ADVERTISEMENT

ನುಡಿ ಬೆಳಗು | ಇವರು ಕೂಡ ಬದಲಾದರು

ಕಲೀಮ್ ಉಲ್ಲಾ
Published 6 ಆಗಸ್ಟ್ 2024, 23:35 IST
Last Updated 6 ಆಗಸ್ಟ್ 2024, 23:35 IST
   

ತನ್ನ ಮಾತು ಮತ್ತು ನಡತೆಯಿಂದ ಬುದ್ಧ ಸಾವಿರಾರು ಶಿಷ್ಯರನ್ನು ಸಂಪಾದಿಸಿದ್ದ. ಆದರೆ, ಬುದ್ಧನ ಪ್ರಗತಿ ಕಂಡು ಸಹಿಸಲಾಗದೆ ಅಸೂಯೆ ಪಡುವ ಜನರೂ ಒಳಗಿದ್ದರು. ಇವರಲ್ಲಿ ದೇವದತ್ತ ಕೂಡ ಒಬ್ಬ. ಬಾಲ್ಯದಿಂದ ಬುದ್ಧನ ಜೊತೆ ಬೆಳೆದ ಈತ ಸಂಬಂಧಿಕ. ಜೊತೆಗೆ ಈಗ ಶಿಷ್ಯ ಕೂಡ ಹೌದು. ಇವನೊಳಗಿನ ದ್ವೇಷ, ಸಿಟ್ಟು, ಹೊಟ್ಟೆಕಿಚ್ಚು ದಿನದಿನವೂ ಉಲ್ಭಣ ಆಗತೊಡಗಿತ್ತು. ಕೊನೆಗೆ ಬುದ್ಧನ ಸರಿಸಿ ತಾನೇ ಸಂಘಕ್ಕೆ ಅಧಿಪತಿಯಾಗಬೇಕೆಂದು ಹಪಾಹಪಿಸತೊಡಗಿದ.

ಒಂದು ದಿನ ಸಭೆಯಲ್ಲಿ ಎದ್ದು ನಿಂತು ‘ದೇವ ತಮಗೆ ವಯಸ್ಸಾಗುತ್ತಿದೆ. ತಾವು ವಿಶ್ರಾಂತಿಗೆ ಸರಿದು ನನಗೆ ತಮ್ಮ ಸ್ಥಾನವನ್ನು ಕೊಡಿ’ ಎಂದು ಆಗ್ರಹಿಸಿದ. ದೇವದತ್ತನಿಗೆ ತನ್ನ ಸ್ಥಾನವನ್ನು ಅರ್ಪಿಸಿದರೆ ಸಂಘವು ನಾಶವಾಗುತ್ತದೆ ಎಂಬುದು ಬುದ್ಧನಿಗೆ ತಿಳಿದಿತ್ತು. ಹೀಗಾಗಿ ಅವನು ನಯವಾಗಿ ತಿರಸ್ಕರಿಸಿದ. ಇದರಿಂದ ರೊಚ್ಚಿಗೆದ್ದ ದೇವದತ್ತ ಬುದ್ಧನ ಕೊಲ್ಲುವ ಉಪಾಯ ಹೂಡಿದ. ಬಿಂಬಸಾರನ ಮಗ ಅಜಾತಶತ್ರುವನನ್ನು ಕಂಡು ‘ನೀನು ನಿನ್ನ ತಂದೆಯನ್ನು ಕೊಂದು ರಾಜನಾಗು. ನಾನು ಬುದ್ಧನನ್ನು ಮುಗಿಸಿ ನಾನೇ ಬುದ್ಧನಾಗುತ್ತೇನೆಂದು’ ಪಿತೂರಿ ಹೆಣೆದ. ಅಜಾತಶತ್ರು ಈ ಮಾತನ್ನು ಒಪ್ಪಿ ತನ್ನ ತಂದೆಯನ್ನು ಸೆರೆಯಲ್ಲಿಟ್ಟು ಕೊಂದು ಹಾಕಿ ತಾನೇ ರಾಜನಾದ. ಅಜಾತಶ್ರುವಿನ ಸಹಾಯ ಪಡೆದು ಬುದ್ಧನ ಕೊಲ್ಲಲು ದೇವದತ್ತ ಹದಿನಾರು ಜನ ನುರಿತ ಕೊಲೆಗಡುಗರನ್ನು ಕಳಿಸಿದ. ಆದರೆ ಆ ಕಟುಕರು ಬುದ್ಧನ ಪ್ರೇಮದ ಭೋದನೆಗಳನ್ನು ಕೇಳಿ ಬದಲಾಗಿ ಹೋದರು.

