿಂದ, ಪ್ರಾಮಾಣಿಕತೆಯಿಂದ, ಇತರರ ಅಭಿಪ್ರಾಯ ಹಾಗೂ ಭಾವನೆಗಳನ್ನು ಗೌರವಿಸುವುದರಿಂದ, ಜವಾಬ್ದಾರಿಯನ್ನು ನಿರ್ವಹಿಸುವ ಗುಣದಿಂದ ಮತ್ತು ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ದೊಡ್ಡತನದಂತಹ ಹಲವಾರು ಸಂಗತಿಗಳಿಂದ ಸಿಗುವ ಗೌರವ ನೈಜ ಗೌರವ. ಇಂತಹ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.