ಮತ್ತೊಮ್ಮೆ ದೇವದತ್ತ ಮದವೇರಿದ ನಾಲಾಗಿರಿ ಎಂಬ ಆನೆಗೆ ಹೆಂಡ ಕುಡಿಸಿ, ಅದಕ್ಕೆ ಬಡಿದು ಹಿಂಸಿಸಿ ಬುದ್ದನ ಮೇಲೆ ನುಗ್ಗಿಸಿದ. ಆಗಲೂ ಭಿಕ್ಷುಗಳ ಸಹಾಯದಿಂದ ಬುದ್ಧ ಉಳಿದುಬಿಟ್ಟ. ನಂತರ ದೇವದತ್ತ ಸಂಘದ ಒಳಗಿದ್ದು ಅನೇಕ ಭಿಕ್ಷುಗಳಿಗೆ ದುರ್ಬುದ್ಧಿ ಬೋಧಿಸಿ ಐನೂರು ಭಿಕ್ಷುಗಳನ್ನು ಎತ್ತಿಕಟ್ಟಿದ. ಅವರೆಲ್ಲಾ ದೇವದತ್ತನ ಅನುಯಾಯಿಗಳಾದರು. ಸಂಘವು ಒಡೆದು ಇಬ್ಬಾಗವಾಯಿತು.

ADVERTISEMENT

ಬುದ್ಧ ಧೃತಿಗೆಡಲಿಲ್ಲ. ಅವರೆಲ್ಲಾ ಹೊರಗೆ ಹೋಗಿ ತಮ್ಮದೇ ಪ್ರತ್ಯೇಕ ಗುಂಪು ರಚಿಸಿಕೊಂಡರು. ನಂತರದ ದಿನಗಳಲ್ಲಿ ಅವರಿಗೆಲ್ಲಾ ತಮ್ಮ ತಪ್ಪಿನ ಅರಿವಾಗಿ ದೇವದತ್ತನ ಸಖ್ಯ ತೊರೆದು ಹಿಂತಿರುಗಿ ಬಂದರು. ಬುದ್ಧ ಮತ್ತೆ ಅವರನ್ನೆಲ್ಲಾ ಮನ್ನಿಸಿ ವಾಪಸ್‌ ಕರೆದುಕೊಂಡ. ದೇವದತ್ತನನ್ನೂ ಕ್ಷಮಿಸಿ ಆಶೀರ್ವದಿಸಿದ.

ಒಂದು ದಿನ ಅಜಾತಶತ್ರುವಿನ ಪುಟ್ಟ ಮಗುವಿನ ಕೈ ಬೆರಳಿಗೆ ಹುಣ್ಣಾಗಿತ್ತು. ಮಗು ನೋವಿನಿಂದ ಅಳುತ್ತಿತ್ತು. ಅಜಾತಶತ್ರು ಮೃದು ಮಾತುಗಳಿಂದ ಮಗುವನ್ನು ಸಂತೈಸುತ್ತಿದ್ದ. ಈ ದೃಶ್ಯ ಕಂಡ ಅಜಾತಶತ್ರುವಿನ ತಾಯಿ ‘ಮಗು. ನಿನ್ನ ತಂದೆ ಕೂಡ ಚಿಕ್ಕಂದಿನಲ್ಲಿ ನಿನ್ನ ಹೀಗೆ ಮುದ್ದಿಸುತ್ತಿದ್ದ’ ಎಂದಳು. ಈ ಮಾತು ಕೇಳಿ ಅಜಾತಶತ್ರುವಿನ ಮನಸ್ಸು ಬೆಂದು ಹೋಯಿತು. ಪಶ್ಚಾತ್ತಾಪದಿಂದ ಕಣ್ಣೀರು ಉಕ್ಕಿ ಬಂತು. ನೆಮ್ಮದಿಗೆ ನೇರ ಬುದ್ಧನ ಬಳಿ ಬಂದ. ಆಗ ಬುದ್ಧ ‘ಮಾಡಿದ ತಪ್ಪು ಒಪ್ಪಿಕೊಳ್ಳುವುದೇ ನಿಜವಾದ ಪ್ರಾಯಶ್ಚಿತ್ತ. ನಿನ್ನ ಮನಸ್ಸನ್ನು ಸ್ತಿಮಿತದಲ್ಲಿ ಇಟ್ಟುಕೊಂಡರೆ ನೀನು ಮತ್ತೆಂದೂ ಪಾಪದ ಕೆಲಸಗಳನ್ನು ಮಾಡುವುದಿಲ್ಲ. ಸಕಲರಿಗೂ ಒಳಿತಾಗುವ ಕೆಲಸಗಳನ್ನು ಹುಡುಕಿ ಮಾಡುತ್ತಾ ಹೋಗು. ಅವರೆಲ್ಲರ ಕೃತಜ್ಞತೆಯ ನಗುವಲ್ಲಿ ನಿನ್ನ ಶಾಂತಿ ಅಡಗಿರುತ್ತದೆ’ ಎಂದು ಶಾಂತ ಸ್ವರದಲ್ಲಿ ಉತ್ತರಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.